Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಅಕ್ಟೋಬರ್ 31 ರವರೆಗೆ ಜಾನುವಾರು ಸಂತೆ, ಜಾತ್ರೆ ಮತ್ತು ಜಾನುವಾರು ಸಾಗಾಣಿಕೆ ನಿಷೇಧ: ಜಿಲ್ಲಾಧಿಕಾರಿ ಆದೇಶ

Facebook
Twitter
Telegram
WhatsApp

ಚಿತ್ರದುರ್ಗ,(ಅಕ್ಟೋಬರ್ 01) : ಜಿಲ್ಲೆಯ ಜಾನುವಾರುಗಳಲ್ಲಿ ಚರ್ಮಗಂಟು ರೋಗ ಕಾಣಿಸಿಕೊಂಡಿರುವುದರಿಂದ ರೋಗದ ಹರಡುವಿಕೆಯನ್ನು ತಡೆಗಟ್ಟಲು ಮುಂಜಾಗ್ರತಾ ಕ್ರಮವಾಗಿ ಚಿತ್ರದುರ್ಗ ಜಿಲ್ಲೆಯಾದ್ಯಂತ ಜಾನುವಾರು ಸಂತೆ, ಜಾನುವಾರು ಜಾತ್ರೆ ಜರುಗಿಸುವುದು ಹಾಗೂ ಜಾನುವಾರು ಸಾಗಾಣಿಕೆಯನ್ನು ಮಾಡುವುದನ್ನು ಅಕ್ಟೋಬರ್ 01 ರಿಂದ 31 ರವರೆಗೆ ಸಿ.ಆರ್.ಪಿ.ಸಿ ಕಾಯ್ದೆ 1973ರ ಕಲಂ 144 ಮೇರೆಗೆ ಅಧಿಕಾರವನ್ನು ಚಲಾಯಿಸಿ, ಪ್ರತಿಬಂಧಕಾಜ್ಞೆಯನ್ನು ಜಾರಿ ಮಾಡಿ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಆದೇಶಿಸಿದ್ದಾರೆ.

ಜಿಲ್ಲೆಯ 36 ಗ್ರಾಮಗಳಲ್ಲಿ ದನ, ಎಮ್ಮೆಗಳಲ್ಲಿ ಚರ್ಮಗಂಟು ರೋಗ ಕಾಣಿಸಿಕೊಂಡಿದ್ದು, ರೋಗಕ್ಕೆ ಚಿತ್ರದುರ್ಗ ಜಿಲ್ಲೆಯ ಪಶು ವೈದ್ಯಕೀಯ ಸೇವಾ ಇಲಾಖೆಯಿಂದ ರೋಗ ಪೀಡಿತ ದನ, ಎಮ್ಮೆಗಳಿಗೆ ಯಶಸ್ವಿಯಾಗಿ ಚಿಕಿತ್ಸೆ ಮಾಡಲಾಗುತ್ತಿದ್ದು, ಜಿಲ್ಲೆಯಲ್ಲಿ ಈವರೆಗೆ ಒಟ್ಟು 70 ದನ, ಎಮ್ಮೆಗಳಲ್ಲಿ ರೋಗವು ಕಂಡುಬಂದಿದ್ದು, ರೋಗದಿಂದ ಮೊಳಕಾಲ್ಮುರು 3 ಜಾನುವಾರುಗಳು ಮೃತಪಟ್ಟಿದ್ದು, ಜಿಲ್ಲೆಯಲ್ಲಿ ಈ ರೋಗವು ವ್ಯಾಪಕವಾಗಿ ಹರಡುತ್ತಿರುವುದು ಕಂಡು ಬಂದಿರುತ್ತದೆ. ಜಿಲ್ಲೆಯಲ್ಲಿ ರೋಗದ ನಿಯಂತ್ರಣಕ್ಕಾಗಿ ಹಾಗೂ ಮುಂಜಾಗ್ರತಾ ಕ್ರಮವಾಗಿ 200000 ಡೋಸ್ ಲಸಿಕೆಯನ್ನು ಹಾಕಬೇಕಾಗಿರುತ್ತದೆ. ರೋಗದ ಹರಡುವಿಕೆಯನ್ನು ತಡೆಗಟ್ಟುವ ಹಿತದೃಷ್ಠಿಯಿಂದ ಹಾಗೂ ರೋಗವು ಹತೋಟಿಗೆ ಬರುವವರೆಗೆ ಜಿಲ್ಲೆಯಾದ್ಯಂತ ಜಾನುವಾರು ಸಂತೆ, ಜಾತ್ರೆ ಹಾಗೂ ಜಾನುವಾರು ಸಾಗಾಣಿಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ತಿಳಿಸಿದ್ದಾರೆ.

