ಕೃಷಿ ಪಂಪ್‍ಸೆಟ್‍ಗಳಿಗೆ ಸ್ಮಾರ್ಟ್ ಮೀಟರ್ ಅಳವಡಿಕೆ : ನಿರ್ಧಾರ ಹಿಂಪಡೆಯದಿದ್ದರೆ ವಿಧಾನಸೌಧ ಮುತ್ತಿಗೆ : ಬಗಡಲಪುರ ನಾಗೇಂದ್ರ

3 Min Read

ವರದಿ ಮತ್ತು ಫೋಟೋ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 7899864552

 

ಚಿತ್ರದುರ್ಗ, (ಸೆ.27): ರೈತರ ಕೃಷಿ ಪಂಪ್‍ಸೆಟ್‍ಗಳಿಗೆ ಸ್ಮಾರ್ಟ್ ಮೀಟರ್ ಅಳವಡಿಸುವ ದುಸ್ಸಾಹಸಕ್ಕೆ ರಾಜ್ಯ ಸರ್ಕಾರ ಕೈಹಾಕಿದ್ದು, ಇದರಿಂದ ಹಿಂದೆ ಸರಿಯದಿದ್ದರೆ ಅ.10 ರಂದು ರಾಜ್ಯಾದ್ಯಂತ ಎಲ್ಲಾ ತಾಲ್ಲೂಕಿನಲ್ಲಿ ಚಳುವಳಿ ನಡೆಸಿ ಎರಡನೆ ಹಂತದಲ್ಲಿ ವಿಭಾಗವಾರು ದೊಡ್ಡ ಸಮಾವೇಶ ಹಮ್ಮಿಕೊಳ್ಳಲಾಗುವುದು. ಅದಕ್ಕೂ ರಾಜ್ಯದ ಮುಖ್ಯಮಂತ್ರಿ ಮಣಿಯದಿದ್ದರೆ ಕೊನೆಗೆ ವಿಧಾನಸೌಧಕ್ಕೆ ಮುತ್ತಿಗೆ ಹಾಕುವುದಾಗಿ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಗಡಲಪುರ ನಾಗೇಂದ್ರ ಎಚ್ಚರಿಸಿದರು.

ಪ್ರವಾಸಿ ಮಂದಿರದಲ್ಲಿ ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು 380 ದಿನಗಳ ಕಾಲ ರೈತರು ದೆಹಲಿಯಲ್ಲಿ ನಡೆಸಿದ ಆಂದೋಲನಕ್ಕೆ ಮಣಿದ ಪ್ರಧಾನಿ ಮೋದಿ ಮೂರು ಕೃಷಿ ಮಸೂದೆಗಳನ್ನು ಹಿಂದಕ್ಕೆ ಪಡೆದರು. ರೈತ ಮುಖಂಡರ ಜೊತೆ ಒಂಬತ್ತನೆ ಸುತ್ತಿನ ಮಾತುಕತೆ ನಡೆಸಿದ ಕೇಂದ್ರ ಸರ್ಕಾರ ವಿದ್ಯುತ್ ತಿದ್ದುಪಡಿ ಕಾಯಿದೆಯನ್ನು ಸಂಸತ್ತಿನ ಮುಂದೆ ಮಂಡಿಸುವುದಿಲ್ಲವೆಂದು ಭರವಸೆ ನೀಡಿ ನಂತರ ಕಳೆದ ಅಧಿವೇಶನದಲ್ಲಿ ತಿದ್ದುಪಡಿ ಕಾಯಿದೆ ಮಂಡಿಸಿ ಸ್ಥಾಯಿ ಸಮಿತಿಗೆ ಒಪ್ಪಿಸಿರುವುದರಿಂದ ರಾಜ್ಯದಲ್ಲಿರುವ 45 ಲಕ್ಷ ಪಂಪ್‍ಸೆಟ್‍ದಾರರಿಗೆ ಉಚಿತ ವಿದ್ಯುತ್ ನಿಲ್ಲುತ್ತೆ. 90 ಲಕ್ಷ ಕುಟುಂಬಗಳಿಗೆ ಭಾಗ್ಯಜ್ಯೋತಿ, ಕುಟೀರಜ್ಯೋತಿ ಸ್ಥಗಿತವಾಗುತ್ತದೆ. ಸಣ್ಣ ಕೈಗಾರಿಕೆ, ಗುಡಿ ಕೈಗಾರಿಕೆಗಳು ಮುಚ್ಚುತ್ತವೆ. ರಾಜ್ಯ ಸರ್ಕಾರ ರೈತರೊಡನೆ ಸಮಾಲೋಚಿಸದೆ ಕಾಯಿದೆ ಜಾರಿಗೆ ತರಲು ಹೊರಟಿರುವುದಕ್ಕೆ ನಮ್ಮ ವಿರೋಧವಿದೆ ಎಂದು ಹೇಳಿದರು.

