ಇನ್ನು ಮುಂದೆ ಜಿಲ್ಲಾಸ್ಪತ್ರೆಗಳಲ್ಲಿ ರೋಗಿಗಳು ಸಾಲಿನಲ್ಲಿ ನಿಲ್ಲಬೇಕಿಲ್ಲ : ಸಚಿವ ಸುಧಾಕರ್

suddionenews
2 Min Read

ಬೆಂಗಳೂರು: ಜಯನಗರ ಸಾರ್ವಜನಿಕ ಆಸ್ಪತ್ರೆ ಸೇರಿದಂತೆ ಹಲವು ಆಸ್ಪತ್ರೆಗಳು ಹಾಗೂ ಎಲ್ಲಾ ಜಿಲ್ಲಾಸ್ಪತ್ರೆಗಳಲ್ಲಿ ಒಂದು ತಿಂಗಳೊಳಗೆ ಡಿಜಿಟಲ್‌ ಹೆಸರು ನೋಂದಣಿ ಹಾಗೂ ಡಿಜಿಟಲ್‌ ಪಾವತಿ ವ್ಯವಸ್ಥೆ ತರಲಾಗುವುದು. ಬಳಿಕ ತಾಲೂಕು ಆಸ್ಪತ್ರೆಗಳಲ್ಲೂ ಇದೇ ವ್ಯವಸ್ಥೆ ಜಾರಿ ಮಾಡಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ತಿಳಿಸಿದರು.

ಜಯನಗರ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರತಿ ವಾರ್ಡ್‌ಗೆ ಭೇಟಿ ನೀಡಿದ ಸಚಿವ ಡಾ.ಕೆ.ಸುಧಾಕರ್‌, ರೋಗಿಗಳನ್ನು ಮಾತನಾಡಿಸಿ ಚಿಕಿತ್ಸೆಯ ಗುಣಮಟ್ಟದ ಬಗ್ಗೆ ಮಾಹಿತಿ ಪಡೆದರು. ಬಳಿಕ ಆಸ್ಪತ್ರೆ ಅಭಿವೃದ್ಧಿ ಕುರಿತು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು. ಇದೇ ವೇಳೆ ಆಸ್ಪತ್ರೆ *ಅಭಿವೃದ್ಧಿಗೆ 5 ಕೋಟಿ ರೂ. ಅನುದಾನ* ಒದಗಿಸುವುದಾಗಿ ತಿಳಿಸಿದರು.

ಬಳಿಕ ಮಾತನಾಡಿದ ಸಚಿವರು, ಜಯನಗರ ಸಾರ್ವಜನಿಕ ಆಸ್ಪತ್ರೆಯಲ್ಲಿ ಜನದಟ್ಟಣೆ ಕಡಿಮೆ ಮಾಡಲು, ವೈದ್ಯರ ಭೇಟಿಗೆ ಆನ್‌ಲೈನ್‌ನಲ್ಲಿ ಅಥವಾ ಮೊಬೈಲ್‌ ಸಂದೇಶ ಮೂಲಕ ಸಮಯ ನಿಗದಿ ಮಾಡಿಕೊಳ್ಳುವ ವ್ಯವಸ್ಥೆ ತರಲು ಸೂಚಿಸಲಾಗಿದೆ. ಆಸ್ಪತ್ರೆಯಲ್ಲಿ ಜನರ ಉದ್ದದ ಸಾಲು ಕಡಿಮೆ ಮಾಡಲು ಈ ಕ್ರಮ ವಹಿಸಲಾಗುತ್ತಿದೆ. ವೈದ್ಯರ ಆಪಾಯಿಂಟ್‌ಮೆಂಟ್‌ ಸಮಯ, ಯಾವ ವೈದ್ಯರು ಎಂಬಿತ್ಯಾದಿ ಮಾಹಿತಿಗಳನ್ನು ಮೊಬೈಲ್‌ಗೆ ಸಂದೇಶ ಕಳುಹಿಸುವ ವ್ಯವಸ್ಥೆ ತರಲಾಗುತ್ತಿದೆ. ಆಸ್ಪತ್ರೆಗೆ ಯಾರೂ ಬಂದು ಕಾಯುವ ಅಗತ್ಯವಿಲ್ಲ. ಹಾಗೆಯೇ ರಾಜ್ಯದ ಎಲ್ಲಾ ಜಿಲ್ಲಾಸ್ಪತ್ರೆಗಳಲ್ಲಿ ಜನರು ಬರುವ ಮುನ್ನವೇ ಆನ್‌ಲೈನ್‌ ನಲ್ಲಿ ಹೆಸರು ನೋಂದಾಯಿಸಿಕೊಳ್ಳುವ ಹಾಗೂ ಡಿಜಿಟಲ್‌ ಪಾವತಿ ಮಾಡುವ ವ್ಯವಸ್ಥೆ ತರಲಾಗುವುದು ಎಂದು ಹೇಳಿದರು.