ಜಿಲ್ಲೆಯ ಎಲ್ಲಾ ತಾಲ್ಲೂಕಿನ ಕೆಲವು ಗ್ರಾಮಗಳ ಜಾನುವಾರುಗಳಲ್ಲಿ ಚರ್ಮಗಂಟು ರೋಗ ರೋಗೋದ್ರೇಕ ಹಾಗೂ ಕುರಿಗಳಲ್ಲಿ ನೀಲಿ ನಾಲಿಗೆ ಕಾಯಿಲೆ ಕಂಡುಬಂದಿರುತ್ತದೆ. ಈ ಕಾಯಿಲೆಯಿಂದ ರೈತರಿಗೆ ಆರ್ಥಿಕ ನಷ್ಟ ಉಂಟಾಗುವ ಜೊತೆಗೆ ಜಾನುವಾರುಗಳ ಆರೋಗ್ಯ ಹದಗೆಡುತ್ತದೆ. ಈ ಎರಡು ರೋಗಗಳ ಹತೋಟಿಗೆ ಪಶು ಪಆಲನಾ ಮತ್ತು ಪಶು ವೈದ್ಯಕೀಯ ಇಲಾಖೆ ಕ್ರಮವಹಿಸಿದೆ ಎಂದು ಉಪನಿರ್ದೇಶಕ ಡಾ.ಎಸ್.ಕಲ್ಲಪ್ಪ ತಿಳಿಸಿದ್ದಾರೆ.

ಜಾನುವಾರುಗಳಲ್ಲಿ ಕಂಡು ಬರುವ ಚರ್ಮಗಂಟು ರೋಗ: ಜಿಲ್ಲೆಯ ಕೆಲವು ಗ್ರಾಮಗಳಲ್ಲಿ ಕಾಣಿಸಿಕೊಂಡಿರುವ ಚರ್ಮಗಂಟು ರೋಗ ಅಥವಾ ಚರ್ಮ ಮುದ್ದೆ ರೋಗ ಸಾಂಕ್ರಾಮಿಕ ಕಾಯಿಲೆಯಾಗಿದ್ದು, ಕ್ಯಾಪ್ರಿಫಾಕ್ಸ್ (ಫಾಕ್ಸ್ ವಿರೀಡೆ) ಎಂಬ ವೈರಾಣುವಿನಿಂದ ಬರುತ್ತದೆ. ದನ, ಎಮ್ಮೆಗಳಲ್ಲಿ ಅದರಲ್ಲೂ ಮಿಶ್ರತಳಿ ರಾಸುಗಳಲ್ಲಿ, ಕರುಗಳಲ್ಲಿ ಅತಿ ಹೆಚ್ಚಾಗಿ ಹಾಗೂ ತೀಕ್ಷ್ಣವಾಗಿ ಕಾಣಿಸಿಕೊಳ್ಳುತ್ತದೆ. ಈ ರೋಗವು ಮುಖ್ಯವಾಗಿ ದನಗಳಿಗೆ ಕಚ್ಚುವ ಕೀಟಗಳಿಂದ (ಸೊಳ್ಳೆ, ನೊಣ, ಉಣ್ಣೆ ಇತ್ಯಾದಿ) ಬಹುಬೇಗ ಹರಡುತ್ತದೆ. ಮಳೆಗಾಲದಲ್ಲಿ ಮತ್ತು ನಂತರದ ದಿನಗಳಲ್ಲಿ ಹೆಚ್ಚಾಗಿ ಈ ರೋಗವು ಪಸರಿಸುತ್ತದೆ.

