ಬೆಂಗಳೂರು: ಇತ್ತಿಚೆಗೆ ಸಂಸದ ತೇಜಸ್ವಿ ಸೂರ್ಯ ಮಸಾಲೆ ದೋಸೆ ತಿಂದು ಸಿಕ್ಕಾಪಟ್ಟೆ ಫೇಮಸ್ ಆಗಿದ್ದರು. ಅದಕ್ಕೆ ಕಾರಣ ಬೆಂಗಳೂರಿನಲ್ಲಿ ಮಳೆ ಬಂದು ಜನ ಸಂಕಷ್ಟಕ್ಕೆ ಸಿಲುಕಿದ್ದರು. ಇಂಥ ಸಂದರ್ಭದಲ್ಲಿ ಸಂಸದರಾದವರು ಮಸಾಲೆ ದೋಸೆ ತಿಂದಿದ್ದನ್ನು ವಿಡಿಯೋ ಮಾಡಿ ಹಾಕಿದ್ದರು. ಇದು ಜನ ಸಾಮಾನ್ಯರಿಗೂ ಕೋಪ ತರಿಸಿತ್ತು. ಜವಬ್ದಾರಿಯುತ ಸ್ಥಾನದಲ್ಲಿದ್ದುಕೊಂಡು ಈ ರೀತಿ ಮಾಡುವುದು ಎಷ್ಟು ಸರಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ಅಷ್ಟೇ ಅಲ್ಲದೆ ಇದೇ ವಿಚಾರದಲ್ಲಿ ಕಾಂಗ್ರೆಸ್ ನಾಯಕರು ಸಂಸದರನ್ನು ತರಾಟೆಗೆ ತೆಗೆದುಕೊಂಡಿದ್ದರು. ಜನ ಇಂಥ ಸ್ಥಿತಿಯಲ್ಲಿರುವಾಗ ನೀವೂ ಮಸಾಲೆ ದೋಸೆಯನ್ನು ಪ್ರಮೋಟ್ ಮಾಡುತ್ತಿದ್ದೀರಲ್ಲ ಎಂದು. ಜೊತೆಗೆ ತರಹೇವಾರಿ ಮಸಾಲೆ ದೋಸೆಯನ್ನು ಪಾರ್ಸಲ್ ಮಾಡಿಸಿ, ಸಂಸದ ತೇಜಸ್ವಿ ಸೂರ್ಯ ಮನೆಗೂ ಕಳುಹಿಸಿಕೊಟ್ಟಿದ್ದರು. ಇದೇ ವಿಚಾರಕ್ಕೆ ತೇಜಸ್ವಿ ಸೂರ್ಯ ಇದೀಗ ವ್ಯಂಗ್ಯವಾಡಿದ್ದಾರೆ.
ದೋಸೆ ವಿಚಾರದಲಲೂ ಕಾಂಗ್ರೆಸ್ ಮೋಸ ಮಾಡುತ್ತಿದೆ. ಎಲ್ಲಿದೆ ದೋಸೆ. 24 ಗಂಟೆಯಾದರೂ ನಮ್ಮ ಮನೆಗೆ ಇನ್ನು ದೋಸೆ ಬರಲೇ ಇಲ್ಲ. ಕಾಂಗ್ರೆಸ್ ನಿನ್ನೆ ಸುದ್ದಿಗೋಷ್ಟಿ ನಡೆಸಿತ್ತು. ನಮ್ಮ ಮನೆಗೆ ದೋಸೆ ಕಳುಹಿಸಿರುವುದಾಗಿ ಘೋಷಿಸಿತ್ತು. ಆದ್ರೆ 24 ಗಂಟೆಯಾದರೂ ದೋಸೆ ಬಂದಿಲ್ಲ. ಒಂದು ದೋಸೆಯನ್ನು ಸರಿಯಾಗಿ ನೀಡುವುದಕ್ಕೆ ಬರುವುದಿಲ್ಲ. ಇನ್ನು ಆಡಳಿತ ನಡೆಸುವ ಕನಸು ಕಾಣುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.