ಚಿತ್ರದುರ್ಗ,(ಅಕ್ಟೋಬರ್ 20) : ಕಳೆದ ಎರಡು ವಾರಗಳಿಂದ ವಾಣಿ ವಿಲಾಸ ಸಾಗರ ಜಲಾಶಯದ ಜಲಾನಯನ ಪ್ರದೇಶದಲ್ಲಿ ಸತತವಾಗಿ ಮಳೆ ಸುರಿಯುತ್ತಿದೆ. ಜಲಾಶಯಕ್ಕೆ ಒಳಹರಿವು ಹೆಚ್ಚಾಗಿದೆ. ಅಕ್ಟೋಬರ್ 20 ರಂದು ವಿ.ವಿ.ಸಾಗರ ನೀರಿನ ಮಟ್ಟ 133,50 ಅಡಿಗೆ ಮುಟ್ಟಿದೆ. ಸದ್ಯ 10,452 ಕ್ಯೂಸೆಕ್ಸ್ ನೀರಿನ ಒಳಹರಿವಿದೆ. 7862 ಕ್ಯೂಸೆಕ್ಸ್ ನೀರನ್ನು ಜಲಾಶಯದಿಂದ ಹೊರ ಬಿಡಲಾಗುತ್ತಿದೆ. ಈ ಪ್ರಮಾಣ ಇನ್ನೂ ಹೆಚ್ಚಾಗುವ ಮುನ್ಸೂಚನೆಯಿದೆ. ವೇದಾವತಿ ನದಿ ಪಾತ್ರದ ಮೂಲಕ ಹೆಚ್ಚಿನ ನೀರು ಹರಿಯುತ್ತಿದೆ.
ಹಿರಿಯೂರು ಮತ್ತು ಚಳ್ಳಕೆರೆ ತಾಲ್ಲೂಕಿನಲ್ಲಿ ನದಿ ಇಕ್ಕೆಲಗಳಲ್ಲಿ ಬರುವ ಗ್ರಾಮಗಳಾದ ವಾಣಿವಿಲಾಸಪುರ, ಅರಮನೆಹಟ್ಟಿ, ಕುರುಬರಹಳ್ಳಿ, ಅಮ್ಮನಹಟ್ಟಿ, ಕಾತ್ರಿಕೇನಹಳ್ಳಿ , ಹೊಸ ಕಾತ್ರಿಕೇನಹಳ್ಳಿ, ಕೂನಿಕೆರೆ, ಲಕ್ಕವ್ವನಹಳ್ಳಿ , ಹಿರಿಯೂರು, ಮಾರುತಿನಗರ, ರಂಗನಾಥಪುರ, ಉಪ್ಪಳಗೆರೆ, ಟಿ.ನಾಗೇನಹಳ್ಳಿ , ಯಳನಾಡು , ಕೊಡ್ಲಹಳ್ಳಿ , ಲಂಬಾಣಿಹಟ್ಟಿ, ಬ್ಯಾಡರಹಳ್ಳಿ ದೇವರಕೊಟ್ಟ, ತೊರೆ ಓಬೇನಹಳ್ಲಿ, ಕಂಬತ್ತನಹಳ್ಳಿ ,ಬಿ ದರಕೆರೆ, ಸಂಗೇನಹಳ್ಳಿ, ಶಿಡ್ಲಯ್ಯನಕೋಟೆ ಜನರು ಆಸ್ತಿ ಪಾಸ್ತಿ ಸಂರಕ್ಷಣೆ ಹಾಗೂ ಜಾನುವಾರುಗಳ ಸಂರಕ್ಷಣೆಗೆ ಎಚ್ಚರಿಕೆ ವಹಿಸುವಂತೆ ಹಾಗೂ ಮುಂಜಾಗ್ರತ ಕ್ರಮ ತೆಗೆದುಕೊಳ್ಳಬೇಕು.
ಜಲಾಶಯದ ಕೋಡಿಯಿಂದ ಹೊರ ಬರುವ ಹೆಚ್ಚಿನ ಪ್ರಮಾಣದ ನೀರು ಹೊಸದುರ್ಗ ರಸ್ತೆಯ ಮೇಲೆ ಅಪಾಯ ಮಟ್ಟದಲ್ಲಿ ಹರಿಯುತ್ತಿದೆ. ಭಾಗಶಃ ಉಳಿದ ಹೊಸದುರ್ಗ ಡಾಂಬರ್ ರಸ್ತೆ ಯಾವುದೇ ಕ್ಷಣದಲ್ಲಿ ಕೊಚ್ಚಿಕೊಂಡು ಹೋಗುವ ಸಂಭವವಿದೆ. ಆದುದರಿಂದ ಮಾರಿಕಣಿವೆ ಕಡೆಯಿಂದ ಹಾಗೂ ಹಾರನಕಣಿವೆ ಕಡೆಯಿಂದಾಗಲಿ ಸಾರ್ವಜನಿಕರು ಮುಳ್ಳು ತಂತಿ ಬೇಲಿ ದಾಟದೇ ನೀರಿಗೆ ಇಳಿಯಬಾರದು. ವಿ.ವಿ.ಸಾಗರ ಜಲಾಶಯ ಮತ್ತು ವಿ.ವಿ.ಪುರ ನಡುವೆನ ಲೋಕೋಪಯೋಗಿ ಇಲಾಖೆಯ ಸಂಪರ್ಕ ಸೇತುವೆ ಮೇಲೆ ದೊಡ್ಡ ಗುಂಡಿಗಳು ಬಿದ್ದುವೆ. ಸೇತುವೆ ದುರಸ್ಥಿಯಲ್ಲಿದೆ. ತಾತ್ಕಲಿಕವಾಗಿ ಸೇತುವೆ ಮೇಲೆ ಎಲ್ಲಾ ರೀತಿಯ ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಇವುಗಳಿಂದಾಗಿ ವಿ.ವಿ.ಸಾಗರ ಜಲಾಶಯಕ್ಕೆ ಬರುವ ಪ್ರವಾಸಿಗರು ಮುನ್ನೆಚ್ಚರಿಕೆ ವಹಿಸುವಂತೆ ವಿಶ್ವೇಶ್ವರಯ್ಯ ಜಲ ನಿಗಮದ ವಿ.ವಿ. ಸಾಗರ ಉಪವಿಭಾಗದ ಕಾರ್ಯಪಾಲಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.