ರೋಗದ ಲಕ್ಷಣಗಳು: ಅತಿಯಾದ ಜ್ವರ, ಕಣ್ಣುಗಳಿಂದ ನೀರು ಸೋರುವುದು, ನಿಶಕ್ತಿ, ಕಾಲುಗಳಲ್ಲಿ ಬಾವು ಹಾಗೂ ಕುಂಟುವುದು, ಜಾನುವಾರುಗಳ ಚರ್ಮದ ಮೇಲೆ 2-5ಸೆ.ಮೀನಷ್ಟು ಅಗಲವಿರುವ ಗುಳ್ಳೆ ಕಾಣಿಸಿಕೊಂಡು ನಂತರ ಒಡೆದು ಗಾಯವಾಗಿ ನೋವುಂಟಾಗುತ್ತದೆ. ಸೂಕ್ತ ಚಿಕಿತ್ಸೆ ನೀಡದಿದ್ದಲ್ಲಿ ನೊಣಗಳಿಂದ ಹುಳುಗಳು ಬಿದ್ದು ಹುಣ್ಣಾಗುತ್ತದೆ, ಹಾಲಿನ ಇಳುವರಿ ಕಡಿಮೆಯಾಗುವುದು, ಕೆಲಸದ ಸಾಮಥ್ರ್ಯ ಕುಂಠಿತವಾಗುತ್ತದೆ. ಕರುಗಳು ತೀರ್ವವಾಗಿ ಬಳಲಿ ಸಾವಿಗೀಡಾಗಬಹುದು, ಮಿಶ್ರತಳಿ ಜರ್ಸಿ, ಹೆಚ್.ಎಫ್. ರಾಸುಗಳು ಹಾಗೂ ಕರುಗಳು ಈ ರೋಗದಿಂದ ಹೆಚ್ಚು ಬಳಲುತ್ತವೆ.
ರೋಗ ಹರಡುವಿಕೆ: ಸೊಳ್ಳೆ, ಉಣ್ಣೆ, ನೊಣ ಹಾಗೂ ವಿವಿಧ ಕಚ್ಚುವ ಕೀಟಗಳಿಂದ, ಕಲುಷಿತಗೊಂಡ ನೀರು ಹಾಗೂ ಆಹಾರದಿಂದ, ಜಾನುವಾರುಗಳ ನೇರ ಸಂಪರ್ಕದಿಂದ ರೋಗ ಹರಡುತ್ತದೆ.

