ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ರಂಭಾಪುರಿ ಶ್ರೀಗಳನ್ನು ಭೇಟಿ ಮಾಡಿ, ಲಿಂಗಾಯತರ ವಿಭಜನೆ ಸಂಬಂಧ ಪಶ್ಚತ್ತಾಪ ಪಟ್ಟಿದ್ದಾರೆ ಎಂಬ ವಿಚಾರ ಎಲ್ಲೆಡೆ ಸುದ್ದಿಯಾಗಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಸಿದ್ದರಾಮಯ್ಯ ಅವರೇ ಸ್ಪಷ್ಟನೆ ನೀಡಿದ್ದಾರೆ. ಯಾವ ಪಶ್ಚತ್ತಾಪನೂ ಹೇಳಿಲ್ಲ. ಶ್ರೀಗಳನ್ನು ಭೇಟಿ ಮಾಡಿ ಅವರಿಗೆ ವಿವರಿಸಿ ಹೇಳಿದ್ದೇನೆ ಅಷ್ಟೇ ಎಂದಿದ್ದಾರೆ.
ನಮಗೆ ಯಾವುದೇ ಧರ್ಮ ಒಡೆಯುವ ಉದ್ದೇಶ ಇಲ್ಲ. ಆ ಸಮಯದಲ್ಲಿ ಶಾಮನೂರು ಹಾಗೂ ಮಾತೇ ಮಹಾದೇವಿ ಮನವಿ ನೀಡಿದ್ದರು. ಧರ್ಮ ಒಡೆಯುವ ಉದ್ದೇಶ ಇಲ್ಲ ಎಂದು ಹೇಳಿದ್ದೇನೆ ಅಷ್ಟೇ. ಯಾರು ಹೇಳಿದ್ದು ಇದು ವಿವಾದ ಎಂದು ಆ ವಿಚಾರದಲ್ಲಿ ಸ್ವಲ್ಪ ಗರಂ ಆಗಿದ್ದಾರೆ.
ಇನ್ನು ಕೊಡಗಿನಲ್ಲಿ ನಡೆದ ಘಟನೆ ಬಗ್ಗೆ ಸಚಿವ ಎಸ್ ಟಿ ಸೋಮಶೇಖರ್ ಮಾತನಾಡುತ್ತಾ, ಪರಿಹಾರ ನೀಡಿದ ಮೇಲೆ ಸಿದ್ದರಾಮಯ್ಯ ಯಾಕೆ ಹೋಗಬೇಕಿತ್ತು ಎಂದು ಕೇಳಿದ್ದರು. ಆ ವಿಚಾರಕ್ಕೆ ಮಾತನಾಡಿರುವ ಸಿದ್ದರಾಮಯ್ಯ, ಕೊಡಗು ಜಿಲ್ಲೆಯಲ್ಲಿ ಮಳೆಹಾನಿ ಪರಿಹಾರ ನೀಡಿದ್ದಾರಾ..? ಸಿಎಂ ಬೊಮ್ಮಾಯಿ ಹಾಗೂ ಸಚಿವ ಸೋಮಶೇಖರ್ ಪರಿಹಾರ ನೀಡಿದ್ದಾರಾ..? ಮೊದಲು ಹೋಗಿ ಅವರಿಗೆ ಪರಿಹಾರ ನೀಡುವುದಕ್ಕೆ ಹೇಳಿ ಎಂದಿದ್ದಾರೆ.