ಶ್ರೀನಗರ: ದೇಶ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದ ಆಡಳಿತವು ಹಿಜ್ಬ್ ಮುಖ್ಯಸ್ಥ ಸೈಯದ್ ಸಲಾವುದ್ದೀನ್ ಅವರ ಪುತ್ರ ಸೇರಿದಂತೆ ನಾಲ್ವರು ಉದ್ಯೋಗಿಗಳನ್ನು ವಜಾಗೊಳಿಸಿದೆ. ಜೆ & ಕೆ ಸರ್ಕಾರವು ಭಾರತ ಸಂವಿಧಾನದ 311 ನೇ ವಿಧಿಯ ಅಡಿಯಲ್ಲಿ ದೇಶ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿರುವ ನಾಲ್ಕು ಉದ್ಯೋಗಿಗಳನ್ನು ವಜಾಗೊಳಿಸಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.
ಮೂಲಗಳ ಪ್ರಕಾರ, ಈ ಉದ್ಯೋಗಿಗಳ ಚಟುವಟಿಕೆಗಳು ಕಾನೂನು ಜಾರಿ ಮತ್ತು ಗುಪ್ತಚರ ಸಂಸ್ಥೆಗಳ ಗಮನಕ್ಕೆ ಬಂದಿವೆ. ವಜಾಗೊಂಡವರು ಡಾ. ಮುಹೀತ್ ಅಹ್ಮದ್ ಭಟ್ (ಕಾಶ್ಮೀರ ವಿಶ್ವವಿದ್ಯಾಲಯದ ಕಂಪ್ಯೂಟರ್ ಸೈನ್ಸ್‌ನ ಸ್ನಾತಕೋತ್ತರ ವಿಭಾಗದಲ್ಲಿ ವಿಜ್ಞಾನಿ-D), ಮಜೀದ್ ಹುಸೇನ್ ಖಾದ್ರಿ, (ಹಿರಿಯ ಸಹಾಯಕ ಪ್ರಾಧ್ಯಾಪಕ, ಮ್ಯಾನೇಜ್‌ಮೆಂಟ್ ಸ್ಟಡೀಸ್ ವಿಭಾಗ, ಕಾಶ್ಮೀರ ವಿಶ್ವವಿದ್ಯಾಲಯ), ಸೈಯದ್ ಅಬ್ದುಲ್ ಮುಯೀದ್, ( ಮ್ಯಾನೇಜರ್ IT, JKEDI) ಮತ್ತು ಅಸ್ಸಾಬಾ-ಉಲ್-ಅರ್ಜಮಂಡ್ ಖಾನ್, (ಕಾಶ್ಮೀರ ಗ್ರಾಮೀಣಾಭಿವೃದ್ಧಿ ನಿರ್ದೇಶನಾಲಯದಲ್ಲಿ ಪ್ರಚಾರ ಅಧಿಕಾರಿ)
ಸೈಯದ್ ಅಬ್ದುಲ್ ಮುಯೀದ್ ಯುನೈಟೆಡ್ ಜೆಹಾದ್ ಕೌನ್ಸಿಲ್ ಮುಖ್ಯಸ್ಥ ಸೈಯದ್ ಸಲಾಹುದ್ದೀನ್ ಅವರ ಪುತ್ರನಾಗಿದ್ದರೆ, ಅಸ್ಸಾಬಾ-ಉಲ್-ಅರ್ಜಮಂಡ್ ಖಾನ್ ಜೆಕೆಎಲ್ಎಫ್ ನಾಯಕ ಮತ್ತು ಮಾಜಿ ಉಗ್ರಗಾಮಿ ಕಮಾಂಡರ್ ಫಾರೂಕ್ ಅಹ್ಮದ್ ದಾರ್ ಅಲಿಯಾಸ್ ಬಿಟ್ಟಾ ಕರಾಟೆ ಅವರ ಪತ್ನಿ. ಅಸ್ಸಾಬ್ ಕೆಎಎಸ್ ಅಧಿಕಾರಿಯಾಗಿದ್ದರು.