ಮೈಸೂರು: ಜೆಡಿಎಸ್ ನಿಂದ ಸಾಕಷ್ಟು ಅಂತರ ಕಾಯ್ದುಕೊಂಡಿದ್ದ ಜಿ ಟಿ ದೇವೇಗೌಡ ಅವರು ಮತ್ತೆ ತಮ್ಮ ಪಕ್ಷಕ್ಕೆ ಹಿಂತಿರುಗಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡ ಅವರು ಮಾಡಿದ ಸಂಧಾನ ಸಭೆ ಸಫಲವಾಗಿದೆ. ಹೀಗಾಗಿ ಮತ್ತೆ ಜೆಡಿಎಸ್ ಗೆ ವಾಪಾಸ್ಸಾಗಿದ್ದಾರೆ.
ಕಳೆದ ಮೂರು ವರ್ಷದಿಂದಲೂ ಜಿ ಟಿ ದೇವೇಗೌಡ ಅವರು ಜೆಡಿಎಸ್ ನಿಂದ ಅಂತರ ಕಾಯ್ದುಕೊಂಡಿದ್ದರು. ಹೀಗಾಗಿ ದೊಡ್ಡ ಗೌಡರೇ ಮೈಸೂರಿಗೆ ಬಂದು ಮನವೊಲಿಸಿದ್ದಾರೆ. ಅಷ್ಟೆ ಅಲ್ಲ ಮಾಜಿ ಸಿಎಂ ಕುಮಾರಸ್ವಾಮಿ, ಸಾರಾ ಮಹೇಶ್, ಸಿ ಎಂ ಇಬ್ರಾಹಿಂ ಕೂಡ ಸಾಥ ನೀಡಿದ್ದರು. ಈ ವೇಳೆ ಒಂದಷ್ಟು ಭಾವನಾತ್ಮಕ ಕ್ಷಣಗಳು ಎಲ್ಲರ ಕಣ್ಣಿಗೆ ಬಿದ್ದಿದೆ.
ಸುಮಾರು ನಾಲ್ಕು ಗಂಟೆಗಳ ಕಾಲ ಜಿಟಿಡಿ ಮನೆಯಲ್ಲಿ ಸಂಧಾನ ಸಭೆ ನಡೆದಿದೆ. ಅಲ್ಲಿಯೇ ಊಟ ಮುಗಿಸಿದ್ದಾರೆ. ಮಾಜಿ ಪ್ರಧಾನಿಗಳ ಸಾರಥ್ಯದಲ್ಲಿ ಎಲ್ಲವೂ ಸರಿಯಾಗಿದೆ. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಜಿಟಿ ದೇವೇಗೌಡ ಅವರು, ಸ್ವಲ್ಪ ಭಾವನೆಗೆ ಒಳಗಾಗಿದ್ದು, ನಾನು ಮಾತ್ರವಲ್ಲ ನನ್ನ ಇಡೀ ಕುಟುಂಬ ಜೆಡಿಎಸ್ ಗಾಗಿ ದುಡಿಯುತ್ತೀವಿ ಎಂದಿದ್ದಾರೆ.
ಸಭೆಯೆಲ್ಲಾ ಮುಗಿದ ಮೇಲೆ ಮಾತನಾಡಿದ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅವರು, ಮುಂದಿನ ಮೈಸೂರು ಜಿಲ್ಲೆಯ ಜೆಡಿಎಸ್ ನಾಯಕತ್ವವನ್ನು ಜಿಟಿ ದೇವೇಗೌಡ ಅವರು ವಹಿಸಕೊಳ್ಳಲಿದ್ದಾರೆ. ಮೈಸೂರು ಭಾಗದಲ್ಲಿ ಏನೇ ತೀರ್ಮಾನ ತೆಗೆದುಕೊಳ್ಳುವುದಿದ್ದರು ಅವರೇ ತೆಗೆದುಕೊಳ್ಳಲಿದ್ದಾರೆ ಎಂದು ಘೋಷಣೆ ಮಾಡಿದ್ದಾರೆ.