ಚಿತ್ರದುರ್ಗ : ಇಂದು ಕೂಡ ಕೋಟೆನಾಡಿನಲ್ಲಿ ರಾಹುಲ್ ಗಾಂಧಿ ಪಾದಯಾತ್ರೆ ಸಾಗಿತ್ತು. ಈ ಸಂದರ್ಭದಲ್ಲಿ ವಿಶೇಷ ಚೇತನರ ಬರವಣಿಗೆಯನ್ನು ಕಂಡು ಕೊಂಡಾಡಿದರು. ಯಾರೇ ಆಗಲಿ ಎದುರಿಗಿರುವವರ ನ್ಯೂನ್ಯತೆಯನ್ನು ಗುರುತಿಸುವ ಬದಲಿಗೆ ಅವರ ಕಲೆಯನ್ನು ಗುರುತಿಸಬೇಕು. ರಾಹುಲ್ ಗಾಂಧಿ ಇಂದು ಅದನ್ನೇ ಮಾಡಿದರು.
ದೈಹಿಕ ನ್ಯೂನ್ಯತೆಗಳನ್ನು ಮೆಟ್ಟಿನಿಂತು ಸಾಧ್ಯತೆಗಳನ್ನು ಹುಡುಕುವುದೇ ಮನುಷ್ಯನ ನೈಜ ಸಾಧನೆ ಅಂತ ವಿಶೇಷ ಚೇತನರಿಗೆ ಧೈರ್ಯ ತುಂಬಿದರು. ಚಳ್ಳಕೆರೆ ತಾಲೂಕಿನ ಸಾಣಿಕೆರೆಯ ಚೇತನ್ ಹೋಟೆಲ್ ಬಳಿ ಇರುವ ಭಾರತ್ ಜೋಡೋ ಪಾದಯಾತ್ರೆ ವಿಶ್ರಾಂತಿ ಪಡೆಯುತ್ತಿರುವ ಸಂದರ್ಭದಲ್ಲಿ ವಿವಿಧ ಮಹಿಳಾ ಕಾರ್ಯಕರ್ತೆಯರೊಂದಿಗೆ ಸಂವಾದ ನಡೆಸಿದರು.
ಈ ವೇಳೆ ವಿಕಲಚೇತನ ಮಹಿಳೆಯೊಬ್ಬರು ಎರಡು ಕೈ ಇಲ್ಲದ ಕಾರಣ ಕಾಲಿನಲ್ಲಿಯೇ ತಮ್ಮ ಬರವಣಿಗೆ ಮಾಡಿ ತೋರಿಸಿದರು. ಕೈಗಳು ಇಲ್ಲದೆ ಇದ್ದರು ಕಾಲಿನಲ್ಲಿಯೇ ಬರೆಯುತ್ತಿದ್ದ ವಿಡಿಯೋವನ್ನು ರಾಹುಲ್ ಗಾಂಧಿ ಅವರು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದರು. ಇಂಥವರ ಬದುಕೇ ನಮಗೆ ಸ್ಫೂರ್ತಿ ಎಂದು ಎಲ್ಲರ ಎದುರು ಹಾಡಿ ಕೊಂಡಾಡಿದರು.
ಇನ್ನು ರಾಹುಲ್ ಗಾಂಧಿ ಅವರನ್ನು ನೋಡಲು ಸಾಣಿಕೆರೆ ಗ್ರಾಮದಲ್ಲಿ ಜನಸಾಗರವೇ ಕಿಕ್ಕಿರಿದು ತುಂಬಿತ್ತು. ರಸ್ತೆಯ ಎರಡೂ ಬದಿಯಲ್ಲಿ ಜನರು ಬಿಲ್ಡಿಂಗ್, ಮನೆ, ಅಂಗಡಿ, ವಾಹನಗಳ ಮೇಲೆ ನಿಂತು ಪಾದಯಾತ್ರೆ ನೋಡುತ್ತಿದ್ದ ದೃಶ್ಯ ಸಾಮಾನ್ಯವಾಗಿ ಕಂಡು ಬಂದಿತ್ತು. ಯಾತ್ರೆ ಸಾಗುವ ಮಾರ್ಗ ಸಂಪೂರ್ಣ ಸಿಂಗಾರಗೊಂಡಿದೆ. ಸಾಣಿಕೆರೆ – ಚಳ್ಳಕೆರೆ ರಸ್ತೆ ಮಾರ್ಗ ಫ್ಲೆಕ್ಸ್ ಹಾಗೂ ಬ್ಯಾನರ್ ಗಳು ರಾರಾಜಿಸುತ್ತಿದ್ದವು. ವಿವಿಧ ಜಿಲ್ಲೆಗಳಿಂದ ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರು ಯಾತ್ರೆಗೆ ಬಂದಿದ್ದಾರೆ.