ಚಿತ್ರದುರ್ಗ:ಅ.7:ಭಾರತ ದೇಶ ಈಗ ಸಂಕಷ್ಟದ ಸ್ಥಿತಿಯಲ್ಲಿದ್ದು ಅಘೋಷಿತ ತುರ್ತು ಪರಿಸ್ಥಿತಿ ಇದೆ. ದೇಶದಲ್ಲಿ ದ್ವೇಷಮಯ ವಾತಾವರಣವಿದ್ದು ಜನರನ್ನು ಎತ್ತಿಕಟ್ಟುವ ಕೆಲಸವಾಗುತ್ತಿದೆ ಎಂದು ಕೆಪಿಸಿಸಿ ಉಪಾಧ್ಯಕ್ಷ, ಮಾಜಿ ಸಚಿವ ಎಚ್.ಆಂಜನೇಯ ಹೇಳಿದ್ದಾರೆ.
ಶುಕ್ರವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, ಮನಸ್ಸುಗಳನ್ನು ಒಡೆಯಲಾಗುತ್ತಿದೆ. ಸೌಹಾರ್ದದ ಭಾವನೆ ಹೊರಟುಹೋಗಿದೆ. ಹಿಂಸಾಚಾರ ಹೆಚ್ಚಾಗಿದೆ. ಕ್ಷುಲ್ಲಕ ಕಾರಣಗಳಿಗಾಗಿ ಜನರನ್ನು ಕೊಲ್ಲಲಾಗುತ್ತಿದೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನ ಅಪಾಯದಲ್ಲಿದೆ. ಭಾರತದ ಸಂವಿಧಾನಕ್ಕೆ ಬೆಲೆಯನ್ನೇ ನೀಡಲಾಗುತ್ತಿಲ್ಲ. ನಾಗರೀಕತೆಯ ಅಡಿಪಾಯದ ಮೇಲೆ ದಾಳಿ ನಡೆಯುತ್ತಿದೆ. ಇಡೀ ದೇಶ ಸಂಕಷ್ಟದ ಸಮಯವನ್ನು ಎದುರಿಸುತ್ತಿದೆ.
ಜನರ ಭಾವನೆಗಳಿಗೆ ಬೆಲೆಯೇ ಇಲ್ಲದಂತಾಗಿದ್ದು ಮತದಾರರ ಮೇಲೆ ಏಕತೆಯನ್ನು ಹೇರಲಾಗುತ್ತಿದೆ. ಬಹುತ್ವಕ್ಕೆ ಪೆಟ್ಟು ನೀಡಲಾಗುತ್ತಿದೆ. ವೈವಿಧ್ಯತೆಯನ್ನು ಸಹಿಸಿಕೊಳ್ಳುವ ಮನಸ್ಥಿತಿ ದೂರವಾಗುತ್ತಿದೆ. ಅಭಿವ್ಯಕ್ತಿ ಸ್ವಾತಂತ್ರ್ಯ ಅಪಾಯದಲ್ಲಿದೆ. ತಮ್ಮ ಅಭಿಪ್ರಾಯಗಳನ್ನು ಬೆಂಬಲಿಸದೇ ಇರುವ ವ್ಯಕ್ತಿಗಳ ಮೇಲೆ ಪ್ರಕರಣ ದಾಖಲಿಸಿ ಬಂಧಿಸಲಾಗುತ್ತಿದೆ. ವಿರೋಧ ಪಕ್ಷಗಳ ಮೇಲೆ ಸಿಬಿಐ, ಇ.ಡಿ ಮುಂತಾದ ಸಂಸ್ಥೆಗಳನ್ನು ಛೂಬಿಟ್ಟು ಹಿಂಸೆ ಕೊಡಲಾಗುತ್ತಿದೆ. ಪೊಲೀಸ್ ರಾಜ್ಯ ವಿಜೃಂಭಿಸುತ್ತಿದೆ.
ದೇಶದಲ್ಲಿ ಈಗ ನಿರುದ್ಯೋಗ ಹೆಚ್ಚಾಗುತ್ತಿದೆ. ಬಡತನವೂ ಏರುತ್ತಿದೆ. ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಏರಿದೆ. ಬಡಜನರ ನೋವನ್ನು ಕೇಳುವ ಕಿವಿಗಳು ಇಲ್ಲ. ಅವರ ಕಣ್ಣೀರು ಒರೆಸುವವರು ಕಾಣುತ್ತಿಲ್ಲ. ಬದುಕು ದುಸ್ತರವಾಗಿದೆ.ಇಂತಹ ಸಂದರ್ಭದಲ್ಲಿ ಒಡೆದ ಮನಸ್ಸುಗಳನ್ನು ಒಟ್ಟುಗೂಡಿಸುವ ದೃಷ್ಟಿಯಿಂದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಭಾರತ್ ಜೋಡೋ ಪಾದಯಾತ್ರೆ ಕೈಗೊಂಡಿದ್ದಾರೆ.
ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ನಡೆಯುತ್ತಿರುವ ಈ ಪಾದಯಾತ್ರೆಯಲ್ಲಿ ರಾಹುಲ್ ಗಾಂಧಿ ಅವರು ಜನರ ಸಮಸ್ಯೆಗಳನ್ನು ಆಲಿಸಲಿದ್ದಾರೆ. ಎಲ್ಲ ಜಾತಿ, ಧರ್ಮ, ಪಂಥ, ಭಾಷೆಯ ಜನರನ್ನೂ ಭೇಟಿ ಮಾಡುತ್ತಿದ್ದಾರೆ. ಅವರ ನೋವುಗಳಿಗೆ ಸ್ಪಂದಿಸುತ್ತಿದ್ದಾರೆ. ದೇಶ ಸಂಕಟದಲ್ಲಿರುವ ಈ ಸಮಯದಲ್ಲಿ ನಾವೆಲ್ಲರೂ ಅವರ ಜೊತೆಗೆ ಹೆಜ್ಜೆ ಹಾಕಬೇಕಿದೆ. ಹೊಸ ನಾಡೊಂದನ್ನು ಕಟ್ಟಬೇಕಿದೆ. ಈ ಮಹತ್ತರ ಕಾರ್ಯದಲ್ಲಿ ತಾವೆಲ್ಲರೂ ಭಾಗಿಯಾಗಬೇಕು. ಭಾರತದ ಭವಿಷ್ಯದ ನಾಯಕ ರಾಹುಲ್ ಗಾಂಧಿ ಅವರ ಜೊತೆಗೆ ಹೆಜ್ಜೆ ಹಾಕಬೇಕು ಎಂದು ಮಾಜಿ ಸಚಿವ ಎಚ್.ಆಂಜನೇಯ ಮನವಿ ಮಾಡಿದ್ದಾರೆ.