ಕೋಟಿ ಕಂಠಗಳಲ್ಲಿ ಗೀತೆ ಗಾಯನ: ಚಿತ್ರದುರ್ಗ ಜಿಲ್ಲೆಯಲ್ಲಿ 4 ಲಕ್ಷ ಜನರಿಂದ ಗಾಯನಕ್ಕೆ ಸಿದ್ಧತೆ ; ಆನ್ ಲೈನ್ ಮೂಲಕ ನೋಂದಣಿ ಸೇರಿದಂತೆ ಮಹತ್ವದ ಮಾಹಿತಿ…!

2 Min Read

ಮಾಹಿತಿ ಕೃಪೆ : ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ

ಚಿತ್ರದುರ್ಗ (ಅ.19) : ಕನ್ನಡ ರಾಜ್ಯೋತ್ಸವದ ಹಿನ್ನಲೆಯಲ್ಲಿ ಇದೇ ಅಕ್ಟೊಬರ್ 28 ರಂದು ಬೆಳಿಗ್ಗೆ 11 ಗಂಟೆಗೆ ರಾಜ್ಯಾದ್ಯಂತ “ನನ್ನ ನಾಡು ನನ್ನ ಹಾಡು” ಘೋಷವಾಕ್ಯದೊಂದಿಗೆ ಕೋಟಿ ಕಂಠಗಳಲ್ಲಿ ಗೀತೆ ಗಾಯನ ಕಾರ್ಯಕ್ರಮ ಆಯೋಜಿಸಲಾಗಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ 4 ಲಕ್ಷ ಜನರಿಂದ ಗೀತ ಗಾಯನಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಈ ಕುರಿತು ಜಿಲ್ಲಾಧಿಕಾರಿ ಕವಿತಾ ಎಸ್ ಮನ್ನಿಕೇರಿ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪೂರ್ವಭಾವಿ ಸಭೆ ಜರುಗಿತು.

ಚಿತ್ರದುರ್ಗ ನಗರದ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ, ಐತಿಹಾಸಿಕ ಕೋಟೆ, ಸರ್ಕಾರಿ ಬಾಲಕ ಹಾಗೂ ಬಾಲಕಿಯರ ಪದವಿ ಪೂರ್ವ ಕಾಲೇಜು, ಸರ್ಕಾರಿ ಕಲಾ ಕಾಲೇಜು,  ಎಸ್.ಆರ್.ಎಸ್. ಕಾಲೇಜು, ಎಸ್.ಜೆ.ಎಂ.ಐ.ಟಿ ಕಾಲೇಜು, ಅರವಿಂದ ಗಾರ್ಮೆಂಟ್ಸ್, ನಾಯಕನಹಟ್ಟಿಯ ಶ್ರೀ ಗುರು ತಿಪ್ಪೇರುದ್ರ ಸ್ವಾಮಿ ದೇವಸ್ಥಾನ, ಗುಡ್ಡದ ರಂಗವ್ವನಹಳ್ಳಿಯ ದಾವಣಗೆರೆ ವಿಶ್ವವಿದ್ಯಾಲಯದ ಸ್ನಾತಕೋತ್ತರ ಅಧ್ಯಯನ ಕೇಂದ್ರ, ಹೊಸದುರ್ಗ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು, ಎಸ್. ನಿಜಲಿಂಗಪ್ಪ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ, ಮೊಳಕಾಲ್ಮೂರು, ಹಿರಿಯೂರು, ಹೊಳಲ್ಕೆರೆ, ಚಳ್ಳಕೆರೆ ಹಾಗೂ ತಳುಕಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸಾಮೂಹಿಕ ಗೀತ ಗಾಯನ ಕಾರ್ಯಕ್ರಮ ಏರ್ಪಡಿಸಲಾಗಿದೆ.

ಗೀತ ಗಾಯನ ಕಾರ್ಯಕ್ರಮದಲ್ಲಿ ಕನ್ನಡ ನಾಡು ನುಡಿಯ ಶ್ರೇಷ್ಠತೆಯನ್ನು ಸಾರುವ ರಾಷ್ಟ್ರಕವಿ ಕುವೆಂಪು ವಿರಚಿತ ನಾಡಗೀತೆ “ಜೈ ಭಾರತ ಜನನಿಯ ತನುಜಾತೆ…” “ಬಾರಿಸು ಕನ್ನಡ ಡಿಂಡಿಮವ…” ಹುಯಿಲಗೋಳ ನಾರಾಯಣರಾಯರ “ಉದಯವಾಗಲಿ ಚಲುವ ಕನ್ನಡ ನಾಡು…” ಡಾ.ಡಿ.ಎಸ್.ಕರ್ಕಿಯವರ “ಹಚ್ಚೇವು ಕನ್ನಡದ ದೀಪ…” ನಾಡೋಜ ಡಾ.ಚೆನ್ನವೀರ ಕಣವಿಯವರ “ವಿಶ್ವವಿನೂತನ ವಿದ್ಯಾಚೇತನ…” ಡಾ.ಹಂಸಲೇಖ ಅವರ ಸಾಹಿತ್ಯ ಹಾಗೂ ಸಂಗೀತದ ಚಿತ್ರಗೀತೆ “ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು..” ಹಾಡುಗಳನ್ನು ಸಾರ್ವಜನಿಕರಿಂದ ಸಾಮೂಹಿಕವಾಗಿ ಹಾಡಿಸಲಾಗುವುದು. ಸಾಮೂಹಿಕ ಗೀತ ಗಾಯನ ಜರುಗುವ ಪ್ರತಿ ಸ್ಥಳದಲ್ಲಿ 1000ಕ್ಕಿಂತ ಹೆಚ್ಚು ಜನರು ಪಾಲ್ಗೊಳ್ಳಲಿದ್ದಾರೆ.

