ಮಂಡ್ಯ: ಮುಡಾಡದಲ್ಲಿ ನಡೆದ ಕೋಟಿ ಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ಇದೀಗ ಇಬ್ಬರು ಹಾಲಿ ಶಾಸಕರು ಹಾಗೂ ಒಬ್ಬ ಮಾಜಿ ಶಾಸಕ ಸೇರಿದಂತೆ 24 ಮಂದಿಗೆ ಭಯ ಶುರುವಾಗಿದೆ. ಸದ್ಯ ಕೋರ್ಟ್ ನಲ್ಲಿ ನಡೆಯುತ್ತಿರುವ ಪ್ರಕರಣದ ತೀರ್ಪು ಬಂದರೆ ಮೂವರು ರಾಜಕಾರಣಿಗಳು ಚುನಾವಣೆಗೆ ನಿಲ್ಲುವ ಅವಕಾಶವನ್ನೇ ಕಳೆದುಕೊಳ್ಳಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ. ಸೆ.15ಕ್ಕೆ ಕೋರ್ಟ್ ತೀರ್ಪು ನೀಡಲಿದೆ. ಯಾವ ರೀತಿಯ ತೀರ್ಪು ಬರಲಿದೆ ಎಂಬ ಕಾತುರ ಎಲ್ಲರಿಗೂ ಇದ್ದಂತಿದೆ.
ಏನಿದು ಪ್ರಕರಣ..?
ಈ ಪ್ರಕರಣ ನಡೆದದ್ದು 2009ರಲ್ಲಿ. ಮಂಡ್ಯ ನಗರಾಭಿವೃದ್ದಿಯಿಂದ ನಿವೇಶನಗಳ ಹಂಚಿಕೆಯಾಗಿತ್ತು. ಆದರೆ ಅಂದಿನ ನಗರಾಭಿವೃದ್ಧಿ ಅಧ್ಯಕ್ಷರಾಗಿದ್ದಂತ ವಿದ್ಯಾನಾಗೇಂದ್ರ, ಶಾಸಕ ಎಂ ಶ್ರೀನಿವಾಸ್, ಮೇಲುಕೋಟೆ ಶಾಸಕ ಪುಟ್ಟರಾಜು ಸೇರಿದಂತೆ ಹಲವರು ತಮಗೆ ಬೇಕಾದವರಿಗೆ ನಿಯಮ ಮೀರಿ ನಿವೇಶನಗಳನ್ನು ಹಂಚಿಕೆ ಮಾಡಲಾಗಿತ್ತು ಎಂಬ ಆರೋಪ ಎದುರಾಗಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ 2010ರಲ್ಲಿ ಮಂಡ್ಯದ ವಕೀಲ ಸತ್ಯಾನಂದ ದಾಖಲೆ ಸಮೇತ ದೂರು ಸಲ್ಲಿಸಿದ್ದರು. 2013ರಲ್ಲಿ ಸಿದ್ದರಾಮಯ್ಯ ಸರ್ಕಾರವಿದ್ದಾಗ ಈ ಪ್ರಕರಣವನ್ನು ಸಿಬಿಐಗೆ ವಹಿಸಲಾಗಿತ್ತು. ಪ್ರಕರಣದ ತನಿಖೆ ನಡೆಸಿದ್ದ ಪೊಲೀಸರು 7 ಸಾವಿರ ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದರು. ಅದರಲ್ಲಿ 24 ಆರೋಪಿಗಳ ಬಗ್ಗೆ ಉಲ್ಲೇಖವಿತ್ತು.
ತಮ್ಮ ಮೇಲಿನ ಪ್ರಕರಣವನ್ನ ವಜಾಗೊಳಿಸುವಂತೆ ಶಾಸಕ ಸಿ.ಎಸ್.ಪುಟ್ಟರಾಜು ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ನಲ್ಲಿ 2022 ರಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ ಆ ಅರ್ಜಿಯನ್ನ ಕೋರ್ಟ್ ವಜಾಗೊಳಿಸಿದ್ದು, ಮಧ್ಯಪ್ರವೇಶಕ್ಕೆ ನಿರಾಕರಣೆ ಮಾಡಿತ್ತು. ಇದೀಗ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆ.15ಕ್ಕೆ ತೀರ್ಪು ನೀಡಲಿದೆ.