ವರದಿ ಮತ್ತು ಫೋಟೋ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಚಿತ್ರದುರ್ಗ : ಸಹಕಾರ ಸಂಘ ಸಂಸ್ಥೆ ಹಾಗೂ ಸೊಸೈಟಿಗಳ ಮೇಲೆ ಜನರಲ್ಲಿ ನಂಬಿಕೆ ಬಂದಾಗ ಮಾತ್ರ ಠೇವಣಿಯಿಡಲು ಮುಂದೆ ಬರುತ್ತಾರೆ ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿದರು.
ಚಿತ್ರದುರ್ಗ ಟೌನ್ ಕೋ-ಆಪರೇಟಿವ್ ಸೊಸೈಟಿಯಲ್ಲಿ ಶುಕ್ರವಾರ ಲಾಕರ್ ಉದ್ಘಾಟಿಸಿ ಮಾತನಾಡಿದ ಅವರು ಲಾಕರ್‍ಗಳಿಗೆ ಬೇಡಿಕೆ ಜಾಸ್ತಿಯಿದೆ. ಬಂಗಾರವಿಟ್ಟರೆ ಇಲ್ಲಿ ಸುರಕ್ಷಿತವಾಗಿರುತ್ತದೆ.
ಯಾವುದೇ ಒಂದು ಸಂಸ್ಥೆಯ ಹಿತ ಕಾಪಾಡುವಲ್ಲಿ ಸದಸ್ಯರು ಹಾಗೂ ಡೈರೆಕ್ಟರ್‍ಗಳ ಪಾತ್ರ ದೊಡ್ಡದು. ಸಾಲ ಕೊಡಿಸುವುದಷ್ಟೇ ಮುಖ್ಯವಲ್ಲ. ವಸೂಲಾತಿ ಕಡೆಗೂ ಹೆಚ್ಚಿನ ಜವಾಬ್ದಾರಿ ವಹಿಬೇಕು. ಒಂದು ಕಾಲದಲ್ಲಿ ಸಹಕಾರ ಸಂಘಗಳನ್ನು ಜನ ನಂಬುತ್ತಿರಲಿಲ್ಲ. ಈಗ ಸುಧಾರಣೆಯಾಗಿದೆ. ಚಿತ್ರದುರ್ಗ ಟೌನ್ ಕೋ-ಆಪರೇಟಿವ್ ಸೊಸೈಟಿ ಹಿಂದೆ ತೊಂದರೆಯಲ್ಲಿತ್ತು. ನಿಶಾನಿ ಜಯಣ್ಣ ಕಳೆದ ಹದಿನೈದು ವರ್ಷಗಳಿಂದಲೂ ಅಧ್ಯಕ್ಷರಾಗಿ ಸೊಸೈಟಿಯನ್ನು ಅಭಿವೃದ್ದಿ ಕಡೆ ಕೊಂಡೊಯ್ಯುತ್ತಿರುವುದು ಸುಲಭದ ಕೆಲಸವಲ್ಲ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಒಳ್ಳೆಯ ಜಾಗದಲ್ಲಿ ಕೋಟ್ಯಾಂತರ ರೂ.ಬೆಲೆ ಬಾಳುವ ಕಟ್ಟಡವಿದೆ. ಸಾಲ ವಸೂಲಾತಿಯಲ್ಲಿ ನಿಸ್ಪಕ್ಷಪಾತ ಹಾಗೂ ನಿಷ್ಠುರವಾಗಿ ಕೆಲಸ ಮಾಡಿದಾಗ ಮಾತ್ರ ಸಂಘ ಸಂಸ್ಥೆಗಳು ಉಳಿಯಲು ಸಾಧ್ಯ. ಕೇಂದ್ರ ಸರ್ಕಾರ ದೇಶದಲ್ಲಿ ನಲವತ್ತು ಕೋಟಿ ಜನರಿಗೆ ಜನ್‍ಧನ್ ಖಾತೆ ಆರಂಭಿಸಿದೆ. ಆನ್‍ಲೈನ್ ಮೂಲಕ ರೈತರಿಗೆ ಸಹಾಯಧನ ಸಿಗುತ್ತಿದೆ. ನೇರವಾಗಿ ಅವರವರ ಬ್ಯಾಂಕ್ ಖಾತೆಗಳಿಗೆ ಹಣ ಜಮಾ ಆಗುವುದರಿಂದ ಎಲ್ಲಿಯೂ ಅಕ್ರಮವಾಗುವುದಿಲ್ಲ. ರಾಷ್ಟ್ರಮಟ್ಟದ ರಾಜಕಾರಣಿಗಳು, ಕೆಲವು ಮುಖ್ಯಮಂತ್ರಿಗಳು ಚಿತ್ರದುರ್ಗ ಟೌನ್ ಕೋ-ಆಪರೇಟಿವ್ ಸೊಸೈಟಿಯಲ್ಲಿ ಸದಸ್ಯರುಗಳಾಗಿದ್ದರು ಎಂದು ಸ್ಮರಿಸಿದರು.