 

ಜಯನಗರ ಆಸ್ಪತ್ರೆಯಲ್ಲಿ ಚಿಕಿತ್ಸೆಯ ಬಗ್ಗೆ ರೋಗಿಗಳನ್ನು ಮಾತನಾಡಿಸಿದ್ದು, ಒಬ್ಬರು ಕೂಡ ಗುಣಮಟ್ಟದಲ್ಲಿ ಲೋಪ ಆಗಿದೆ ಎಂದು ಹೇಳಿಲ್ಲ. ಐದು ವರ್ಷದಿಂದ ಡಯಾಲಿಸಿಸ್‌ ಮಾಡಿಸಿಕೊಳ್ಳುತ್ತಿರುವ ರೋಗಿಯೊಬ್ಬರು, ಯಾವುದೇ ಹಣ ನೀಡದೆ ಚಿಕಿತ್ಸೆ ಪಡೆಯುತ್ತಿದ್ದೇನೆ ಹಾಗೂ ಆರೋಗ್ಯವಾಗಿದ್ದೇನೆ ಎಂದು ತಿಳಿಸಿದ್ದಾರೆ. ಆಸ್ಪತ್ರೆಯಲ್ಲಿ ಚಾವಣಿ ಸೇರಿದಂತೆ ಕೆಲವೆಡೆ ದುರಸ್ತಿ ಕಾರ್ಯಗಳು ನಡೆಯಬೇಕಿದೆ. ಸುಮಾರು 5 ಕೋಟಿ ರೂ.ನಷ್ಟು ಅನುದಾನ ಬೇಕಿದ್ದು, ಅದನ್ನು ನೀಡಲಾಗುವುದು ಎಂದರು.

ರೋಗಿಗಳಿಗೆ ಚಿಕಿತ್ಸೆ ವಿಚಾರದಲ್ಲಿ ಸಮಾಧಾನ ಇದೆ ಎಂದು ತಿಳಿದುಬಂದಿದೆ. ಪ್ರಸೂತಿ ವಿಭಾಗದಲ್ಲಿ ಕೆಲ ದೂರುಗಳಿದ್ದು, ಅದಕ್ಕಾಗಿ ಸ್ಪಷ್ಟ ಸೂಚನೆ ನೀಡಲಾಗಿದೆ. ಪ್ರತಿ ವಿಭಾಗಗಳ ಮುಖ್ಯಸ್ಥರಿಗೆ ನಿಗದಿತ ಗುರಿ ನೀಡಲಾಗಿದೆ. ಜನರು ಖಾಸಗಿ ಆಸ್ಪತ್ರೆಗೆ ಹೋಗದೆ ಇಲ್ಲಿಯೇ ಬರುವಂತೆ ಕ್ರಮ ವಹಿಸಬೇಕು ಎಂದು ಸೂಚಿಸಲಾಗಿದೆ ಎಂದರು.

ಈ ಹಿಂದೆ ಲಂಚ ಪಡೆದ ಹೊರಗುತ್ತಿಗೆ ವೈದ್ಯರೊಬ್ಬರ ವಿರುದ್ಧ ತನಿಖೆ ನಡೆಯುತ್ತಿದೆ. ಈಗ ತಕ್ಷಣ ಕೆಲಸದಿಂದ ತೆಗೆದುಹಾಕಬೇಕು ಎಂದು ಸೂಚಿಸಲಾಗಿದೆ. ತನಿಖಾ ವರದಿ ಬರುವ ಮುನ್ನವೇ ಅವರನ್ನು ಕೆಲಸದಿಂದ ತೆಗೆದುಹಾಕಲು ತಿಳಿಸಲಾಗಿದೆ. ರಾಜ್ಯದ ಬೇರೆ ಬೇರೆ ಆಸ್ಪತ್ರೆಗಳಿಗೂ ಭೇಟಿ ನೀಡಲಾಗುವುದು. ನಮ್ಮ ಸರ್ಕಾರ ಮಾತೃ ಹೃದಯ ಹೊಂದಿದ್ದು, ಅದಕ್ಕೆ ಪೂರಕವಾಗಿ ಕಾರ್ಯ ನಿರ್ವಹಿಸಲಾಗುವುದು ಎಂದರು.

 

ಕೋವಿಡ್‌ ರೋಗಿಗಳಿಂದ ಹಣ ಪಡೆದು ಬಳಿಕ ಸರ್ಕಾರದಿಂದ ಹಣ ಪಡೆದ ಖಾಸಗಿ ಆಸ್ಪತ್ರೆಗಳಿಗೆ ನೋಟಿಸ್‌ ನೀಡಿ, ಹಣವನ್ನು ರೋಗಿಗಳಿಗೆ ಹಿಂದಿರುಗಿಸಲಾಗಿದೆ. ಇತಿಹಾಸದಲ್ಲಿ ಮೊದಲ ಬಾರಿಗೆ ಸರ್ಕಾರ ಈ ರೀತಿಯ ಕ್ರಮ ವಹಿಸಿ, 1.58 ಕೋಟಿ ರೂ. ಹಣವನ್ನು ರೋಗಿಗಳ ಕುಟುಂಬಕ್ಕೆ ವಾಪಸ್‌ ಮಾಡಲಾಗಿದೆ. ಇನ್ನು ಉಳಿದ ಮೊತ್ತವನ್ನು ಕೂಡ ವಾಪಸ್‌ ಕೊಡಿಸಲಾಗುವುದು. ಮೊತ್ತವನ್ನು ವಾಪಸ್‌ ಕೊಡಿಸುವವರೆಗೂ ಸರ್ಕಾರ ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

Share This Article
Leave a Comment

Leave a Reply

Your email address will not be published. Required fields are marked *