ಕ್ಷಯಮುಕ್ತ ಜಿಲ್ಲೆಯನ್ನಾಗಿಸಲು ಕ್ರಮವಹಿಸಿ : ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಸೂಚನೆ

2 Min Read

ಕ್ಷಯಮುಕ್ತ ಜಿಲ್ಲೆ, ಕ್ರಮವಹಿಸಿ, ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ಸೂಚನೆ, ಚಿತ್ರದುರ್ಗ, ಸುದ್ದಿಒನ್, featured, suddione, cgitradurga, tuberculosis free, DC Kavitha S. Mannikeri,

ಚಿತ್ರದುರ್ಗ,(ಸೆಪ್ಟೆಂಬರ್14) : ಜಿಲ್ಲೆಯಲ್ಲಿ ಕ್ಷಯರೋಗವನ್ನು ಸಂಪೂರ್ಣವಾಗಿ ನಿಯಂತ್ರಣ ಮಾಡಿ, ಕ್ಷಯಮುಕ್ತ ಜಿಲ್ಲೆಯನ್ನಾಗಿಸಲು ಅಗತ್ಯ ಕ್ರಮವಹಿಸಬೇಕು ಎಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಜಿಲ್ಲಾ ಕ್ಷಯರೋಗ ವೇದಿಕೆ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.

ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನಲ್ಲಿ ಕ್ಷಯರೋಗ ಪ್ರಕರಣಗಳು ಹೆಚ್ಚಾಗಿ ಕಂಡುಬಂದಿದ್ದು, ಕ್ಷಯರೋಗಿಗಳ ಸಂಖ್ಯೆ ಇಳಿಕೆಯಾಗುವ ನಿಟ್ಟಿನಲ್ಲಿ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ತಾಕೀತು ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಚಳ್ಳಕೆರೆ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಎನ್.ಕಾಶಿ, ಚಳ್ಳಕೆರೆ ತಾಲ್ಲೂಕು ವ್ಯಾಪ್ತಿಯಲ್ಲಿ ಸಾಮಾಜಿಕವಾಗಿ, ಆರ್ಥಿಕವಾಗಿ ಹಾಗೂ ಶೈಕ್ಷಣಿಕವಾಗಿ ಹಿಂದುಳಿದ ಜನಾಂಗದವರಿದ್ದು, ಈ ಹಿನ್ನಲೆಯಲ್ಲಿ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಕ್ಷಯರೋಗ ನಿರ್ಮೂಲನೆ ಮಾಡಬೇಕಿದೆ ಎಂದು ಹೇಳಿದರು. ಕ್ಷಯರೋಗಿಗಳ ಸಂಖ್ಯೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಸೂಕ್ತ ಯೋಜನೆ ತಯಾರಿಸಲು ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.