ಡಿ.ಸಿ.ಸಿ.ಬ್ಯಾಂಕ್, ಸೊಸೈಟಿಗಳ ಮೂಲಕ ರೈತರಿಗೆ ಸಾಕಷ್ಟು ಸಾಲಗಳು ದೊರಕುತ್ತಿವೆ. ಚಿತ್ರದುರ್ಗ ಟೌನ್ ಕೋ-ಆಪರೇಟಿವ್ ಸೊಸೈಟಿ ಇನ್ನು ಬಲವಾಗಿ ಬೆಳೆಯಬೇಕು. ಸಾಲ ಪಡೆದು ನಿಯತ್ತಾಗಿ ಕಂತುಗಳನ್ನು ಕಟ್ಟುವವರು ಸಾಕಷ್ಟು ಅನುಕೂಲಗಳನ್ನು ಪಡೆಯಬಹುದು. ಸೊಸೈಟಿಗಳ ಮುಖಾಂತರ ಯಶಸ್ವಿನಿ ಯೋಜನೆಗಳ ಪ್ರಯೋಜನವಿದೆ. ಆಯುಷ್ಮಾನ್ ಭಾರತ್ ಕಾರ್ಡ್ ಇವುಗಳ ಬಗ್ಗೆ ಇನ್ನು ಸಾಕಷ್ಟು ಮಂದಿಗೆ ಮಾಹಿತಿಯಿಲ್ಲ. ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಿ ಎಂದು ಹೇಳಿದರು.
ಡಿ.ಸಿ.ಸಿ.ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಇಲಿಯಾಜ್‍ವುಲ್ಲಾ ಷರೀಫ್ ಮಾತನಾಡುತ್ತ ರಾಷ್ಟ್ರದಲ್ಲಿ ಸಹಕಾರ ಚಳುವಳಿಗೆ 118 ವರ್ಷಗಳ ಇತಿಹಾಸವಿದೆ. ಬಡವರು, ದೀನದಲಿತರು, ಅಲ್ಪಸಂಖ್ಯಾತರ ಏಳಿಗೆಗಾಗಿ ಸಹಕಾರ ಸಂಘಗಳು ಹುಟ್ಟಿಕೊಂಡಿದ್ದು, ಕೃಷಿ, ಬ್ಯಾಂಕ್, ಹಾಲು ಉತ್ಪಾದನೆಯಲ್ಲಿ ಸಹಕಾರ ಸಂಘಗಳು ಪ್ರಮುಖ ಪಾತ್ರ ವಹಿಸುತ್ತಿವೆ. 8-5-1905 ರಲ್ಲಿ ಗದಗ ಜಿಲ್ಲೆಯಲ್ಲಿ ಸಹಕಾರ ಸಂಘ ಆರಂಭವಾಯಿತು.
1912 ರಲ್ಲಿ ಚಿತ್ರದುರ್ಗ ಜಿಲ್ಲೆಯಲ್ಲಿ ಮೊದಲು ಸಹಕಾರ ಸಂಘ ನೊಂದಣಿಯಾಯಿತು. ರಾಜ್ಯದಲ್ಲಿ 42 ಸಾವಿರ ಸಹಕಾರ ಸಂಘಗಳಿದ್ದು, ಎರಡು ಸಾವಿರ ಸಂಘಗಳು ಮುಚ್ಚಿವೆ. ಜಿಲ್ಲೆಯಲ್ಲಿ 1048 ಸಂಘಗಳು ನೊಂದಣಿಯಾಗಿದ್ದು, 750 ಮಾತ್ರ ಕೆಲಸ ಮಾಡುತ್ತಿವೆ. ಜನರು, ಜನರಿಗಾಗಿ, ಜನರೆ ಸಂಘಟಿಸುವ ವ್ಯವಸ್ಥೆಯೇ ಸಹಕಾರ ಎಂದು ವಿವರಿಸಿದರು.