ಚಿಕಿತ್ಸೆ ಹಾಗೂ ತಡೆಗಟ್ಟುವಿಕೆ: ಈ ರೋಗವು ವೈರಾಣು ರೋಗವಾಗಿರುವುದರಿಂದ ನಿರ್ದಿಷ್ಟವಾದ ಚಿಕಿತ್ಸೆ ಇರುವುದಿಲ್ಲ. ಹಾಗೂ ಈ ರೋಗಕ್ಕೆಯಾವುದೇ ಲಸಿಕೆ ಲಭ್ಯವಿಲ್ಲ. ರೋಗದ ಲಕ್ಷಣಗಳ ತಕ್ಕಂತೆ ಚಿಕಿತ್ಸೆ ನೀಡಬೇಕಾಗುತ್ತದೆ. ದೇಹವನ್ನು ತಂಪಾಗಿಸಲು ಮೈಮೇಲೆ ಹಸಿ ಬಟ್ಟೆ ಹಾಕುವುದು ಹಾಗೂ ತಂಪಾದ ಜಾಗದಲ್ಲಿ ಕಟ್ಟುವುದು. ಚರ್ಮದ ಮೇಲಿನ ಗಾಯಗಳಿಗೆ ಪೋಟ್ಯಾಸಿಯಂ ಪರಮ್ಯಾಂಗನೇಟ್ ದ್ರಾವಣದಿಂದ ತೊಳೆದು ಐಯೋಡಿನ್ ದ್ರಾವಣ, ಮುಲಾಮು ಹಾಗೂ ಬೇವಿನ ಎಣ್ಣೆಲೇಪಿಸಬೇಕು. ರೋಗ ಹರಡುವುದನ್ನು ತಡೆಯಲು ರೋಗಗ್ರಸ್ತ ಜಾನುವಾರುಗಳನ್ನು ಬೇರ್ಪಡಿಸಬೇಕು.
ರೋಗಗ್ರಸ್ಥ ಜಾನುವಾರುಗಳಿಗೆ ಉಪಯೋಗಿಸಿದ ಎಲ್ಲಾ ಸಾಮಾಗ್ರಿಗಳನ್ನು ಸ್ವಚ್ಛಗೊಳಿಸಬೇಕು. ಹಸಿರು ಮೇವು, ಪೌಷ್ಠಿಕ ಆಹಾರ ಹಾಗೂ ಲವಣ ಮಿಶ್ರಣ ನೀಡಬೇಕು. ಕುಡಿಯುವ ನೀರಿನಲ್ಲಿ ಬೆಲ್ಲ, ಉಪ್ಪು ಹಾಗೂ ಅಡುಗೆ ಸೋಡಾ ಹಾಕಿ ದಿನಕ್ಕೆ 5-6 ಬಾರಿ ಕುಡಿಸಬೇಕು. ಕೀಟಗಳ ಹಾವಳಿ ತಪ್ಪಿಸಲು ಹಸಿಬೇವಿನ ಸೊಪ್ಪಿನ ಹೊಗೆ ಹಾಕಬೇಕು. ಈ ರೋಗವು ಸೊಳ್ಳೆ, ಉಣ್ಣೆ, ನೊಣ ಹಾಗೂ ಇತರೆ ಕೀಟಗಳಿಂದ ಮುಖ್ಯವಾಗಿ ಹರಡುವುದರಿಂದ ಕೊಟ್ಟಗೆಯ ಸುತ್ತಮುತ್ತ ಸ್ವಚ್ಛತೆ ಕಾಪಾಡಬೇಕು. ರೋಗಗ್ರಸ್ಥ ಜಾನುವಾರು ಮರಣಹೊಂದಿದಲ್ಲಿ ಆಳವಾದ ಗುಂಡಿಯಲ್ಲಿ ಹೂಳಬೇಕು.

ಕುರಿಗಳಲ್ಲಿ ಕಂಡುಬರುವ ನೀಲಿ ನಾಲಿಗೆ ರೋಗಕ್ಕೆ ಮುಂಜಾಗ್ರತಾ ಕ್ರಮ: ಜಿಲ್ಲೆಯ ಕೆಲವು ಗ್ರಾಮಗಳಲ್ಲಿ ಕಾಣಿಸಿಕೊಂಡಿರುವ ಅತೀ ಸೂಕ್ಷ್ಮಾಣುವಿನಿಂದ ಉಂಟಾಗುವ ನೀಲಿ ನಾಲಿಗೆ ರೋಗವು ಎಲ್ಲಾ ಮೆಲಕು ಹಾಕುವ ಪ್ರಾಣಿಗಳಲ್ಲಿ ಕಂಡು ಬರುತ್ತದೆ. ಕುರಿಗಳಲ್ಲಿ ಅತೀ ಹೆಚ್ಚಾಗಿ ಮತ್ತು ತೀಕ್ಷ್ಣವಾಗಿ ಕಾಣಿಸಿಕೊಳ್ಳುತ್ತದೆ. ಒಂದು ಬಗೆಯ ಕುರುಡು ನೊಣಗಳು ರೋಗ ಪೀಡಿತ ಪ್ರಾಣಿಯನ್ನು ಕಚ್ಚಿ ಮತ್ತೊಂದು ಆರೋಗ್ಯವಂತ ಪ್ರಾಣಿಗೆ ಕಚ್ಚಿ ರೋಗವನ್ನು ಹರುಡುತ್ತದೆ. ಮಳೆಗಾಲದಲ್ಲಿ ಮತ್ತು ನಂತರದ ದಿನಗಳಲ್ಲಿ ಹೆಚ್ಚಾಗಿ ಈ ರೋಗವು ಕಂಡು ಬರುವುದು. ನೀರು ನಿಂತಿರುವ ಕೊಳಚೆ ಪ್ರದೇಶಗಳಲ್ಲಿ ನೊಣಗಳು ಹೆಚ್ಚಾಗಿ ರೋಗ ಹರಡಲು ಕಾರಣವಾಗುವುದು.

