ಮಂಡ್ಯ: ಚುನಾವಣೆ ಹತ್ತಿರವಾಗುತ್ತಿರುವಂತೆ ರಾಜಕೀಯ ಪಕ್ಷಗಳು ಆಕ್ಟೀವ್ ಆಗುತ್ತಿವೆ. ಜನರನ್ನು ಸೆಳೆಯಲು ಹೊಸ ಹೊಸ ತಂತ್ರ ರೂಪಿಸುತ್ತಿದೆ. ಈಗಾಗಲೇ ಪಕ್ಷದ ರಾಹುಲ್ ಗಾಂಧಿ ಜನರಿರುವಲ್ಲಿಗೆ ಪಾದಯಾತ್ರೆ ಮೂಲಕ ಸಾಗುತ್ತಿದ್ದಾರೆ. ಇದಕ್ಕೆ ಪ್ರತಿಯಾಗಿ ಬಿಜೆಪಿ ಇದೀಗ ಕುಂಭಮೇಳ ಮಾಡಲು ಹೊರಟಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಬಿಜೆಪಿ ಮಂಡ್ಯ ಜಿಲ್ಲೆಯಲ್ಲಿ ಇದೇ ತಿಂಗಳು ದೊಡ್ಡ ಮಟ್ಟದಲ್ಲಿ ಕುಂಭಮೇಳ ಮಾಡುವುದಕ್ಕೆ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದೆ. ಕೆ ಆರ್ ಪೇಟೆ ತಾಲೂಕಿನ ಅಂಬಿಗರಹಳ್ಳಿ ಬಳಿ ಇರುವ ತ್ರಿವೇಣಿ ಸಂಗಮದಲ್ಲಿ ನಾಳೆಯಿಂದ 16ರವರೆಗೆ ಕುಂಭಮೇಳ ನಡೆಯಲಿದೆ. ಅದರ ಜೊತೆಗೆ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯಾನಾಥ್ ಅವರನ್ನು ಕರೆತರುತ್ತಿರುವುದು ಬಿಜೆಪಿ ಪಕ್ಷಕ್ಕೆ ಪ್ಲಸ್ ಪಾಯಿಂಟ್ ಆಗಲಿದೆ ಎನ್ನಲಾಗಿದೆ. ಯಾಕೆಂದರೆ ಯೋಗಿ ಆದಿತ್ಯಾನಾಥ್ ಹಿಂದೂಗಳ ಫೈಯರ್ ಬ್ರ್ಯಾಂಡ್ ಎಂದೇ ಖ್ಯಾತರಾಗಿದ್ದಾರೆ.
ಅಕ್ಟೋಬರ್ 13ರಿಂದ ಕುಂಭಮೇಳ ಆರಂಭವಾಗುತ್ತದೆ. 14ರಂದು ಧರ್ಮಸ್ಥಳದ ಧರ್ಮಾಧಿಕಾರಿಗಳಾ ವೀರೇಂದ್ರ ಹೆಗ್ಗಡೆ ಅವರು ಚಾಲನೆ ನೀಡಲಿದ್ದಾರೆ. ಈ ಕುಂಭಮೇಳಕ್ಕೆ ಲಕ್ಷಾಂತರ ಜನರನ್ನು ಕರೆತರುವ ಜವಬ್ದಾರಿಯನ್ನು ಬಿಜೆಪಿ ನಾಯಕರಿಗೆ ವಹಿಸಲಾಗಿದೆ.
ಇನ್ನು ನಾಳೆ ಜನಪದ ತಂಡಗಳ ಮೆರವಣಿಗೆ ನಡೆಯಲಿದ್ದು, ಇದಕ್ಕೆ ಗೋಪಾಲಯ್ಯ ಚಾಲನೆ ನೀಡಲಿದ್ದಾರೆ. ಸಂಜೆ 6.30ಕ್ಕೆ ಜಿಲ್ಲಾ ಉತ್ಸವ ಕೂಡ ನಡೆಯಲಿದ್ದು ಅದಕ್ಕೆ ಸುನಿಲ್ ಕುಮಾರ್ ಚಾಲನೆ ನೀಡಲಿದ್ದಾರೆ. ಅಕ್ಟೋಬರ್ 14ರಂದು ವಿವಿಧ ಮಠಾಧೀಶರಿಂದ ಕುಂಭಮೇಳ ಉದ್ಘಾಟನೆಯಾಗಲಿದೆ. ಉದ್ಘಾಟನಾ ಸಮಾರಂಭದಲ್ಲಿ ನಿರ್ಮಲಾನಂದ ಸ್ವಾಮೀಜಿ ಕೂಡ ಇರಲಿದ್ದಾರೆ. ಸುತ್ತೂರು ಶಿವರಾತ್ರಿ ದೇಶಿಕೇಂದ್ರಶ್ರೀ, ಮಹಾಂತ ಶಿವಯೋಗಿಶ್ರೀ, ಶಿವಾನಂದ ಸ್ವಾಮೀಜಿ, ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ, ವೀರೇಂದ್ರ ಹೆಗ್ಗಡೆ ಅವರು ಉಪಸ್ಥಿತರಾಗಲಿದ್ದಾರೆ.