ವರದಿ ಮತ್ತು ಫೋಟೋ : ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಚಿತ್ರದುರ್ಗ : ಕೇಂದ್ರ ಸರ್ಕಾರದ ಹಿಂದಿ ದಿವಸ್ ಆಚರಣೆ ವಿರೋಧಿಸಿ ಜಾತ್ಯತೀತ ಜನತಾದಳದ ವತಿಯಿಂದ ಚಿತ್ರದುರ್ಗದಲ್ಲಿ ಬುಧವಾರ ಪ್ರತಿಭಟನೆ ನಡೆಸಲಾಯಿತು.
ಜೆಡಿಎಸ್.ಕಚೇರಿಯಿಂದ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಪ್ರತಿಭಟನಾಕಾರರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಹಿಂದಿ ಮೇಲಿನ ವ್ಯಾಮೋಹ ಖಂಡಿಸಿ ಧಿಕ್ಕಾರಗಳನ್ನು ಕೂಗಿ ಅಪರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಜೆಡಿಎಸ್.ಜಿಲ್ಲಾಧ್ಯಕ್ಷ ಡಿ.ಯಶೋಧರ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡುತ್ತ ಬಲವಂತವಾಗಿ ಕನ್ನಡದ ಮೇಲೆ ಹಿಂದಿಯನ್ನು ಹೇರುತ್ತಿರುವ ಕೇಂದ್ರ ಸರ್ಕಾರ ಕನ್ನಡ, ನಾಡು, ನುಡಿ, ನೆಲ, ಜಲಕ್ಕೆ ಅವಮಾನ ಮಾಡುತ್ತಿದೆ. ನಾಲ್ಕು ನೂರು ವರ್ಷಗಳ ಇತಿಹಾಸವಿರುವ ಹಿಂದಿ ಭಾಷೆಗೆ ಮನ್ನಣೆ ನೀಡುತ್ತಿರುವ ಕೇಂದ್ರ ಸರ್ಕಾರಕ್ಕೆ 2500 ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆಯ ಮಹತ್ವ ಏಕೆ ತಿಳಿಯುತ್ತಿಲ್ಲ ಎಂದು ಕಿಡಿ ಕಾರಿದರು.
ಹಿಂದಿ ದಿವಸ್ ಹಿಂದಿ ಭಾಷೆಯನ್ನು ಮಾತನಾಡುವ ರಾಜ್ಯಗಳಿಗೆ ಮಾತ್ರ ಸೀಮಿತವಾಗಿರಲಿ. ಅನ್ಯ ಭಾಷಿಕರ ದಾಳಿಗೆ ಹಿಂದಿನಿಂದಲೂ ಕನ್ನಡಿಗರು ಸಮರ್ಥವಾಗಿ ಉತ್ತರ ನೀಡುತ್ತಿದ್ದಾರೆ. ಅದರಂತೆ ಹಿಂದಿ ದಿವಸ್‍ನ್ನು ವಿರೋಧಿಸುತ್ತಾ ಬರಲಾಗುತ್ತಿದೆ ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಎಚ್ಚರಿಸಿದರು.
ಜೆಡಿಎಸ್.ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಕಾಂತರಾಜ್, ಜಿಲ್ಲಾ ಕಾರ್ಯಾಧ್ಯಕ್ಷ ಜಿ.ಬಿ.ಶೇಖರ್, ಜಿಲ್ಲಾ ಮಹಾ ಪ್ರಧಾನ ಕಾರ್ಯದರ್ಶಿ ಡಿ.ಗೋಪಾಲಸ್ವಾಮಿ ನಾಯಕ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಆರ್.ನಿಂಗಾನಾಯ್ಕ, ಚಿತ್ರದುರ್ಗ ತಾಲ್ಲೂಕು ಅಧ್ಯಕ್ಷ ಸಣ್ಣತಿಮ್ಮಣ್ಣ, ಕಾರ್ಮಿಕ ಘಟಕದ ಅಧ್ಯಕ್ಷ ನಜೀರ್, ವಿದ್ಯಾರ್ಥಿ ಘಟಕದ ಅಧ್ಯಕ್ಷ ಅಬ್ಬು, ನಗರಸಭೆ ಸದಸ್ಯ ನಸ್ರುಲ್ಲಾ, ಮಾಜಿ ಸದಸ್ಯ ತಿಪ್ಪೇಸ್ವಾಮಿ, ನ್ಯಾಯವಾದಿ ಅಶೋಕ್ ಬೆಳಗಟ್ಟ, ಹೊಳಲ್ಕೆರೆ ತಾಲ್ಲೂಕು ಅಧ್ಯಕ್ಷ ಪರಮೇಶ್ವರಪ್ಪ, ಉಪಾಧ್ಯಕ್ಷ ವಿರುಪಾಕ್ಷಪ್ಪ, ಪ್ರಧಾನ ಕಾರ್ಯದರ್ಶಿ ಪರಮೇಶ್ವರಪ್ಪ ಈಚಘಟ್ಟ, ರುದ್ರಣ್ಣ, ಮಂಜುನಾಥ್ ಇನ್ನು ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.