ರೋಗದ ಲಕ್ಷಣಗಳು: ತೀಕ್ಷ್ಣವಾದ ಜ್ವರ, ಮೂಗು, ನಾಳಿಗೆ ವಸಡು ಮೇಲೆ ಹುಣ್ಣು,  ಮೂಗಿನ ಒಳಪದರು ಕೆಂಪಾಗಿ ಮೂಗಿನ ಒಳಗೆ ಮತ್ತು ಸುತ್ತ ರಕ್ತ ಮಿಶ್ರಿತ ಸಿಂಬಳ ಕಟ್ಟಿಕೊಳ್ಳುವುದು. ಬಾಯಿಯಲ್ಲಿ ಜೊಲ್ಲು ಸೋರುವುದು. ತುಟಿ, ಮೂಗು, ನಾಲಿಗೆ, ಗದ್ದ ಮತ್ತು ಕಿವಿಗಳು ಊದಿಕೊಳ್ಳುವುದು, ಕಟಿ ಬಾಯಿಯು ಹರಿದು ರಕ್ತ ಚಿಮ್ಮುವುದು ಕೆಂಪಾಗುವುದು. ಕಾಲುಗಳು ಗೊರುಸುಗಳು ಮಧ್ಯಭಾಗ ಕೆಂಪಾಗಿ ಊದಿಕೊಂಡು ಕುರಿಗಳು ಕುಂಟುತ್ತವೆ. ನಾಲಿಗೆ ದಪ್ಪವಾಗಿ ನೀಲಿ ವರ್ಣಕ್ಕೆ ತಿರುಗುವುದು. ಕುರಿಗಳು ನಿಶ್ಯಕ್ತಿಯಾಗಿ ರೋಗದಿಂದ ಸಾವನ್ನಪ್ಪುವುದು.
ಚಿಕಿತ್ಸೆ ಮತ್ತು ನಿಯಂತ್ರಣ : ಈ ರೋಗಕ್ಕೆ ಲಸಿಕೆ ಲಭ್ಯವಿದ್ದು, ರೈತರು ಕುರಿಗಳಿಗೆ ಲಸಿಕೆ ಹಾಕಿಸಿಕೊಳ್ಳಬೇಕು. ನೀಲಿ ನಾಲಿಗೆ ರೋಗವು ಅತೀ ಸೂಕ್ಷ್ಣಾವಿನಿಂದ ಉಂಟಾಗುವ ರೋಗವಾದ್ದರಿಂದ ನಿರ್ದಿಷ್ಟ ಚಿಕಿತ್ಸೆ ಇರುವುದಿಲ್ಲ. ಆದ್ದರಿಂದ ಚಿಕಿತ್ಸೆಗಿಂತ ಆರೈಕೆ ಹಾಗೂ ಮುಂಜಾಗ್ರಾತ ಕ್ರಮಗಳ ಮೂಲಕ ರೋಗವನ್ನು ನಿಯಂತ್ರಿಸಬಹುದು.