ಕೊಡಗು, ಚಿಕ್ಕಮಗಳೂರು, ಹಾಸನ ಜಿಲ್ಲೆಯಲ್ಲಿ ಈಗಾಗಲೆ ಸ್ಮಾರ್ಟ್ ಮೀಟರ್‍ಗಳನ್ನು ಅಳವಡಿಸಲಾಗಿದೆ. ಈ ನಿರ್ಧಾರವನ್ನು ರಾಜ್ಯದ ಮುಖ್ಯಮಂತ್ರಿ ಕೈಬಿಡದಿದ್ದರೆ ಮುಂದಿನ ಚುನಾವಣೆಯಲ್ಲಿ ಕಿತ್ತೊಗೆದು ಸ್ಮಾರ್ಟ್ ಮೀಟರ್‍ಗಳನ್ನು ಧ್ವಂಸಗೊಳಿಸುತ್ತೇವೆ. 2003 ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದಾಗ ಕಾಯಿದೆಗೆ ತಿದ್ದುಪಡಿಯಾಗಿತ್ತು. ಆಗ ಕೇರಳ, ತಮಿಳುನಾಡು, ಆಂಧ್ರ, ಮಹಾರಾಷ್ಟ್ರ, ಪಂಜಾಬ್ ರಾಜ್ಯಗಳು ವಿರೋಧಿಸಿದ್ದವು. ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರೈತ ಸಾಲ ವಸೂಲಿಗೆ ನಿಷೇಧ ಹೇರಿ ಕಾಯಿದೆ ಜಾರಿಗೆ ತರುವುದಾಗಿ ಹೇಳಿರುವುದು ಸ್ವಾಗತಾರ್ಹ. ನಿಷೇಧ ಮಾಡಿದರೆ ಸಾಲದು. ಸಾಲ ಮನ್ನ ಆಗಬೇಕು. ಹದಿನಾಲ್ಕು ವರ್ಷ ಬರಗಾಲ, ಐದು ವರ್ಷ ಅನಾವೃಷ್ಟಿಯಾಗಿರುವುದರಿಂದ ರೈತರು ಸಂಕಷ್ಟದಲ್ಲಿದ್ದಾರೆ. ಸಾಲವಿಲ್ಲದ ಕೃಷಿ ವ್ಯವಸ್ಥೆಯಾಗಬೇಕೆಂದು ಒತ್ತಾಯಿಸಿದ ಅವರು ಅ.2 ರ ಗಾಂಧಿüಜಯಂತಿಯಂದು ರೈತರ ಎಲ್ಲಾ ಬೆಳೆಗಳಿಗೆ ಕನಿಷ್ಟ ಬೆಂಬಲ ಬೆಲೆ ನೀಡುವಂತೆ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಬೆಳಿಗ್ಗೆ 11 ರಿಂದ ಮಧ್ಯಾಹ್ನ ಒಂದು ಗಂಟೆಯವರೆಗೆ ಧರಣಿ ನಡೆಸಲಾಗುವುದೆಂದರು.

ಜಂಬೂ ಸವಾರಿ ದಿನ ಶ್ರೀರಂಗಪಟ್ಟಣ, ಮದ್ದೇರು, ಮಳವಳ್ಳಿ, ಕೆ.ಆರ್.ಪೇಟೆ, ಹುಣಸೂರು, ಟಿ.ನರಸೀಪುರ, ನಂಜನಗೂಡು ಸಮೀಪ ಎಂಟು ಕಡೆಯಲ್ಲಿ ಎತ್ತು ಹಸು ಕುರಿ ಎಮ್ಮೆ ಕೋಳಿ ನಾಯಿಗಳೊಂದಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ದ ಪ್ರತಿಭಟನೆ ಮಾಡಲಾಗುವುದೆಂದು ನುಡಿದರು.

ಕರ್ನಾಟಕ ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ್ ಮಾತನಾಡುತ್ತ ಪ್ರಧಾನಿ ಮೋದಿ ಕಳೆದ ಎಂಟು ವರ್ಷಗಳಿಂದಲೂ ರೈತರು, ಕಾರ್ಮಿಕರು, ಮಹಿಳೆಯರು ಹಾಗೂ ದುಡಿಯುವ ವರ್ಗಕ್ಕೆ ಸುಳ್ಳು ಆಶ್ವಾಸನೆಗಳನ್ನು ನೀಡಿ ವಂಚಿಸುತ್ತ ಕಾರ್ಪೊರೇಟ್ ಕಂಪನಿಗಳಿಗೆ ಲಾಭವಾಗುವ ನೀತಿಯನ್ನು ಜಾರಿಗೆ ತರುತ್ತಿದ್ದಾರೆ. ಸ್ವಾಮಿನಾಥನ್ ವರದಿ ಇನ್ನು ಅನುಷ್ಠಾನಕ್ಕೆ ಬಂದಿಲ್ಲ. ಉತ್ತರ ಪ್ರದೇಶದಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಕೇಂದ್ರದಲ್ಲಿ ಬಿಜೆಪಿ.ಅಧಿಕಾರಕ್ಕೆ ಬಂದರೆ ರೈತರ ಸಾಲ ಮನ್ನ ಮಾಡುವುದಾಗಿ ಮೋದಿ ನೀಡಿದ್ದ ಭರವಸೆ ಹುಸಿಯಾಗಿದೆ. ರೈತ ವಿರೋಧಿ ನೀತಿ ಅನುಸರಿಸಿ ಕೃಷಿಯನ್ನು ಕಾರ್ಪೊರೇಟ್ ಕಂಪನಿಗಳಿಗೆ ವಹಿಸಲು ಮುಂದಾಗಿರುವುದನ್ನು ನಾವುಗಳು ಸಹಿಸುವುದಿಲ್ಲ ಎಂದು ಕಿಡಿಕಾರಿದರು.

