ಬೆಂಗಳೂರು, ಸುದ್ದಿಒನ್, (ಅ.08): ಪಕ್ಷದ ನೂತನ ಅಧ್ಯಕ್ಷರಾಗಿ ಯಾರೇ ಆಯ್ಕೆಯಾಗಲಿ, ಅವರು ರಿಮೋಟ್ ಕಂಟ್ರೋಲ್ ಅಧ್ಯಕ್ಷರಾಗಿರುವುದಿಲ್ಲ. ಬದಲಾಗಿ ಅವರೇ ಸ್ವತಃ ನಿರ್ಧಾರಗಳನ್ನು ತೆಗೆದುಕೊಳ್ಳುವ ಮತ್ತು ಸಂಘಟನೆಯನ್ನು ನಡೆಸುವ ಅಧಿಕಾರವನ್ನು ಹೊಂದಿರುತ್ತಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಂದು ಪ್ರತಿಪಾದಿಸಿದ್ದಾರೆ.
LIVE: Shri @RahulGandhi addresses media amid Karnataka leg of the #BharatJodoYatra. https://t.co/9yyDUrZwuZ
— Congress (@INCIndia) October 8, 2022
ಕರ್ನಾಟಕದಲ್ಲಿ ಸಂಚರಿಸುತ್ತಿರುವ ಭಾರತ್ ಜೋಡೋ ಯಾತ್ರೆಯಲ್ಲಿ ಮಾಧ್ಯಮಗಳೊಂದಿಗೆ ಸಂವಾದ ನಡೆಸಿ ರಾಹುಲ್ ಗಾಂಧಿ ಮಾತನಾಡಿ, ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸುವ ಇಬ್ಬರೂ ತಮ್ಮದೇ ಆದ ದೃಷ್ಟಿಕೋನವನ್ನು ಹೊಂದಿದ್ದಾರೆ.
22 ವರ್ಷಗಳ ನಂತರ ಅಕ್ಟೋಬರ್ 17 ರಂದು ಕಾಂಗ್ರೆಸ್ ಅಧ್ಯಕ್ಷೀಯ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ಶಶಿ ತರೂರ್ ಇಬ್ಬರು ಅಭ್ಯರ್ಥಿಗಳು ಉನ್ನತ ಸ್ಥಾನಕ್ಕಾಗಿ ಪೈಪೋಟಿ ನಡೆಸುತ್ತಿದ್ದಾರೆ. ಅಕ್ಟೋಬರ್ 19 ರಂದು ಮತ ಎಣಿಕೆ ನಡೆಯಲಿದೆ.
ತಮ್ಮ ಪಕ್ಷದ ನಿಲುವನ್ನು ವಿವರಿಸುತ್ತಾ, ನಾವು ಫ್ಯಾಸಿಸ್ಟ್ ಪಕ್ಷದವರಲ್ಲ. ನಾವು ವಿಭಿನ್ನ ದೃಷ್ಟಿಕೋನಗಳನ್ನು ಸ್ವಾಗತಿಸುತ್ತೇವೆ. ಚುನಾವಣೆಗಳನ್ನು ಗೆಲ್ಲಲು ನಾವು ಒಗ್ಗಟ್ಟಾಗಿ ಕೆಲಸ ಮಾಡಬೇಕು ಎಂದು ನಮಗೆ ಅರಿವಿದೆ. ”
“ನಮ್ಮ ಸಂವಿಧಾನದಲ್ಲಿ ಹೇಳಿದಂತೆ, ಭಾರತವು ರಾಜ್ಯಗಳ ಒಕ್ಕೂಟವಾಗಿದೆ. ಇದರರ್ಥ ನಮ್ಮ ಎಲ್ಲಾ ಭಾಷೆಗಳು, ರಾಜ್ಯಗಳು ಮತ್ತು ಸಂಪ್ರದಾಯಗಳಿಗೆ ಸಮಾನವಾದ ಗೌರವವಿದೆ. ಅದು ನಮ್ಮ ದೇಶದ ಸ್ವಭಾವವಾಗಿದೆ. ದೇಶದಲ್ಲಿ ದ್ವೇಷ ಮತ್ತು ಹಿಂಸಾಚಾರವನ್ನು ಹರಡುವುದು ದೇಶ ವಿರೋಧಿ ಕೃತ್ಯವಾಗಿದೆ. ನಾವು ದ್ವೇಷ ಮತ್ತು ಹಿಂಸಾಚಾರವನ್ನು ಹರಡುವ ಯಾರೊಂದಿಗಾದರೂ ಹೋರಾಡುತ್ತೇವೆ, ”ಎಂದು ಅವರು ಹೇಳಿದರು.
ಬಿಜೆಪಿಯನ್ನು ಗುರಿಯಾಗಿಸಿ ಮಾತನಾಡಿದ ಅವರು,”ಬಿಜೆಪಿ ರಾಷ್ಟ್ರವನ್ನು ವಿಭಜಿಸುತ್ತಿದೆ ಮತ್ತು ಈ ರಾಷ್ಟ್ರದಲ್ಲಿ ದ್ವೇಷವನ್ನು ಹರಡುತ್ತಿದೆ. ದ್ವೇಷವನ್ನು ಹರಡುವುದು ಮತ್ತು ರಾಷ್ಟ್ರವನ್ನು ಒಡೆಯುವುದು ಒಳ್ಳೆಯದಲ್ಲ. ಅದಕ್ಕಾಗಿಯೇ ನಾವು ‘ಭಾರತ್ ಜೋಡೋ ಯಾತ್ರೆ’ ಮಾಡುತ್ತಿದ್ದೇವೆ. ಮತ್ತು ನಾನು ನಿಮಗೆ ಹೇಳುತ್ತೇನೆ, ‘ಭಾರತ್ ಜೋಡೋ ಯಾತ್ರೆ’ ಮಾಡುತ್ತಿರುವುದು ನಾನೊಬ್ಬನೇ ಅಲ್ಲ, ‘ಭಾರತ್ ಜೋಡೋ ಯಾತ್ರೆ’ ಮಾಡುವವರು ಲಕ್ಷ ಲಕ್ಷ ಜನರಿದ್ದಾರೆ.
ಬಿಜೆಪಿಯವರು ಪ್ರಚಾರ ಮಾಡುತ್ತಿರುವ ರೀತಿಯ ರಾಜಕೀಯದಿಂದ ಭಾರತದ ಜನರು ಬೇಸತ್ತಿದ್ದಾರೆ, ಬೆಲೆ ಏರಿಕೆ ಮತ್ತು ನಿರುದ್ಯೋಗದಿಂದ ಬೇಸತ್ತಿದ್ದಾರೆ ಎಂದು ಅವರು ಹೇಳಿದರು.
ಮಾಧ್ಯಮಗೋಷ್ಠಿಯಲ್ಲಿ ಹಿರಿಯ ಕಾಂಗ್ರೆಸ್ ನಾಯಕರಾದ ಜೈರಾಮ್ ರಮೇಶ್, ರಣದೀಪ್ ಸುರ್ಜೆವಾಲಾ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಉಪಸ್ಥಿತರಿದ್ದರು.