ನಾಗ್ಪುರ : ವರ್ಣ ಮತ್ತು ಜಾತಿಯಂತಹ ಪರಿಕಲ್ಪನೆಗಳನ್ನು ಸಂಪೂರ್ಣವಾಗಿ ತ್ಯಜಿಸಬೇಕು ಎಂದು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಶುಕ್ರವಾರ ಹೇಳಿದ್ದಾರೆ.
ಅವರು ನಾಗ್ಪುರದಲ್ಲಿ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡುತ್ತಾ ಈ ಹೇಳಿಕೆ ನೀಡಿದ್ದಾರೆ. ಡಾ ಮದನ್ ಕುಲಕರ್ಣಿ ಮತ್ತು ಡಾ ರೇಣುಕಾ ಬೋಕರೆ ಅವರು ಬರೆದಿರುವ ವಜ್ರಸುಚಿ ಟಂಕ್ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಅವರು, ಜಾತಿ ವ್ಯವಸ್ಥೆಗೆ ಈಗ ಯಾವುದೇ ಪ್ರಾಮುಖ್ಯತೆ ಇಲ್ಲ. ಸಾಮಾಜಿಕ ಸಮಾನತೆ ಭಾರತೀಯ ಸಂಪ್ರದಾಯದ ಒಂದು ಭಾಗವಾಗಿದೆ. ಆದರೆ ಅದನ್ನು ಮರೆತು ಹಾನಿಕಾರಕ ಪರಿಣಾಮಗಳಿಗೆ ನಾವೆಲ್ಲರೂ ಕಾರಣವಾಗಿದ್ದೇವೆ.
ವರ್ಣ ಮತ್ತು ಜಾತಿ ವ್ಯವಸ್ಥೆಯು ಮೂಲತಃ ತಾರತಮ್ಯವನ್ನು ಹೊಂದಿರಲಿಲ್ಲ. ತಾರತಮ್ಯಕ್ಕೆ ಕಾರಣವಾಗುವ ಎಲ್ಲವುಗಳಿಂದ ಹೊರಹೋಗಬೇಕು” ಎಂದು ಆರ್ಎಸ್ಎಸ್ ಮುಖ್ಯಸ್ಥರು ಹೇಳಿದ್ದಾರೆ.
ಹಿಂದಿನ ತಲೆಮಾರಿನವರು ತಪ್ಪುಗಳನ್ನು ಮಾಡಿದ್ದಾರೆ. ಮತ್ತು ಭಾರತವು ಇದಕ್ಕೆ ಹೊರತಾಗಿಲ್ಲ. ಆ ತಪ್ಪುಗಳನ್ನು ಒಪ್ಪಿಕೊಳ್ಳಲು ಯಾವುದೇ ಸಮಸ್ಯೆ ಇರಬಾರದು. ನಮ್ಮ ಪೂರ್ವಜರು ತಪ್ಪುಗಳನ್ನು ಮಾಡಿದ್ದಾರೆ ಎಂದು ಒಪ್ಪಿಕೊಳ್ಳುವ ಮೂಲಕ ಅವರಿಗೆ ಅವಮಾನ ಮಾಡಿದಂತಾಗುತ್ತದೆ ಎಂದು ನೀವು ಭಾವಿಸಿದರೆ ಅದು ತಪ್ಪಾಗುತ್ತದೆ. ಏಕೆಂದರೆ ಪ್ರತಿಯೊಬ್ಬರ ಪೂರ್ವಜರು ತಪ್ಪುಗಳನ್ನು ಮಾಡಿದ್ದಾರೆ ಎಂದು ಭಾಗವತ್ ಹೇಳಿದರು.