ಜಿಲ್ಲೆಯ  ಕ್ಷಯರೋಗಿಗಳನ್ನು ದತ್ತು ಪಡೆದು, ಸಂಪೂರ್ಣವಾಗಿ ಗುಣಮುಖ ಪಡಿಸಿದರೆ, ಅಂತಹ ದತ್ತು ಪಡೆದ ದಾನಿಗಳಿಗೆ ಮೆಚ್ಚುಗೆ ಹಾಗೂ ಪ್ರಶಂಸನೀಯ ಪತ್ರ ನೀಡುವಂತೆಯೂ ಸಲಹೆ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಡಬ್ಲ್ಯೂಹೆಚ್‍ಓ ಪ್ರತಿನಿಧಿ ಡಾ.ಹಂಸ ಮಾತನಾಡಿ, ನಿಕ್ಷಯ್ ಸಾಪ್ಟ್‍ವೇರ್‍ನಲ್ಲಿ ಯಾವ ತಾಲ್ಲೂಕಿನಲ್ಲಿ ಯಾವ ಕ್ಷಯರೋಗಿಯನ್ನು ದತ್ತು ಪಡೆಯಲಾಗಿದೆ ಎಂಬ ಮಾಹಿತಿ ದೊರೆಯಲಿದೆ. ಕ್ಷಯರೋಗಿ ಸಂಪೂರ್ಣವಾಗಿ ಗುಣಮುಖರಾದ ನಂತರ ಪ್ರಶಂಸನೀಯ ಪತ್ರ ನೀಡಲಾಗುವುದು ಎಂದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಆರ್.ರಂಗನಾಥ್ ಮಾತನಾಡಿ, ಕ್ಷಯಮುಕ್ತ ಜಿಲ್ಲೆಯನ್ನಾಗಿಸಲು ಗುರಿ ಹೊಂದಲಾಗಿದ್ದು, ಕ್ಷಯರೋಗ ಪ್ರಕರಣಗಳು ಹೆಚ್ಚಾಗಿ ಕಂಡುಬಂದಿರುವ ಚಿತ್ರದುರ್ಗ ತಾಲ್ಲೂಕು ಗ್ರಾಮೀಣ ಪ್ರದೇಶ ವ್ಯಾಪ್ತಿಯಲ್ಲಿ ಹಾಗೂ ಚಳ್ಳಕೆರೆ ಹಾಗೂ ಮೊಳಕಾಲ್ಮುರು ತಾಲ್ಲೂಕು ವ್ಯಾಪ್ತಿಯಲ್ಲಿ ಹೆಚ್ಚಿನ ಗಮನ ಹರಿಸಬೇಕಿದೆ. ಕ್ಷಯರೋಗ ನಿಯಂತ್ರಣಕ್ಕಾಗಿ ಯೋಜನೆ ತಯಾರಿಸಲು ಸಲಹೆ ನೀಡಿದರು.

ರಾಷ್ಟ್ರೀಯ ಕ್ಷಯರೋಗ ನಿವಾರಣೆ ಕಾರ್ಯಕ್ರಮದಡಿಯಲ್ಲಿ ಕಾರ್ಯನಿರ್ವಹಿಸುವ ಜಿಲ್ಲೆಯ ಆರೋಗ್ಯ ಸಿಬ್ಬಂದಿಯು ತಮ್ಮ ಹೆಸರಲ್ಲಿ ಒಬ್ಬ ಕ್ಷಯರೋಗಿಯನ್ನು ದತ್ತು ಪಡೆಯಬೇಕು. ಸರ್ಕಾರೇತರ ಸಂಘಸಂಸ್ಥೆಗಳು, ದಾನಿಗಳಿಂದಲೂ ಕ್ಷಯರೋಗಿಗಳನ್ನು ದತ್ತು ಪಡೆಯಲು ಮುಂದಾದರೆ ಅವರ ಹೆಸರನ್ನೂ ನಿಕ್ಷಯ್ ಮಿತ್ರ ಪೋರ್ಟಲ್‍ನಲ್ಲಿ ಹೆಸರು ನೋಂದಣಿ ಮಾಡಿಸಿ ವರದಿ ನೀಡಲು ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ.ಸಿ.ಓ.ಸುಧಾ, ಆರ್.ಸಿ.ಹೆಚ್ ಅಧಿಕಾರಿ ಡಾ.ಕುಮಾರಸ್ವಾಮಿ, ಬಸವೇಶ್ವರ ಆಸ್ಪತ್ರೆಯ ಶ್ವಾಸಕೋಶ ತಜ್ಞರಾದ ಬಸವರಾಜ್ ಸಂಗೊಳ್ಳಿ ಸೇರಿದಂತೆ ತಾಲ್ಲೂಕು ಆರೋಗ್ಯಾಧಿಕಾರಿಗಳು, ಸಂಘ ಸಂಸ್ಥೆಗಳ ಪ್ರತಿನಿಧಿಗಳು ಇದ್ದರು.

Share This Article
Leave a Comment

Leave a Reply

Your email address will not be published. Required fields are marked *