ನವ ದೆಹಲಿ: ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಸಚಿವ ಮುರುಗೇಶ್ ನಿರಾಣಿಗೆ ಕೊಂಚ ರಿಲೀಫ್ ಸಿಕ್ಕಂತಾಗಿದೆ. ತಮ್ಮ ಮೇಲಿದ್ದ ಡಿನೋಟಿಫೈ ಆರೋಪದ ಕೇಸನ್ನು ನ್ಯಾಯಮೂರ್ತಿಗಳು ದೀಪಾವಳಿ ಕಳೆದ ಬಳಿಕ ವಿಚಾರಣೆ ನಡೆಸುವುದಾಗಿ ಸೂಚಿಸಿದ್ದಾರೆ. ಮುಖ್ಯ ನ್ಯಾಯಮೂರ್ತಿಗಳು ಮುಂದಿನ ತಿಂಗಳು ನಿವೃತ್ತರಾಗುತ್ತಿರುವ ಹಿನ್ನೆಲೆ ತಮ್ಮ ಹೊರತಾದ ಮತ್ತೊಂದು ಪೀಠದಲ್ಲಿ ಅರ್ಜಿ ವಿಚಾರಣೆ ನಡೆಸಲು ಪಟ್ಟಿ ಮಾಡುವಂತೆ ಸೂಚಿಸಿದ್ದಾರೆ. ಅದರಲ್ಲಿ ಯಡಿಯೂರಪ್ಪ ಅವರ ವಿರುದ್ಧದ ಡಿನೋಟಿಫೈ ಪ್ರಕರಣವನ್ನು ದೀಪಾವಳಿ ಬಳಿಕ ಕೈಗೆತ್ತಿಕೊಳ್ಳುವುದಾಗಿ ಸೂಚಿಸಿದ್ದಾರೆ.

ದೇವನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ 26 ಎಕರೆ ಡಿನೋಟಿಫೈ ಮಾಡಿರುವ ಆರೋಪವನ್ನು ಬಿಎಸ್ ಯಡಿಯೂರಪ್ಪ ಹಾಗೂ ಸಚಿವ ಮುರುಗೇಶ್ ನಿರಾಣಿ ಎದುರಿಸುತ್ತಿದ್ದಾರೆ. ಈ ಕೇಸ್ ಸಂಬಂಧ ಸಾಮಾಜಿಕ ಕಾರ್ಯಕರ್ತ ಆಲಂ ಪಾಷಾ ಸುಪ್ರಿಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.

ಮತ್ತೊಂದು ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಯಡಿಯೂರಪ್ಪ ಅವರಿಗೆ ತುಸು ನೆಮ್ಮದಿ ನೀಡಿದೆ. ಬೆಂಗಳೂರಿನ ಕೊನದಾಸಪುರದಲ್ಲಿ ಬಿಡಿಎ ಫ್ಲಾಟ್ ನಿರ್ಮಾಣದಲ್ಲಿ ಅಕ್ರಮ ನಡೆದಿರುವ ಆರೋಪಕ್ಕೆ ಸಂಬಂಧಿಸಿದಂತೆ ಯಡಿಯೂರಪ್ಪ ವಿರುದ್ಧದ ತನಿಖೆಗೆ ಸುಪ್ರೀಂಕೋರ್ಟ್ ಮಧ್ಯಂತರ ತಡೆ ನೀಡಿದೆ. ಯಡಿಯೂರಪ್ಪ ಜನಪ್ರತಿನಿಧಿಯಾಗಿರುವ ಹಿನ್ನೆಲೆಯಲ್ಲಿ ತನಿಖೆಗೆ ತಡೆ ನೀಡಬೇಕು. ತನಿಖೆಗೆ ರಾಜ್ಯಪಾಲರ ಪೂರ್ವಾನುಮತಿ ಅಗತ್ಯ ಎಂದು ಬಿಎಸ್ವೈ ಪರ ವಕೀಲರು ಇಂದು ಸುಪ್ರೀಂಕೋರ್ಟ್ನಲ್ಲಿ ವಾದಿಸಿದ್ದರು.


