ಬೆಂಗಳೂರು: ಚುನಾವಣಾ ಪ್ರಮಾಣ ಪತ್ರದಲ್ಲಿ ಸುಳ್ಳು ಮಾಹಿತಿ ನೀಡಿದ ಆರೋಪ ನಿಜವಾಗಿದ್ದು, ಬೆಂಗಳೂರಿನ ಚಿಕ್ಕಪೇಟೆ ಶಾಸಕ ಗರುಡಾಚಾರ್ ಅವರಿಗೆ ಜೈಲು ಶಿಕ್ಷೆಯಾಗಿದೆ. ವಿಚಾರಣೆ ನಡೆಸಿದ ಬೆಂಗಳೂರಿನ 42ನೇ ಎಸಿಎಂಎಂ ಕೋರ್ಟ್ ಎರಡು ತಿಂಗಳು ಜೈಲು ಹಾಗೂ ಹತ್ತು ಸಾವಿರ ದಂಡ ವಿಧಿಸಿದೆ.
2018ರಲ್ಲಿ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಚುನಾವಣೆ ನಡೆದಿತ್ತು. ಈ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾಗ ಸುಳ್ಳು ಪ್ರಮಾಣ ಪತ್ರ ನೀಡಿದ್ದರು. ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಕೆಯಾಗಿತ್ತು. ಅಫಿಡೆವಿಟ್ ನಲ್ಲಿ ಕ್ರಿಮಿನಲ್ ಕೇಸ್ ಗಳನ್ನು ಮುಚ್ಚಿಟ್ಟಿದ್ದರು. ಇದನ್ನು ಗಮನಿಸಿದ್ದ ಪ್ರಕಾಶ್ ಎಂ ಶೆಟ್ಟಿ ಎಂಬುವವರು ಅಶೋಕ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ್ದ ಕೋರ್ಟ್ ಇಂದು ತೀರ್ಪು ಪ್ರಕಟಿಸಿದೆ.
ಇನ್ನು ಶಿಕ್ಷೆ ಪ್ರಕಟವಾದ ಬಳಿಕ ಜಾಮೀನಿಗೆ ಗರುಡಾಚಾರ್ ಮನವಿ ಸಲ್ಲಿಸಿದ್ದು, ಕೋರ್ಟ್ ಜಾಮೀನು ನೀಡಿದೆ. ಇನ್ನು ಕೋರ್ಟ್ 25 ಸಾವಿರ ಬಾಂಡ್ ಶ್ಯೂರಿಟಿ ಕೇಳಿದೆ.