ಬೆಂಗಳೂರು: ಮಳೆಯಿಂದಾಗಿ ರಾಜ್ಯ ರಾಜಧಾನಿ ಜನರ ಸ್ಥಿತಿ ನೋಡುವುದಕ್ಕೂ ಕಷ್ಟವಾಗಿದೆ. ಬೆಳ್ಳಂದೂರು, ರೈನ್ ಬೋ ಲೇ ಔಟ್, ಮಹದೇವಪುರ ಕಡೆಯೆಲ್ಲಾ ನೀರು ಮೊಣಕಾಲಿನುದ್ದಕ್ಕೂ ನಿಂತಿದೆ. ರಸ್ತೆಯಲ್ಲಿ ಓಡಾಡುವುದಕ್ಕೂ ಆಗಲ್ಲ, ಮನೆಯಲ್ಲಿ ಕೂರುವುದಕ್ಕೂ ಜಾಗ ಇಲ್ಲ. ಒಂದಷ್ಟು ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿದೆ. ಬೆಂಗಳೂರಿನ ಸ್ಥಿತಿ ಕಂಡು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಫುಲ್ ಗರಂ ಆಗಿದ್ದಾರೆ.
ಜನ ಅವಕಾಶ ಕೊಟ್ಟಿರುವುದು ಕೆಲಸ ಮಾಡುವುದಕ್ಕಾಗಿ, ಕೆಲಸ ಮಾಡುವುದಕ್ಕೆ ಆಗದೆ ಹೋದರೆ ಬನ್ನಿ ಚುನಾವಣೆಗೆ ಹೋಗೋಣಾ ಎಂದು ಸವಾಲು ಹಾಕಿದ್ದಾರೆ. ಕೆಲಸ ಮಾಡುವುದಕ್ಕೆ ಆಗದೆ ಸುಮ್ಮನೆ ಮಾತನಾಡುತ್ತಾರೆ. ಕೊಟ್ಟ ಕುದುರೆಯನ್ನು ಏರದವನು ವೀರನು ಅಲ್ಲ, ಶೂರನು ಅಲ್ಲ ಎಂದು ಸಿಎಂ ಬೊಮ್ಮಾಯಿ ಬಗ್ಗೆ ವ್ಯಂಗ್ಯವಾಡಿದ್ದಾರೆ.
ಈ ಮಧ್ಯೆ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಬೆಂಗಳೂರಿನ ಈ ಅವಸ್ಥೆಗೆ ಕಾಂಗ್ರೆಸ್ ಈ ಹಿಂದೆ ಮಾಡಿದ ಒತ್ತುವರಿಯೇ ಕಾರಣ ಎಂದು ಆರೋಪಿಸಿದ್ದರು. ಆ ವಿಚಾರಕ್ಕೂ ಪ್ರತಿಕ್ರಿಯೆ ನೀಡಿದ್ದಾರೆ. ಅಧಿಕಾರ ಸಿಕ್ಕರೂ ಮಾಡುವುದಕ್ಕೆ ಆಗದೆ ಕಾಂಗ್ರೆಸ್ನಿಂದ ಹಾಳಾಯ್ತು ಹಾಳಾಯ್ತು ಅಂತ ಹೇಳುವುದಲ್ಲ. ಕಾಂಗ್ರೆಸ್ ಕಾಲದಲ್ಲಿ ಏನು ಹಾಳಾಗಿದೆ. ಅದನ್ನು ಹೇಳಿ. ನಿಮ್ಮ ಸರ್ಕಾರದ ಭ್ರಷ್ಟಚಾರ, ನಿಮ್ಮ ಅಧಿಕಾರಿಗಳ ಭ್ರಷ್ಟಚಾರದಿಂದ ಹಾಳಾಗಿದೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ. ಹಗರಣಗಳನ್ನು ಬಯಲಿಗೆಳೆಯುತ್ತೇವೆ ಅಂತಾರಲ್ಲ ಎಳೆಯಲಿ, ತಡ ಯಾಕೆ ಮಾಡುತ್ತಿದ್ದಾರೆ. ಇಂಧನ ಇಲಾಖೆಯ ಹಗರಣಗಳನ್ನು ತೆಗೆಯಲಿ. ಈಗಿನ ಸಚಿವರೂ ಮಾಡುತ್ತಾ ಇದ್ದಾರಲ್ಲ. ನನ್ನೊಬ್ಬನ ಬಳಿ ಮಾತ್ರ ಇರುವುದಾ ಆದಾಯಕ್ಕೂ ಮೀರಿದ ಆಸ್ತಿ. ಯಾಕೆ ಅವರ ಆಡಳಿತದಲ್ಲಿರುವ ಯಾರ ಬಳಿಯೂ ಆದಾಯಕ್ಕೆ ಮೀರಿದ ಆಸ್ತಿ ಇಲ್ಲವಾ ಎಂದು ಆಕ್ರೋಶ ಹೊರ ಹಾಕಿದ್ದಾರೆ.