ಆರೈಕೆ: ರೋಗ ಪೀಡಿತ ಕುರಿಗಳ ಬಾಯಿಯನ್ನು ಸೋಡಿಯಂ ಬೈ ಕಾರ್ಬೋನೇಟ್ (ತಿನ್ನುವ ಸೋಡಾ) ಅಥವಾ ಉಪ್ಪು ನೀರಿನಿಂದ ತೊಳೆಯಬೇಕು. ನಾಲಿಗೆ ಮತ್ತು ವಸಡಿಗೆ ಬೋರ್ಯಾಕ್ಸ್ ಪುಡಿ ಮಿಶ್ರಿತ ಜೇನು ತುಪ್ಪ ಅಥವಾ ಗ್ಲೀಸರಿನ್ ಹಚ್ಚಬೇಕು. ಗೋರಸಿನ ಮಧ್ಯಭಾಗದಲ್ಲಿ ಗಾಯವಿದ್ದಲ್ಲಿ ಪೊಟ್ಯಾಶಿಯಂ ಪರಮಾಂಗನೇಟ್ ದ್ರಾವಣದಿಂದ ತೊಳೆದು ಶುಭ್ರ ಹತ್ತಿಯಿಂದ ಒರಸಿ, ನೈಟ್ರೊಪರಜೋನ್ ಕ್ರೀಮ್, ಹೈಮಾಕ್ಸ್ ಆಯಿಂಟ್‍ಮೆಂಟ್ ಅಥವಾ ಲೊರೆಕ್ಸನ್ ಮುಲಾಮು ಇತ್ಯಾದಿ ಹಚ್ಚಬೇಕು. ಮೆತ್ತನೆ ಆಹಾರ ನೀಡಬೇಕು ಹಾಗೂ ಗಂಜಿ ಕುಡಿಸಬೇಕು. ಒಂದು ಬಕೆಟ್ ನೀರಿಗೆ ನಾಲ್ಕು ಹಿಡಿ ಉಪ್ಪು ಮತ್ತು ಎರಡು ಚಮಚ ಅಡಿಗೆ ಸೋಡಾ ಅಥವಾ ಓಆರ್‍ಎಸ್ ಪುಡಿ ಅಥವಾ ಎಲೆಕ್ಟ್ರೋಲೈಟ್ ಪುಡಿ ಮಿಶ್ರಿತ ನೀರನ್ನು ದಿನಕ್ಕೆ 5-6 ಬಾರಿ ಕುಡಿಸಬೇಕು, ಪಶು ವೈದ್ಯರ ಸಲಹೆಯ ಮೇರೆಗೆ ರೋಗ ಪೀಡಿತ ಕುರಿಗಳಿಗೆ 3-5 ದಿನ ಸೂಕ್ತ ಆಂಟಿಬಯೋಟಿಕ್ಸ್, ನೋವು ನಿವಾರಕ ಮತ್ತು ಶಕ್ತಿ ವರ್ಧಕ ಔಷಧಗಳನ್ನು ಕೂಡಿಸಬೇಕು.

ಮುಂಜಾಗ್ರತ ಕ್ರಮಗಳು : ರೋಗಗ್ರಸ್ಥ ಕುರಿಗಳನ್ನು ಪ್ರತ್ಯೇಕಿಸಿ ಆರೋಗ್ಯವಂತ ಕುರಿಗಳಿಂದ ದೂರವಿಡಬೇಕು. ಕುರಿಗಳನ್ನು ಮುಂಜಾನೆ ಮತ್ತು ಮುಸ್ಸಂಜೆಯಲ್ಲಿ ತಗ್ಗು ಪ್ರದೇಶದಲ್ಲಿ ಮೇಯಿಸಬಾರದು. ಉಣ್ಣೆ ಕತ್ತರಿಸುವುದನ್ನು ಮುಂದೂಡಬೇಕು. ಕುರಿ ದೊಡ್ಡಿಯಲ್ಲಿ 1 ಇಂಚು ಮಣ್ಣನ್ನು ತೆಗೆದು ಹೊಸ ಮಣ್ಣನ್ನು ಹಾಕಿಸಬೇಕು. ರೋಗಗ್ರಸ್ಥ ಕುರಿಗಳು ಸತ್ತಲ್ಲಿ ಆಳವಾದ ಗುಂಡಿಯಲ್ಲಿ ಹಾಕಿ ಮುಚ್ಚಬೇಕು. ನೊಣಗಳ ಹಾವಳಿ ತಪ್ಪಿಸಲು ದೊಡ್ಡ ವ್ಯಾಪ್ತಿಯಲ್ಲಿ ಹಸಿ ಬೇವಿನ ಸೊಪ್ಪಿನ ಹೊಗೆ ಹಾಕಬೇಕು.
ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಪಶುವೈದ್ಯಕೀಯ ಸಂಸ್ಥೆಯನ್ನು ಸಂಪರ್ಕಿಸಬೇಕು ಎಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕ ಡಾ.ಎಸ್.ಕಲ್ಲಪ್ಪ ತಿಳಿಸಿದ್ದಾರೆ.


