ಸುದ್ದಿಒನ್ ವೆಬ್ ಡೆಸ್ಕ್
ನವದೆಹಲಿ,(ಅ.26) : ನಾನು
ಸುಮಾರು 23 ವರ್ಷಗಳ ಕಾಲ ಕಾಂಗ್ರೆಸ್ ಅಧ್ಯಕ್ಷೆಯಾಗಿ ಈ ಹುದ್ದೆಯಲ್ಲಿದ್ದೆ, ಮಲ್ಲಿಕಾರ್ಜುನ ಖರ್ಗೆ ಅವರು ಅಧಿಕೃತವಾಗಿ ಇಂದು ಅಧಿಕಾರ ವಹಿಸಿಕೊಂಡಿದ್ದರಿಂದ ನನಗೆ ನಿರಾಳವಾಗಿದೆ ಎಂದು ಸೋನಿಯಾ ಗಾಂಧಿ ಹೇಳಿದ್ದಾರೆ.
“ನಾನು ನನ್ನ ಕರ್ತವ್ಯವನ್ನು ನನ್ನ ಕೈಲಾದಷ್ಟು ಮಾಡಿದ್ದೇನೆ. ಇಂದು ನಾನು ಈ ಜವಾಬ್ದಾರಿಯಿಂದ ಮುಕ್ತಳಾಗುತ್ತಿದ್ದೇನೆ. ನನ್ನ ಭುಜದ ಮೇಲಿನ ಭಾರ ಈಗ ಹಗುರವಾಗಿದೆ ಇದರಿಂದ ನನಗೆ ಸಮಾಧಾನವಾಗಿದೆ ಎಂದು ಅಧಿಕಾರ ಹಸ್ತಾಂತರ ಕಾರ್ಯಕ್ರಮದಲ್ಲಿ ಸೋನಿಯಾ ಗಾಂಧಿ ಹೇಳಿದರು.
ಇದೊಂದು ದೊಡ್ಡ ಜವಾಬ್ದಾರಿಯಾಗಿದ್ದು, ಈಗ ಮಲ್ಲಿಕಾರ್ಜುನ ಖರ್ಗೆ ಅವರ ಮೇಲೆ ಈ ಜವಾಬ್ದಾರಿಯಿದೆ. ದೇಶದ ಪ್ರಜಾಪ್ರಭುತ್ವ ಮೌಲ್ಯಗಳ ಬಿಕ್ಕಟ್ಟು ಇಂದಿನ ದೊಡ್ಡ ಸವಾಲಾಗಿದೆ. ಕಾಂಗ್ರೆಸ್ ಅನೇಕ ಸವಾಲುಗಳನ್ನು ಎದುರಿಸುತ್ತಿದೆ. ನಾವು ಅದನ್ನು ಹೇಗೆ ಎದುರಿಸುತ್ತೇವೆ ಎಂಬುದೇ ಸವಾಲಾಗಿದೆ. ಸಂಪೂರ್ಣ ಶಕ್ತಿ ಮತ್ತು ಒಗ್ಗಟ್ಟಿನಿಂದ ನಾವು ಮುನ್ನಡೆಯಬೇಕು ಮತ್ತು ಈ ದಿಸೆಯಲ್ಲಿ ನಾವು ಯಶಸ್ವಿಯಾಗಬೇಕು” ಎಂದು ಅವರು ಹೇಳಿದರು.
ಕಳೆದ ವಾರ ನಡೆದ ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಯಲ್ಲಿ 80 ವರ್ಷದ ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮ ಪ್ರತಿಸ್ಪರ್ಧಿ ಶಶಿ ತರೂರ್ ಅವರನ್ನು ಸೋಲಿಸಿ ಭರ್ಜರಿ ಗೆಲುವು ಸಾಧಿಸಿದ್ದರು.
ಖರ್ಗೆ ಅವರು ಗಾಂಧಿ ಕುಟುಂಬದ ಅನುಮೋದಿತ ಅಭ್ಯರ್ಥಿಯಾಗಿ” ಗೆಲ್ಲುವುದು ಖಚಿತ ಎಂದು ಪ್ರತಿಪಕ್ಷಗಳು ಟೀಕಿಸಿದ್ದವು.
ನಂತರ ಮಾತನಾಡಿದ ಖರ್ಗೆ, ಅವರು ಸೋನಿಯಾ ಗಾಂಧಿಯವರ ನಾಯಕತ್ವವನ್ನು ಶ್ಲಾಘಿಸಿದರು. ಸೋನಿಯಾ ಗಾಂಧಿ ಯಾವಾಗಲೂ ನಿಷ್ಠಾವಂತರಾಗಿದ್ದರು. ಕಾಂಗ್ರೆಸ್ ಪಕ್ಷಕ್ಕೆ ಅವರು ನೀಡಿದ ಕೊಡುಗೆ ಅಪಾರ ಮತ್ತು ಅಪ್ರತಿಮವಾದದ್ದು. ಅವರ ನಾಯಕತ್ವದಲ್ಲಿ, ಎರಡು ಬಾರಿ ಯುಪಿಎ ಸರ್ಕಾರಗಳು ರಚನೆಯಾದವು ಮತ್ತು ಉದ್ಯೋಗ ಯೋಜನೆ (MGNREGA), ಆಹಾರ ಭದ್ರತಾ ಕಾಯಿದೆ, RTI (ಮಾಹಿತಿ ಹಕ್ಕು) ಕಾಯ್ದೆಯನ್ನು ಆ ಸರ್ಕಾರಗಳಲ್ಲಿ ಜಾರಿಗೊಳಿಸಲಾಯಿತು. ಎಂದು ನೂತನವಾಗಿ ಅಧಿಕಾರ ಸ್ವೀಕರಿಸಿದ ಮಲ್ಲಿಕಾರ್ಜುನ ಖರ್ಗೆಯವರು ಸೋನಿಯಾ ಗಾಂಧಿಯವರ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು.