ಚಿತ್ರದುರ್ಗ: ಕಾಂಗ್ರೆಸ್ ನಾಯಕರು ನಡೆಸುತ್ತಿರುವ ಭಾರತ್ ಜೋಡೋ ಯಾತ್ರೆ ಬಗ್ಗೆ ಬಿಜೆಪಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಕಿಡಿಕಾರಿದ್ದು, ಜಿಲ್ಲೆಗೆ ಕಾಂಗ್ರೆಸ್ ಸಾಧನೆ ಏನು ಎಂದು ಪ್ರಶ್ನಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2008ರಿಂದ ಜಿಲ್ಲೆ ಬರದ ಜಿಲ್ಲೆಯಾಗಿ ಹಣೆಪಟ್ಟಿ ಪಡೆದುಕೊಂಡಿತ್ತು. ಹಲವಾರು ಮುಖ್ಯಮಂತ್ರಿಗಳನ್ನು ಈ ರಾಜ್ಯ ಕಂಡಿದೆ. ಯಾವುದೇ ಒಬ್ಬ ಮುಖ್ಯಮಂತ್ರಿ ಭದ್ರಾ ಮೇಲ್ದಂಡೆ ಯೋಜನೆಗೆ ಅನುದಾನ ಕೊಡಲಿಲ್ಲ. ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ ಭದ್ರಾ ಮೇಲ್ದಂಡೆ ಯೋಜನೆಗೆ ಹಣ ಮಂಜೂರು ಮಾಡಿದರು. ಚಿತ್ರದುರ್ಗ ಜಿಲ್ಲೆಗೆ ಮೆಡಿಕಲ್ ಕಾಲೇಜು ನೀಡಿದರು.
2013 ರಿಂದ 2018ರವರೆಗೆ ಜಿಲ್ಲೆಯಲ್ಲಿ ಕಾಂಗ್ರೆಸ್ ಶಾಸಕರಿದ್ದರು. ನಿಮ್ಮ ಬೇಜವಾಬ್ದಾರಿತನದಿಂದ ಭದ್ರಾ ಕಾಮಗಾರಿ ಕುಂಠಿತವಾಯಿತು. ಇಂದಿನ ಸಿಎಂ ಅಂದು ಜಲಸಂಪನ್ಮೂಲ ಸಚಿವರಾಗಿದ್ದಾಗ ಭದ್ರಾದಿಂದ ವಾಣಿ ವಿಲಾಸ ಜಲಾಶಯಕ್ಕೆ 5 ಟಿಎಂಸಿ ನೀರು ಹಂಚಿಕೆ ಮಾಡಿದ್ದರು. ಆದರೆ ಕಾಂಗ್ರೆಸ್ ಸರ್ಕಾರ ಮಾಜಿ ಸಚಿವ ಟಿಬಿ ಜಯಚಂದ್ರ ಅವರು 3 ಟಿಎಂಸಿ ನೀರನ್ನು ತುಮಕೂರಿಗೆ ಕೊಂಡೊಯ್ಯುವ ಕೆಲಸ ಮಾಡಿದರು. ಆಗ ಇಲ್ಲಿನ ಕಾಂಗ್ರೆಸ್ ಶಾಸಕರು ಯಾಕೆ ಮೌನವಾಗಿದ್ರಿ ? ಮಾಜಿ ಸಚಿವ ಡಿ ಸುಧಾಕರ್ ಅವರು ಯಾವುದೋ ಆಸೆ ಆಮಿಷಗಳಿಗೆ ಒಳಗಾಗಿ ಹಿರಿಯೂರು ಮತ್ತು ಜಿಲ್ಲೆಯ ಜನತೆಯನ್ನು ಕಷ್ಟಕ್ಕೆ ದೂಡಿದರು. ಹತ್ತು ವರ್ಷ ಆಡಳಿತ ನಡೆಸಿದ ನೀವು ಹಿರಿಯೂರಿಗೆ ಒಂದು ಯುಜಿಡಿ ತರಲು ನಿಮ್ಮ ಕೈಯಲ್ಲಿ ಸಾಧ್ಯವಾಗಲಿಲ್ಲ. ವಾಣಿ ವಿಲಾಸ ಜಲಾಶಯದ ನೀರಿನ ಬಗ್ಗೆ ಒಂದೇ ಒಂದು ಧ್ವನಿ ಎತ್ತಿದ ನಿದರ್ಶನಗಳು ಇದ್ದರೆ ತೋರಿಸಲಿ, ಸುಧಾಕರ್ ಸಾಧನೆ ಶೂನ್ಯ, ಇವರು ಜಾತಿ ಜಾತಿಗಳ ನಡುವೆ ಘರ್ಷಣೆ ತಂದಿದ್ದಾರೆ ಎಂದು ಸುಧಾಕರ್ ವಿರುದ್ಧ ವಾಗ್ದಾಳಿ ನಡೆಸಿದರು. ಕಾಂಗ್ರೆಸ್ ಕೊಡುಗೆ ಚಿತ್ರದುರ್ಗ ಜಿಲ್ಲೆಗೆ ಶೂನ್ಯ ಎಂದು ಕಿಡಿ ಕಾರಿದರು.
ನಮ್ಮ ಬಿಜೆಪಿ ಸರ್ಕಾರ ಬಂದಮೇಲೆ ವಿವಿ ಸಾಗರಕ್ಕೆ ಸುಮಾರು 16 ಟಿಎಂಸಿ ನೀರು ಹರಿದು ಬಂದಿದೆ. ನಾನು, ಸಂಸದರು, ಜಿಲ್ಲೆಯ ಬಿಜೆಪಿ ಶಾಸಕರು ಸೇರಿ ಬದ್ಧತೆಯಿಂದ ಕೆಲಸ ಮಾಡಿದ್ದೇವೆ. ಇತ್ತ ಹಿರಿಯೂರು ಕ್ಷೇತ್ರದಲ್ಲಿ ಧರ್ಮಪುರ ಕೆರೆಗೆ ನೀರು ಹರಿಸುವ ಕಾಮಗಾರಿ, ಬಸ್ ಡಿಪೋ, ಆಸ್ಪತ್ರೆ ನಿರ್ಮಾಣ ಈಗ ಕ್ಷೇತ್ರದ ಅಭಿವೃದ್ಧಿಯತ್ತ ಸಾಗಿದೆ. ಜಿಲ್ಲೆಯಲ್ಲಿ ಕಾಂಗ್ರೆಸ್ ನವರಿಗೆ ಮತಕೇಳುವ ನೈತಿಕತೆ ಇಲ್ಲ ಎಂದು ಹರಿಹಾಯ್ದರು.