ವೈಜ್ಞಾನಿಕ ಬೆಳೆಗಳನ್ನು ಬೆಳೆಯುತ್ತಿರುವ ರೈತರಿಗೆ ಬೆಂಬಲ ಬೆಲೆಯಿಲ್ಲದಂತಾಗಿದೆ. ಹೊಸ ಕಾಯಿದೆಯಿಂದ ನೀರಾವರಿ ನಾಶವಾಗುತ್ತದೆ. ರಾಜ್ಯ ಸರ್ಕಾರ ಏಳು ಗಂಟೆಗಳ ಕಾಲ ನಿರಂತರವಾಗಿ ವಿದ್ಯುತ್ ನೀಡುವುದಾಗಿ ಹೇಳಿ ಕೇವಲ ಐದು ಗಂಟೆ ಮಾತ್ರ ನೀಡುತ್ತಿರುವುದರಿಂದ ವರ್ಷಕ್ಕೆ ಎರಡು ಮೂರು ಸಲ ಪಂಪ್‍ಸೆಟ್‍ಗಳು ಸುಡುತ್ತಿವೆ. ಇದರಿಂದ ರೈತನ ಪಾಡೇನು ಎಂದು ಸರ್ಕಾರ ಚಿಂತಿಸುತ್ತಿಲ್ಲ. ಸ್ಮಾರ್ಟ್ ಮೀಟರ್ ಅಳವಡಿಕೆ ವಿರುದ್ದ ದೊಡ್ಡ ಚಳುವಳಿಯಾಗುತ್ತೆ. ರಾಜಕೀಯ ವ್ಯವಸ್ಥೆ ಬದಲಾಗದೆ ರೈತರ ಬದುಕು ಹಸನಾಗುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಕರ್ನಾಟಕ ರಾಜ್ಯ ರೈತ ಸಂಘದ ಸಂಘಟನಾ ಕಾರ್ಯದರ್ಶಿ ದರ್ಶನ್ ಪುಟ್ಟಣ್ಣಯ್ಯ ಮಾತನಾಡಿ ಕಬ್ಬಿನ ಬೆಲೆಗೆ ಅನೇಕ ವರ್ಷಗಳಿಂದಲೂ ಹೋರಾಟ ಮಾಡುತ್ತಿದ್ದೇವೆ. ರಾಜ್ಯ ಸರ್ಕಾರ ಮಣಿಯುತ್ತಿಲ್ಲ. ಹಾಗಾಗಿ ದಸರಾ ತಡೆಯುತ್ತೇವೆ. ಕಬ್ಬು ಕ್ವಿಂಟಾಲ್‍ಗೆ 4500 ರೂ.ಕೇಳುತ್ತಿದ್ದೇವೆ. ಇದು ನಮ್ಮ ಭಾಗದ ರೈತರ ನ್ಯಾಯಯುತವಾದ ಬೇಡಿಕೆ ಎಂದರು.

ಕರ್ನಾಟಕ ರಾಜ್ಯ ರೈತ ಸಂಘದ ಹಿರಿಯ ಉಪಾಧ್ಯಕ್ಷ ಕೆ.ಪಿ.ಭೂತಯ್ಯ, ಪ್ರಧಾನ ಕಾರ್ಯದರ್ಶಿ ಟಿ.ನುಲೇನೂರು ಶಂಕರಪ್ಪ, ಎನ್.ಸಿ.ಮಧುಚಂದನ್, ಪ್ರಸನ್ನ ಎನ್.ಗೌಡ, ಜಿಲ್ಲಾಧ್ಯಕ್ಷ ಬಸ್ತಿಹಳ್ಳಿ ಸುರೇಶ್‍ಬಾಬು, ಪಿ.ಗೋಪಾಲ್, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ವಿಜಯಕುಮಾರ್ ಸೇರಿದಂತೆ ಇನ್ನೂ ಅನೇಕ ರೈತರು ಪತ್ರಿಕಾಗೋಷ್ಟಿಯಲ್ಲಿ ಹಾಜರಿದ್ದರು.

Share This Article
Leave a Comment

Leave a Reply

Your email address will not be published. Required fields are marked *