ಚಿಕ್ಕಮಗಳೂರು: ದತ್ತಪೀಠದಲ್ಲಿ ಮತ್ತೆ ಮಾಂಸಾಹಾರವನ್ನು ಮಾಡಿದ್ದು, ಹಿಂದೂಪರ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ. ಕಳೆದ ನಾಲ್ಕೈದು ತಿಂಗಳ ಹಿಂದೆಯೇ ದತ್ತಪೀಠದಲ್ಲಿ ಬಿರಿಯಾನಿ ಸೇವಿಸಿದ್ದರು. ಆಗಲೂ ಹಿಂದೂಪರ ಸಂಘಟನೆಗಳು ಜಿಲ್ಲಾಡಳಿತಕ್ಕೆ ದೂರು ನೀಡಿದ್ದರು. ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ತಿಳಿಸಿತ್ತು. ಆದರೆ ಇದೀಗ ಮತ್ತೆ ಪ್ರವಾಸಿಗರು ಮಾಂಸ ಬೇಯಿಸಿದ್ದಾರೆ.
ದತ್ತ ಮಾಲಾಧಾರಣೆ ಹಾಗೂ ದತ್ತ ಜಯಂತಿಯಂದು ಹಿಂದೂ ಸಂಘಟನೆಗಳು ಹೋಮ ಹವನ ಮಾಡಲು ಸರ್ಕಾರವೇ ಶೆಡ್ ನಿರ್ಮಾಣ ಮಾಡಲಾಗಿತ್ತು. ಈ ಶೆಡ್ ಗಳಲ್ಲಿ ಪ್ರವಾಸಿಗರು ಮತ್ತೆ ಮಾಂಸ ಬೇಯಿಸಿದ್ದಾರೆ. ಇದು ಇಂದಿಗೆ ಕೊನೆಯಾಗಬೇಕು. ಜಿಲ್ಲಾಡಳಿತ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಇಲ್ಲವಾದರೆ ನಾವೇ ತಕ್ಕ ಪಾಠ ಕಲಿಸುತ್ತೇವೆ ಎಂದು ಯುವ ಬ್ರಿಗೇಡ್ ಎಚ್ಚರಿಕೆ ನೀಡಿದೆ.
ಸರ್ಕಾರ ಕೊಟ್ಟ ಮಾತನ್ನ ಉಳಿಸಿಕೊಂಡಿಲ್ಲ. ಸರ್ಕಾರದ ನಿರ್ಲಕ್ಷ್ಯದಿಂದಲೇ ಪ್ರವಾಸಿಗರು ಪುಣ್ಯಕ್ಷೇತ್ರದಲ್ಲಿ ಎಲ್ಲೆಂದರಲ್ಲಿ ಮಾಂಸ ಕಡಿದು, ಬೇಯಿಸುತ್ತಿದ್ದಾರೆ. ದತ್ತಪೀಠ ಪ್ರವಾಸಿಗರ ತಾಣವಲ್ಲ. ಪ್ರವಾಸಿ ತಾಣಗಳು ಬೇಕು ಅಂದ್ರೆ ಗಿರಿಶ್ರೇಣಿಯಲ್ಲಿ ಬೇರೆ ಸ್ಥಳಗಳಿವೆ. ಎರಡು ಕೋಮುಗಳು ಕೂಡ ದತ್ತಪೀಠವನ್ನ ಧಾರ್ಮಿಕ ಕ್ಷೇತ್ರ ಎಂದು ನಂಬಿವೆ. ಹೋಮ-ಹವನಕ್ಕೆ ಸರ್ಕಾರವೇ ತಾತ್ಕಾಲಿಕ ಶೆಡ್ ನಿರ್ಮಿಸಿಕೊಟ್ಟಿದೆ. ಅಲ್ಲಿ ಈ ರೀತಿ ಮಾಂಸ ಬೇಯಿಸಿದರೆ ಅದು ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತರಲಿದೆ ಎಂದು ಯುವ ಬ್ರಿಗೇಡ್ ಸಂಚಾಲಕ ಪ್ರವೀಣ್ ಹೇಳಿದ್ದಾರೆ.