ಗೀತೆ ಗಾಯನಕ್ಕೆ ಆನ್ ಲೈನ್ ಮೂಲಕ ನೋಂದಣಿ:
ಸಾಮೂಹಿಕ ಗೀತ ಗಾಯನದಲ್ಲಿ ಪಾಲ್ಗೊಳ್ಳುವವರು ವೆಬ್ ಸೈಟ್ https://kannadasiri.karnataka.gov.in/kkg/public/    ಮೂಲಕ ತಮ್ಮ ಹೆಸರನ್ನು ನೊಂದಣಿ ಮಾಡಿಕೊಳ್ಳಬೇಕು. ಅಕ್ಟೋಬರ್ 28 ರವರೆಗೆ ನೊಂದಣಿ ಮಾಡಿಕೊಳ್ಳಲು ಅವಕಾಶವಿದೆ. ಸಾರ್ವಜನಿಕರು, ಶಾಲಾ ಕಾಲೇಜು ವಿದ್ಯಾರ್ಥಿಗಳು, ಸಂಘ ಸಂಸ್ಥೆಗಳು ಹೆಚ್ಚಿನ ಸಂಖ್ಯೆಯಲ್ಲಿ ಗೀತ ಗಾಯನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಕವಿತಾ ಎಸ್ ಮನ್ನಿಕೇರಿ ಕರೆ ನೀಡಿದ್ದಾರೆ. ಸಾಮೂಹಿಕ ಗೀತ ಗಾಯನದ ಉಸ್ತುವಾರಿಗೆ ನೇಮಿಸಿರುವ ಅಧಿಕಾರಿಗಳು ನಿಯಮಾನುಸಾರ ಹಾಗೂ ಶಿಸ್ತುಬದ್ಧವಾಗಿ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ಸೂಚನೆ ನೀಡಿದರು.

ಸಂಗೀತ ಶಿಕ್ಷಕರಿಂದ ಹಾಗೂ ಶಿಕ್ಷಣ ಸಂಸ್ಥೆಗಳಿಂದ ಸಾಮೂಹಿಕ ಗೀತ ಗಾಯನ ಮಾಡುವವರ ನೋಂದಣಿ ಅವಕಾಶ ಕೊಡಲಾಗಿದೆ. ಜಿಲ್ಲೆಯ ಶಾಲಾ ಕಾಲೇಜುಗಳು, ಸಂಘ ಸಂಸ್ಥೆಗಳಲ್ಲಿ ಸಹ ಗೀತ ಗಾಯನ ಮಾಡಲು ತಿಳಿಸಲಾಗಿದೆ. ಗೀತೆಗಳ ಗಾಯನದ ತರಬೇತಿಗಳನ್ನು ಶಾಲಾ ಕಾಲೇಜುಗಳಲ್ಲಿ ನೀಡಲಾಗುತ್ತಿದೆ ಎಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ ಸಭೆಯಲ್ಲಿ ಹೇಳಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಇ. ಬಾಲಕೃಷ್ಣ, ಜಿ.ಪಂ. ಉಪಕಾರ್ಯದರ್ಶಿ ರಂಗಸ್ವಾಮಿ, ಉಪವಿಭಾಗಾಧಿಕಾರಿ ಚಂದ್ರಯ್ಯ, ಡಿವೈಎಸ್‍ಪಿ ತಿಪ್ಪೇಸ್ವಾಮಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ರಂಗಕರ್ಮಿ ಕೆ.ಪಿ. ಗಣೇಶಯ್ಯ, ವಿವಿಧ ಸಂಘ ಸಂಸ್ಥೆಗಳು, ಕನ್ನಡಪರ ಸಂಘಟನೆಗಳು, ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಗಣ್ಯರು ಇದ್ದರು.

Share This Article
Leave a Comment

Leave a Reply

Your email address will not be published. Required fields are marked *