ಮೈಸೂರು: ಮುಸ್ಲಿಂ ಏರಿಯಾದಲ್ಲಿ ಸಾವರ್ಕರ್ ಫೋಟೋ ಯಾಕೆ ಹಾಕಬೇಕಿತ್ತು ಎಂಬ ಸಿದ್ದರಾಮಯ್ಯ ಹೇಳಿಕೆಯನ್ನು ಪುತ್ರ ಶಾಸಕ ಡಾ.ಯತೀಂದ್ರ ಸಮರ್ಥಿಸಿಕೊಂಡಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿ ಕೋಮು, ದ್ವೇಷ ಹೆಚ್ಚಾಗುತ್ತಿದೆ ಎಂದು ಕಿಡಿಕಾರಿದ್ದಾರೆ.
ಮೈಸೂರಿನ ಟಿ ನರಸೀಪುರದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಕೋಮು, ದ್ವೇಷ ಹೆಚ್ಚಾಗುತ್ತಿದೆ. ಒಬ್ಬರನ್ನೊಬರು ಸಾಯಿಸುವುದು, ಹತ್ಯೆ ಮಾಡುವುದು ಹೆಚ್ಚಾಗುತ್ತಿದೆ. ಪರೋಕ್ಷವಾಗಿ ಸಿಎಂ ಬೊಮ್ಮಾಯಿ ಕೂಡ ಇದಕ್ಕೆ ಬೆಂಬಲ ನೀಡುತ್ತಿದ್ದಾರೆ.
ಬಿಜೆಪಿ ತನ್ನ ವೈಫಲ್ಯ ಮುಚ್ಚಿ ಹಾಕಲು ಅನಗತ್ಯ ಗೊಂದಲ ಸೃಷ್ಟಿಸುತ್ತಿದ್ದಾರೆ. ಸಾವರ್ಕರ್ ಸ್ವಾತಂತ್ರ್ಯ ಹೋರಾಟಗಾರರಲ್ಲ, ಮೂಲಭೂತವಾದಿ. ಸಾವರ್ಕರ್, ಮುಸ್ಲಿಮರನ್ನು ಭಾರತೀಯರೆಂದು ಒಪ್ಪಿಕೊಂಡಿರಲಿಲ್ಲ. ಮುಸ್ಲಿಂ ಮತ್ತು ಕ್ರಿಶ್ಚಿಯನ್ 2ನೇ ದರ್ಜೆಯ ಪ್ರಜೆಗಳಾಗಿ ಇರಬೇಕು. ಹಿಂದೂ ರಾಷ್ಟ್ರವನ್ನು ಒಪ್ಪಿಕೊಂಡು ಇರಬೇಕೆಂದು ಹೇಳಿದ್ದರು. ಸಾವರ್ಕರ್ ಅನ್ಯ ಮತದ ದ್ವೇಷಿ ಎಂದು ಯತೀಂದ್ರ ವಾಗ್ದಾಳಿ ನಡೆಸಿದ್ದಾರೆ.
ಮುಸ್ಲಿಂ ಏರಿಯಾಗಳಲ್ಲಿ ಫೋಟೋ ಹಾಕಿದರೆ ಕೋಪ ಬರುತ್ತದೆ. ಸಾವರ್ಕರ್ ಫೋಟೋ ಹಾಕಿದಾಗ ಪ್ರಚೋದನಕಾರಿಯಾಗುತ್ತದೆ. ಹಿಂದೂ ಏರಿಯಾಗಳಲ್ಲಿ ಮುಸ್ಲಿಂ ನಾಯಕರ ಫೋಟೋ ಹಾಕಿದರೆ, ಹಿಂದೂಗಳಿಗೆ ಕೋಪ ಬರುವುದಿಲ್ಲವೆ..? ರಾಜ್ಯ ಸರ್ಕಾರ ಇಂಥ ಘಟನೆಗಳನ್ನು ತಡೆಗಟ್ಟುವುದನ್ನು ಬಿಟ್ಟು, ಅನಗತ್ಯ ವಿಚಾರ ಪ್ರಸ್ತಾಪಿಸಿ ಗೊಂದಲ ಸೃಷ್ಟಿಸುತ್ತಿದೆ ಎಂದಿದ್ದಾರೆ.