ವರದಿ ಮತ್ತು ಫೋಟೋ : ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಚಿತ್ರದುರ್ಗ, (ಅ.29): ನಾಲ್ಕು ಗೋಡೆಗಳ ಮಧ್ಯೆ ಪ್ರಯೋಗಾಲಯಕ್ಕೆ ಮೀಸಲಾಗಿರುವ ವಿಜ್ಞಾನವನ್ನು ಗೋಡೆ ರಹಿತ ಸಮಾಜಕ್ಕೆ ತೆಗೆದುಕೊಂಡು ಹೋಗಿ ಜನರಲ್ಲಿ ಮೌಢ್ಯತೆ ವಿರುದ್ದ ಜಾಗೃತಿ ಮೂಡಿಸುವುದೇ ಜನವಿಜ್ಞಾನ ಚಳುವಳಿಯ ಮುಖ್ಯ ಗುರಿ ಎಂದು ಸಂಸ್ಕೃತಿ ಚಿಂತಕ ಡಾ.ಜಿ.ಎನ್.ಮಲ್ಲಿಕಾರ್ಜುನಪ್ಪ ತಿಳಿಸಿದರು.
ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಜಿಲ್ಲಾ ಸಮಿತಿಯಿಂದ ವಿದ್ಯಾವಿಕಾಸ ಶಾಲೆಯಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ರಾಜ್ಯ ಮಟ್ಟದ ಜನವಿಜ್ಞಾನ ಚಳುವಳಿ ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿ ಉಪನ್ಯಾಸ ನೀಡಿದರು.
ಶ್ರೀಮಂತರು, ಪುರೋಹಿತಶಾಹಿಗಳು, ಬಂಡವಾಳವಿರುವವರು, ಅಧಿಕಾರದ ಪ್ರಭಾವ ಬೀರುವ ಶಕ್ತಿಯುಳ್ಳವರು ಜನಸಾಮಾನ್ಯರ ಮೇಲೆ ಮೌಢ್ಯತೆ ಹೇರುತ್ತಿರುವುದರಿಂದ ಮೂಢನಂಬಿಕೆಗಳು ಇನ್ನು ಜೀವಂತವಾಗಿವೆ. ಯಾವುದೇ ಒಂದು ಆಚರಣೆ ಅನುಕರಣೆಯಿಂದ ಬಂದಿದೆ. ಧಾರ್ಮಿಕ ವ್ಯಕ್ತಿಗಳ ಸಣ್ಣತನ ಜನಸಾಮಾನ್ಯರ ಮನಸ್ಸನ್ನು ಕಲುಷಿತಗೊಳಿಸುತ್ತಿವೆ. ವಿಜ್ಞಾನ ಪ್ರಯೋಗಕ್ಕೆ ಸೀಮಿತವಾಗಿದೆಯೇ ವಿನಃ ಜನಸಾಮಾನ್ಯರ ಬದುಕಿಗಲ್ಲ ಎಂದು ವಿಷಾಧಿಸಿದರು.
ಅಂತರಂಗದಲ್ಲಿ ಆಗುವ ಚಲನಗಳನ್ನು ಸತ್ಯವಾಗಿ ಬಹಿರಂಗಪಡಿಸುವುದೇ ಜನವಿಜ್ಞಾನ ಚಳುವಳಿ. ಮೌಢ್ಯವನ್ನು ಬಿತ್ತುವವರು ಸುಲಭವಾಗಿ ಅಮಾಯಕರನ್ನು ಗುರಿಯಾಗಿಸಿಕೊಳ್ಳುತ್ತಿದ್ದಾರೆ.
ಸಮಾಜದ ಒಳಗಿರುವ ಕೆನೆಪದರಗಳೇ ಜನಸಾಮಾನ್ಯರಲ್ಲಿನ ಮೌಢ್ಯಕ್ಕೆ ಕಾರಣ. ಭಯದಿಂದ ಮೌಢ್ಯಗಳು ಹುಟ್ಟುತ್ತವೆ. ಧಾರ್ಮಿಕ ನೆಲೆಗಳು ಮೌಢ್ಯಗಳನ್ನು ಬಿತ್ತುವ ಮನಸ್ಸುಗಳಿಗೆ ಸ್ವಾರ್ಥವಿದೆ. ವಿಜ್ಞಾನ-ತಂತ್ರಜ್ಞಾನ ಎಷ್ಠೆ ಬೆಳೆದರೂ ಮೌಢ್ಯ ಇನ್ನು ಹೋಗಿಲ್ಲ ಎನ್ನುವುದೇ ಬೇಸರದ ಸಂಗತಿ ಎಂದು ಹೇಳಿದರು.
ಮೌಢ್ಯವನ್ನು ಉದ್ಯೋಗವಾಗಿ ಪರಿವರ್ತಿಸಿಕೊಂಡು ಆರ್ಥಿಕ ನೆಲೆಗಟ್ಟನ್ನು ಕಂಡುಕೊಳ್ಳುವವರು ಎಲ್ಲಿಯವರೆಗೂ ಇರುತ್ತಾರೋ ಅಲ್ಲಿಯತನಕ ಮೂಢನಂಬಿಕೆಗಳಿಗೆ ಬಲಿಯಾಗುವವರು ಕಮ್ಮಿಯಾಗುವುದಿಲ್ಲ. ನಂಬಿಕೆಗಳ ನಡುವೆ ಸಂಘರ್ಷವಿದೆ. ಸಂದಿಗ್ದ ಸವಾಲುಗಳನ್ನು ನಿರ್ವಹಿಸುವ ಕೌಶಲ್ಯವನ್ನು ಮಕ್ಕಳಿಗೆ ಕಲಿಸುವುದೇ ನಿಜವಾದ ಜನವಿಜ್ಞಾನ ಚಳುವಳಿ. ವಿಜ್ಞಾನ ಸರ್ವಕಾಲಿಕ ಸತ್ಯ. ಮೌಢ್ಯ ಆ ಕ್ಷಣದ ಸತ್ಯ. ವೈಚಾರಿಕ ಪ್ರಜ್ಞೆ ಬೆಳೆಸಿಕೊಳ್ಳಲು ಹೆಚ್ಚು ಓದಬೇಕು. ಶಿಕ್ಷಕರಿಂದ ಮಾತ್ರ ಸಮಾಜದಲ್ಲಿ ಪರಿಪೂರ್ಣ ಬದಲಾವಣೆ ತರಲು ಸಾಧ್ಯ ಎಂದು ಬಿ.ಇ.ಡಿ.ಪ್ರಶಿಕ್ಷಣಾರ್ಥಿಗಳಿಗೆ ತಿಳಿಸಿದರು.
ವೈಜ್ಞಾನಿಕ ಮನೋಭಾವವನ್ನು ಚಳುವಳಿ ನೆಲೆಯಲ್ಲಿ ತೆಗೆದುಕೊಂಡು ಹೋಗಬೇಕಾಗಿರುವುದರಿಂದ ಶಿಕ್ಷಕರು ವೈಜ್ಞಾನಿಕವಾಗಿ ಸುಶಿಕ್ಷಿತರಾಗಬೇಕೆಂದರು.
ಡಾ.ರಹಮತ್‍ವುಲ್ಲಾ ವೇದಿಕೆಯಲ್ಲಿದ್ದರು.
ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಜಿಲ್ಲಾ ಸಮಿತಿ ಪದಾಧಿಕಾರಿಗಳು, ಸದಸ್ಯರುಗಳು, ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯರುಗಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.