ಜಾನುವಾರುಗಳಲ್ಲಿ ಕಾಣಿಸಿಕೊಂಡಿರುವ ಚರ್ಮಗಂಟು ರೋಗಕ್ಕೆ ಚಿಕಿತ್ಸೆ ನೀಡುತ್ತಿರುವ ಪಶುಪಾಲನಾ ಮತ್ತು ಪಶುವೈದ್ಯಕೀಯ ಇಲಾಖೆಯ ಸಿಬ್ಬಂದಿ. ಉಪನಿರ್ದೇಶಕ ಡಾ.ಕಲ್ಲಪ್ಪ ಇದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಚಿತ್ರದುರ್ಗ | ಬಾಪೂಜಿ ವಿದ್ಯಾಸಂಸ್ಥೆಯಲ್ಲಿ ಕನ್ನಡ ರಾಜ್ಯೋತ್ಸವ : ವಕೀಲರಿಗೆ ಸನ್ಮಾನ

ಸುದ್ದಿಒನ್, ಚಿತ್ರದುರ್ಗ, ನವೆಂಬರ್. 24 : ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು, ಕದಳಿ ಮಹಿಳಾ ವೇದಿಕೆ, ಬಾಪೂಜಿ ಸಮೂಹ ಸಂಸ್ಥೆಗಳು, ರಂಗಸೌರಭ ಕಲಾ ಸಂಘ ಹಾಗೂ ಶ್ರೀ ಶಿವಕುಮಾರ ಕಲಾ ಸಂಘ ಇವರ ಸಂಯುಕ್ತ

ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಸೋಲಿಗೆ ಆ ಐವರು ಕಾರಣವೇ ?

ಸುದ್ದಿಒನ್ | ಮಹಾರಾಷ್ಟ್ರ ಚುನಾವಣೆಯ ಇತಿಹಾಸದಲ್ಲಿ ಮೊದಲ ಬಾರಿಗೆ ಕಾಂಗ್ರೆಸ್ ಪಕ್ಷ ಕೇವಲ 16 ಸ್ಥಾನಗಳನ್ನು ಗೆದ್ದಿದೆ. ಭಾರೀ ಸೋಲಿನ ನಂತರ ಪಕ್ಷವು ಇವಿಎಂಗಳಿಂದ ನಮಗೆ ಸೋಲಾಗಿದೆ ಎಂದು ದೂರಿದೆ. ಇವಿಎಂಗಳ ದತ್ತಾಂಶದಿಂದಾಗಿ ಚುನಾವಣೆ

RCB ಸೇರ್ತಾರೆ ಅಂದುಕೊಂಡ್ರೆ ಕನ್ನಡಿಗ ರಾಹುಲ್ ಡೆಲ್ಲಿ ಪಾಲು..!

RCB ಕ್ರೇಜ್ ಎಷ್ಟಿದೆ‌ ಎಂಬುದನ್ನು ಬಿಡಿಸಿ ಹೇಳುವ ಅಗತ್ಯವಿಲ್ಲ. ಐಪಿಎಲ್ ಶುರುವಾಗುವ ಮುನ್ನವೇ ಆರ್ಸಿಬಿ ಫೀವರ್ ಅಭಿಮಾನಿಗಳಲ್ಲಿ ಜೋರಾಗಿ ಬಿಡುತ್ತದೆ. ಆರ್ಸಿಬಿ ಅಂದ್ರೆ ಅಷ್ಟು ಪ್ರೀತಿ ಕನ್ನಡಿಗರಿಗೆ. ಈಗ ಆರ್ಸಿಬಿ ಫ್ಯಾನ್ಸ್ ಖುಷಿ ಪಡೋ

error: Content is protected !!