ಸಹಕಾರ ಸಂಘಗಳು ಸದೃಢವಾಗಿರಬೇಕಾದರೆ ಸಂಘದ ಸದಸ್ಯರುಗಳು ಕೈಜೋಡಿಸಬೇಕು. ಚಿತ್ರದುರ್ಗ ಟೌನ್ ಕೋ-ಆಪರೇಟಿವ್ ಸೊಸೈಟಿಗೆ ನೂರ ಹತ್ತು ವರ್ಷಗಳ ಇತಿಹಾಸವಿದೆ. ಆದರೆ ವ್ಯವಹಾರದಲ್ಲಿ ಹಿಂದಿದೆ. ಮುಂದಿನ ದಿನಗಳಲ್ಲಿ ಅಭಿವೃದ್ದಿ ಪಥದತ್ತ ತೆಗೆದುಕೊಂಡು ಹೋಗಬೇಕು. ಇಲ್ಲಿ ಲಾಕರ್ ಆರಂಭಿಸಿರುವುದರ ಹಿಂದೆ ಒಳ್ಳೆಯ ಉದ್ದೇಶವಿದೆ. 146 ಲಾಕರ್ ವ್ಯವಸ್ಥೆಯಿದೆ. ಚಿನ್ನದ ಮೇಲೆ ಸಾಲ ಪಡೆಯಬಹುದು. ಹತ್ತರಿಂದ ಹನ್ನೆರಡು ಪರ್ಸೆಂಟ್ ಬಡ್ಡಿ ದರದಲ್ಲಿ. ಗ್ರಾಹಕರು ಲಾಕರ್ ವ್ಯವಸ್ಥೆಯ ಸದುಪಯೋಗಪಡಿಸಿಕೊಳ್ಳಿ ಎಂದು ವಿನಂತಿಸಿದರು.
ಚಿತ್ರದುರ್ಗ ಟೌನ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಎಂ.ನಿಶಾನಿ ಜಯಣ್ಣ ಅಧ್ಯಕ್ಷತೆ ವಹಿಸಿದ್ದರು.
ನಗರಸಭೆ ಅಧ್ಯಕ್ಷೆ ಶ್ರೀಮತಿ ತಿಪ್ಪಮ್ಮ, ಮಾಜಿ ಉಪಾಧ್ಯಕ್ಷೆ ಅನುರಾಧ ರವಿಕುಮಾರ್, ನಗರಸಭೆ ಸದಸ್ಯರುಗಳಾದ ವೆಂಕಟೇಶ್, ಭಾಗ್ಯಮ್ಮ, ಸುರೇಶ್, ಅಂಗಡಿ ಮಂಜಣ್ಣ, ದಾವೂದ್, ಬಿಜೆಪಿ.ಜಿಲ್ಲಾಧ್ಯಕ್ಷ ಎ.ಮುರಳಿ ವೇದಿಕೆಯಲ್ಲಿದ್ದರು.
ಚಿತ್ರದುರ್ಗ ಟೌನ್ ಕೋ-ಆಪರೇಟಿವ್ ಸೊಸೈಟಿಯ ಉಪಾಧ್ಯಕ್ಷ ಸಿ.ಹೆಚ್.ಸೂರ್ಯಪ್ರಕಾಶ್, ನಿರ್ದೇಶಕರುಗಳಾದ ಡಾ.ರಹಮತ್‍ವುಲ್ಲಾ, ಬಿ.ವಿ.ಶ್ರೀನಿವಾಸ್‍ಮೂರ್ತಿ, ಸೈಯದ್ ನೂರುಲ್ಲಾ, ಚಿಕ್ಕಣ್ಣ ಕೆ. ಎಸ್.ವಿ.ಪ್ರಸನ್ನ, ಚಂದ್ರಪ್ಪ, ಪ್ರಕಾಶ್ ಕೆ. ಶ್ರೀಮತಿ ಎ.ಚಂಪಕಾ, ಶ್ರೀಮತಿ ಎನ್.ಎಂ.ಪುಷ್ಪವಲ್ಲಿ. ನಾಗರಾಜ್‍ಬೇದ್ರೆ, ವ್ಯವಸ್ಥಾಪಕ ಮಹಮದ್ ನಯೀಮ್, ಹಿರಿಯ ಸದಸ್ಯರುಗಳು ಹಾಗೂ ಸೊಸೈಟಿಯ ಸಿಬ್ಬಂದಿಗಳು ಈ ಸಂದರ್ಭದಲ್ಲಿದ್ದರು.