ನಟಿ ನಯನತಾರಾ ಹಾಗೂ ನಿರ್ದೇಶಕ ವಿಘ್ನೇಶ್ ಇತ್ತಿಚೆಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಮದುವೆಯಾದ ನಾಲ್ಕೆ ತಿಂಗಳಿಗೆ ಬಾಡಿಗೆ ತಾಯ್ತನದ ಮೂಲಕ ಅವಳಿ ಮಕ್ಕಳನ್ನು ಪಡೆದಿದ್ದರು. ಇದು ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ಈ ವಿವಾದ ಬಗೆಹರಿಸುವುದಕ್ಕೆ ತಮಿಳು ನಾಡು ಸರ್ಕಾರ ಮಧ್ಯೆ ಬರಬೇಕಾಗಿತ್ತು. ಆದರೆ ಇದೀಗ ಎಲ್ಲವೂ ಸುಖಾಂತ್ಯವಾಗಿದೆ. ಸರ್ಕಾರದಿಂದ ಸ್ಟಾರ್ ದಂಪತಿಗೆ ಕ್ಲೀನ್ ಚಿಟ್ ಸಿಕ್ಕಿದೆ.
ನಯನತಾರಾ ಹಾಗೂ ವಿಘ್ನೇಶ್ ವಿಚಾರಣೆಯಲ್ಲಿ ಹಲವು ವಿಚಾರಗಳನ್ನು ತಿಳಿಸಿದ್ದಾರೆ. ಸಮಿತಿಯ ವರದಿಯಂತೆ 2016ರ ಮಾರ್ಚ್ 11ರಂದು ಈ ದಂಪತಿ ಮದುವೆಯಾಗಿರುವ ಅಫಿಡವಿಟ್ ಸಲ್ಲಿಕೆಯಾಗಿದೆ. ಬಳಿಕ 2021ಕ್ಕೆ ನಯನತಾರಾ ಫ್ಯಾಮಿಲಿ ವೈದ್ಯರ ಸಲಹೆ ಮೇರೆಗೆ ಸರೋಗಸಿ ಪ್ರಕ್ರಿಯೆ ನಡೆದಿದೆ ಎನ್ನಲಾಗಿದೆ. ಆದರೆ ನಯನತಾರಾ ಫ್ಯಾಮಿಲಿ ಡಾಕ್ಟರ್ ಅನ್ನು ಅಧಿಕಾರಿಗಳಿಂದ ಸಂಪರ್ಕಿಸಲು ಸಾಧ್ಯವಾಗಿಲ್ಲ. ಕಾರಣ ಆ ವೈದ್ಯರು ವಿದೇಶದಲ್ಲಿರುವುದರಿಂದ ಫೋನ್ ಸಂಪರ್ಕಕ್ಕೂ ಸಿಗುತ್ತಿಲ್ಲ ಎಂಬುದನ್ನು ಸಮಿತಿ ತನ್ನ ವರದಿಯಲ್ಲಿ ತಿಳಿಸಿದೆ.
ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಸರ್ಕಾರದ ನಿಬಂಧನೆಗಳಿಗೆ ಅನುಗುಣವಾಗಿಯೇ ನಯನತಾರಾ ದಂಪತಿ ಮಕ್ಕಳನ್ನು ಪಡೆದಿದ್ದಾರೆ ಎಂಬುದು ಸಮಿತಿ ನೀಡಿದ ವರದಿಯಲ್ಲಿ ತಿಳಿಸಿದೆ. ಹೀಗಾಗಿ ಸರ್ಕಾರ ಅವರಿಗೆ ಕ್ಲೀನ್ ಚಿಟ್ ನೀಡಿದೆ ಎನ್ನಲಾಗಿದೆ.