ಚಿತ್ರದುರ್ಗ, ಸುದ್ದಿಒನ್ (ಅ.10) : ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಇಂದು ಕೋಟೆನಾಡಿಗೆ ಪ್ರವೇಶ ಪಡೆದುಕೊಂಡಿದೆ. ರಾಹುಲ್ ಗಾಂಧಿ ಒಂದು ತಿಂಗಳಿನಿಂದ ಶುರು ಮಾಡಿದ ಯಾತ್ರೆಯಲ್ಲಿ ಹಲವು ರೀತಿಯ ನೆನಪುಗಳನ್ನು ಪಡೆದುಕೊಂಡಿದ್ದಾರೆ. ಎಷ್ಟೋ ಜನರ ಪ್ರೀತಿಯನ್ನು ಗಳಿಸಿದ್ದಾರೆ. ಇದೀಗ ಚಿತ್ರದುರ್ಗದಲ್ಲಿಯೂ ಅಂಥಹ ಅವಿಸ್ಮರಣೀಯ ಕ್ಷಣಗಳನ್ನು ಕಂಡಿದ್ದಾರೆ.
ಇಂದು ಬೆಳಗ್ಗೆಯಿಂದ ಚಿತ್ರದುರ್ಗದಲ್ಲಿ ಪಾದಯಾತ್ರೆ ಆರಂಭವಾಗಿದೆ. ಜಿಲ್ಲೆಯ ಹಿರಿಯೂರು ತಾಲೂಕಿಗೆ ಯಾತ್ರೆ ಬಂದಿದ್ದು, ಸುಮಾರು 11 ಕಿಲೋ ಮೀಟರ್ ನಡೆಯಲಿದ್ದಾರೆ. ಬಳಿಕ ಕಾಡಿನ ಹಾದಿಯಲ್ಲಿ ಕಾರಿನ ಮೂಲಕ ಸಂಚಾರ ಮಾಡಲಿದ್ದಾರೆ. ಸಂಜೆ 4 ಗಂಟೆಗೆ ಮತ್ತೆ ಹಿರಿಯೂರಿನಿಂದ ಪಾದಯಾತ್ರೆ ಆರಂಭವಾಗಲಿದೆ. ಇದೇ ವೇಳೆ ಸಮೀಕ್ಷಾ ವರದಿಯ ಆಧಾರದ ಮೇಲೆ ಚರ್ಚೆ ನಡೆಸಿದ್ದಾರೆ. ಈ ವೇಳೆ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಜೊತೆಗೆ ಮೈಸೂರು, ಮಂಡ್ಯ, ತುಮಕೂರು ಭಾಗದ ಜನರ ಪ್ರತಿಕ್ರಿಯೆ ನೋಡಿ ಸಂತಸಗೊಂಡಿದ್ದಾರೆ.
ಸಮಾಜವಾದಿ ಪಕ್ಷದ ಮುಖಂಡ ಮುಲಾಯಂ ಸಿಂಗ್ ಯಾದವ್ ಅವರ ನಿಧನದ ಹಿನ್ನೆಲೆ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಸಂತಾಪ ಸೂಚಿಸಿದರು.
ಈ ಸಂದರ್ಭದಲ್ಲಿ ಡಿ.ಕೆ. ಶಿವಕುಮಾರ್, ರಣದೀಪ್ ಸುರ್ಜೆವಾಲಾ, ಬಿ.ಕೆ. ಹರಿಪ್ರಸಾದ್, ಸಲೀಂ ಅಹ್ಮದ್, ಸೇರಿದಂತೆ ಕಾಂಗ್ರೆಸ್ ಮುಖಂಡರು ಜೊತೆಗಿದ್ದರು.