ಚಿತ್ರದುರ್ಗ, (ಅ.02) : ರಾಜ್ಯದಲ್ಲಿ ಒಂದು ಕೋಟಿ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯತ್ವ ಗುರಿ ಹೊಂದಿರುವುದು ಉತ್ತಮ ಬೆಳವಣಿಗೆ ಎಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನೀಕೇರಿ ಹೇಳಿದ್ದಾರೆ.
ಅವರು ಭಾನುವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ಆನ್‍ಲೈನ್ ಸದಸ್ಯತ್ವ ನೊಂದಣಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು. 18 ವರ್ಷ ತುಂಬಿದ ಎಲ್ಲ ವ್ಯಕ್ತಿಗಳು ಸದಸ್ಯತ್ವ ಪಡೆಯಬಹುದಾಗಿದೆ. ಅರ್ಜಿ ನಮೂನೆ ಸಲ್ಲಿಸುವುದಕ್ಕಿಂತ ಆನ್‍ಲೈನ್ ಮೂಲಕ ಸದಸ್ಯತ್ವ ನೋಂದಣಿ ಮಾಡುವುದು ಸುಲಭವಾಗಿದೆ. ಸದಸ್ಯತ್ವ ಶುಲ್ಕ 250 ರೂ ಮತ್ತು ಸ್ಮಾರ್ಟ್ ಕಾರ್ಡ್ ಪಡೆಯಲು 150 ರೂ ಒಟ್ಟಾರೆ 400 ರೂಗಳಿಗೆ ಕಸಾಪ ಸದಸ್ಯತ್ವ ಪಡೆಯಬಹುದಾಗಿದೆ. ತಮ್ಮ ಮೊಬೈಲ್ ನಲ್ಲಿರುವ ಪ್ಲೇ ಸ್ಟೋರ್ ನಲ್ಲಿ ಕಸಾಪ ವಿಳಾಸದಲ್ಲಿ ಹುಡುಕಿ ಸದಸ್ಯತ್ವ ಪಡೆಯುವುದು ಸುಲಭವಾಗಿದೆ ಎಂದು ಹೇಳಿದರು.
ಕಸಾಪ ಜಿಲ್ಲಾಧ್ಯಕ್ಷ ಕೆ.ಎಂ.ಶಿವಸ್ವಾಮಿ ಮಾತನಾಡಿ, ರಾಜ್ಯದಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಆನ್ ಲೈನ್ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ಕಸಾಪ ದ ಪ್ರತಿ ತಾಲ್ಲೂಕು,ಹೋಬಳಿ ಘಟಕಗಳ ಪದಾಧಿಕಾರಿಗಳನ್ನು ಸಂಪರ್ಕಿಸಿ ಸದಸ್ಯತ್ವ ಪಡೆಯಬಹುದಾಗಿದೆ. ಗೂಗಲ್ ಪ್ಲೇಸ್ಟೋರ್ ಮತ್ತು ಕಸಾಪ ವೆಬ್ ಸೈಟ್‍ನಲ್ಲಿಯೂ ಸದಸ್ಯತ್ವಕ್ಕೆ ಅವಕಾಶ ಕಲ್ಪಿಸಲಾಗಿದೆ. ಇದರಿಂದ ಸಮಯ ಮತ್ತು ಶ್ರಮ ಕಡಿಮೆಯಾಗಲಿದೆ. ರಾಜ್ಯ,ದೇಶ ಮತ್ತು ಪ್ರಪಂಚದ ಯಾವುದೇ ಮೂಲೆಯಲ್ಲಿರುವ ಕನ್ನಡಿಗರು ಸುಲಭವಾಗಿ ಕಸಾಪ ಸದಸ್ಯತ್ವ ಪಡೆಯಬಹುದಾಗಿದೆ. ಪ್ರತಿ ಮನೆಗೆ ಕಸಾಪ ಮುಟ್ಟಬೇಕು ಎನ್ನುವ ಉದ್ದೇಶವನ್ನು ಪರಿಷತ್ತು ಹೊಂದಿದೆ. ಸಮಾಜದಲ್ಲಿರುವ ಎಲ್ಲ ವರ್ಗಗಳ ಹಾಗೂ ರಾಜ್ಯದಲ್ಲಿ ಎಲ್ಲ ಗ್ರಾಮ ಮತ್ತು ಪಟ್ಟಣಗಳ ಜನರನ್ನು ತಲುಪುವ ಉದ್ದೇಶ ಹೊಂದಲಾಗಿದೆ. ಒಂದು ನಿಮಿಷದಲ್ಲಿ ಈ ಪ್ರಕ್ರಿಯೆ ಮುಕ್ತಾಯಗೊಳ್ಳಲಿದೆ. ಆಧಾರ್ ಸಂಖ್ಯೆ, ಪೋಟೋ ಹಾಗೂ 400 ರೂಗಳನ್ನು ಆನ್ ಲೈನ್ ಮೂಲಕ ಪಾವತಿಸಿ ಸದಸ್ಯತ್ವ ಪಡೆಯಬಹುದಾಗಿದೆ. ಪ್ಲೇ ಸ್ಟೋರ್ ನಲ್ಲಿ
https://play.google.com/store/apps/details?id=com.knobly.kasapa
ಜಾಲತಾಣದ ಮೂಲಕವೂ ಸದಸ್ಯತ್ವ ಪಡೆಯಲು ಈ ಲಿಂಕ್ ಬಳಸಿ
https://kannadasahithyaparishattu.in/app
ಸದಸ್ಯತ್ವ ಪಡೆಯಬಹುದಾಗಿದೆ. ಒಂದು ತಿಂಗಳ ಒಳಗೆ ಕೊರಳು ಪಟ್ಟಿ ಹೊಂದಿರುವ ಮೈಕ್ರೋಚಿಪ್ ಅಳವಡಿಸಿರುವ ಅತ್ಯಾಧುನಿಕ ಸ್ಮಾರ್ಟ ಗುರುತಿನ ಕಾರ್ಡ ಮನೆಗೆ ತಲುಪಲಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣ, ಉಪವಿಭಾಗಾಧಿಕಾರಿ ಆರ್.ಚಂದ್ರಯ್ಯ,ವಾರ್ತಾಧಿಕಾರಿ ಬಿ.ವಿ.ತುಕಾರಾಮ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ್, ಕಸಾಪ ಜಿಲ್ಲಾ ಕಾರ್ಯದರ್ಶಿ ಕೆ.ಪಿ.ಎಂ. ಗಣೇಶಯ್ಯ, ಸಂಘಟನಾ ಕಾರ್ಯದರ್ಶಿ ವಿ.ಧನಂಜಯ, ಹಿರಿಯ ಪತ್ರಕರ್ತ ಟಿ.ಕೆ.ಬಸವರಾಜ್, ಹೊಳಲ್ಕೆರೆ ಕಸಾಪ ಅಧ್ಯಕ್ಷ ಶಿವಮೂರ್ತಿ, ಹಿರಿಯೂರು ಅಧ್ಯಕ್ಷ ನಾಗೇಶ್, ಚಿತ್ರದುರ್ಗ ಅಧ್ಯಕ್ಷ ರಾಮಲಿಂಗಶೆಟ್ಟಿ, ಪದಾಧಿಕಾರಿಗಳಾದ ರೀನಾ ವೀರಭದ್ರಪ್ಪ, ಚಂದ್ರಿಕಾ, ಕಾಂತರಾಜ್ ಮತ್ತಿತರರಿದ್ದರು.