ಮಲ್ಲಿಕಾರ್ಜುನ ಖರ್ಗೆಯವರಿಂದ ಪಕ್ಷದಲ್ಲಿ ಬದಲಾವಣೆ ತರಲು ಸಾಧ್ಯವಿಲ್ಲ : ಶಶಿ ತರೂರ್

ನಾಗ್ಪುರ : ಅಧ್ಯಕ್ಷ ಸ್ಥಾನದ ರೇಸ್‌ನಲ್ಲಿರುವ ಮಲ್ಲಿಕಾರ್ಜುನ ಖರ್ಗೆ ಅವರು ಪಕ್ಷದಲ್ಲಿ ಯಾವುದೇ ರೀತಿಯ ಬದಲಾವಣೆ ತರಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣಾ ಅಭ್ಯರ್ಥಿ ಶಶಿ ತರೂರ್ ಹೇಳಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ ಅವರಂತಹ ನಾಯಕರಿಂದ ಪಕ್ಷದಲ್ಲಿ ಬದಲಾವಣೆ ತರಲು ಸಾಧ್ಯವಿಲ್ಲ, ಈಗಿರುವ ಪದ್ಧತಿಯೇ  ಮುಂದುವರಿಯುತ್ತದೆ ಎಂದು ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಅಖಾಡಕ್ಕಿಳಿದಿರುವ ಸಂಸದ ಶಶಿ ತರೂರ್ ಹೇಳಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ತಮ್ಮ ವಾದವನ್ನು ಮಂಡಿಸಿದ ಶಶಿ ತರೂರ್, ಒಂದು ವೇಳೆ ನಾನು ಆಯ್ಕೆಯಾದರೆ ಪಕ್ಷದ ಕಾರ್ಯಕರ್ತರ ನಿರೀಕ್ಷೆಗೆ ತಕ್ಕಂತೆ ಬದಲಾವಣೆಗಳನ್ನು ತರುತ್ತೇನೆ ಎಂದು ಹೇಳಿದರು.

“ನಾವು ಶತ್ರುಗಳಲ್ಲ, ಇದು ಯುದ್ಧವಲ್ಲ. ಇದು ನಮ್ಮ ಪಕ್ಷದ ಭವಿಷ್ಯಕ್ಕಾಗಿ ನಡೆಯುತ್ತಿರುವ ಚುನಾವಣೆ ಇದು. ಕಾಂಗ್ರೆಸ್ ಪಕ್ಷದ ಪ್ರಮುಖ ಮೂವರು ನಾಯಕರಲ್ಲಿ ಖರ್ಗೆಯವರು ಒಬ್ಬರು. ಆದರೆ ಅವರಂತಹ ನಾಯಕರು ಬದಲಾವಣೆ ತರಲು ಸಾಧ್ಯವಿಲ್ಲ. ಬದಲಾಗಿ ಈಗಿರುವ ವ್ಯವಸ್ಥೆಯನ್ನು ಅವರು ಮುಂದುವರಿಸುತ್ತಾರೆ ಅಷ್ಟೇ ಎಂದು ಶಶಿ ತರೂರ್ ನಾಗ್ಪುರದಲ್ಲಿ ಹೇಳಿದ್ದಾರೆ.

ನಾನು ಯಾರನ್ನೂ ವಿರೋಧಿಸಲು ಚುನಾವಣೆಗೆ ಇಳಿದಿಲ್ಲ, ಆದರೆ ಪಕ್ಷವನ್ನು ಬಲಪಡಿಸಲು, ಹಿರಿಯರು ಮತ್ತು ಸಹೋದ್ಯೋಗಿಗಳು  ಅಖಾಡಕ್ಕೆ ಇಳಿಯುವಂತೆ ಒತ್ತಾಯಿಸಿದ ಕಾರಣ ನಾನು ಚುನಾವಣೆಗೆ ಸ್ಪರ್ಧಿಸಲು ನಿರ್ಧರಿಸಿರುವುದಾಗಿ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದರು.

ಜಾರ್ಖಂಡ್‌ನ ಮಾಜಿ ಸಚಿವ ಕೆಎನ್ ತ್ರಿಪಾಠಿ ಅವರ ನಾಮಪತ್ರ ಶನಿವಾರ ತಿರಸ್ಕೃತಗೊಂಡ ನಂತರ ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಮತ್ತು ಶಶಿ ತರೂರ್ ಕಣದಲ್ಲಿ ಉಳಿದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *