ವರನಟ ಡಾ. ರಾಜ್‍ಕುಮಾರ್.. ಸ್ಯಾಂಡಲ್ ವುಡ್ ದೊಡ್ಮನೆ ಕುಟುಂಬ. ಅಣ್ಣಾವ್ರ ಕುಟುಂಬ ಎಂದರೆ ಅಭಿಮಾನಿಗಳ ಪಾಲಿಗೆ ದೇವರ ಕೊಟ್ಟ ವರವೆಂದೇ ಪ್ರೀತಿ, ಭಕ್ತಿ. ಅದು ಅಣ್ಣಾವ್ರ ನಡವಳಿಕೆ, ಅವರ ಗುಣದಿಂದಲೇ ಎದುರಿಗಿದ್ದವರಿಗೆ ಹುಟ್ಟುತ್ತಿದ್ದ ಭಾವವದು.
ಅಣ್ಣಾವ್ರ ಜೊತೆ ಸಿನಿಮಾ ಮಾಡಬೇಕು, ಅವರ ಜೊತೆಗೆ ಒಡನಾಟ ಬೆಳೆಸಿಕೊಳ್ಳಬೇಕೆಂದು ಸಾಕಷ್ಟು ಜನ ಹಾತೊರೆಯುತ್ತಿದ್ದರು. ಅದಕ್ಕೆ ಸಾಕ್ಷಿ ಎಂಬಂತೆ ಅಣ್ಣಾವ್ರ ಜೊತೆಗೂಡಿ ದೇವಸ್ಥಾನಕ್ಕೆ ಹೋಗುತ್ತಿದ್ದವರನ್ನು ನೋಡಿದರೆ ಅರ್ಥವಾಗುತ್ತದೆ. ಅದೇ ಪ್ರೀತಿ, ಅದೇ ಖುಷಿ, ಅದೇ ಬಾಂಧವ್ಯ ಅಣ್ಣಾವ್ರ ಮಕ್ಕಳ ಜೊತೆಗೂ ಇಂಡಸ್ಟ್ರಿಯವರಿಗಿದೆ.
ರಾಯರ ಆರಾಧನೆಯ ಸಮಯವಿದು. ಎಲ್ಲರಿಗೂ ಗೊತ್ತೆ ಇದೆ. ಅಣ್ಣಾವ್ರ ಕುಟುಂಬಕ್ಕೆ ರಾಯರ ಮೇಲೆ ಅದೆಷ್ಟು ಭಕ್ತಿ ಇದೆ ಎಂಬುದು. ಡಾ. ರಾಜ್ ಕುಮಾರ್ ಕುಟುಂಬಕ್ಕೂ ರಾಯರ ಮಠಕ್ಕೂ ಅವಿನಾಭಾವ ಸಂಬಂಧ ಎಂದರೆ ತಪ್ಪಾಗಲಿಕ್ಕಿಲ್ಲ. ಡಾ. ರಾಜ್‌ಕುಮಾರ್ ರಾಯರ ಪಾತ್ರ ಪ್ರವೇಶಿಸಿದ ಬಳಿಕ ಮಠದ ಮೇಲಿನ ಒಲವು ಇನ್ನೂ ಹೆಚ್ಚಾಗಿತ್ತು.
ಡಾ. ರಾಜ್‌ಕುಮಾರ್ ತರುವಾಯ ಅವರ ಮಕ್ಕಳಾದ ಡಾ. ಶಿವರಾಜ್ ಕುಮಾರ್, ರಾಘವೇಂದ್ರ ರಾಜ್‌ಕುಮಾರ್ ಮತ್ತು ಪುನೀತ್ ರಾಜ್‌ಕುಮಾರ್ ಕೂಡ ಮಠಕ್ಕೆ ಸದಾ ಭೇಟಿ ಆಶೀರ್ವಾದ ಪಡೆಯುತ್ತಿದ್ದರು. ರಾಘವೇಂದ್ರ ರಾಜ್‌ಕುಮಾರ್ ಒಮ್ಮೆ ರಾಯರ ಮಠದಲ್ಲಿ ಉರುಳು ಸೇವೆ ಮಾಡಿ ಭಕ್ತಿ ಸಮರ್ಪಿಸಿದ್ದರು.
ಅಣ್ಣಾವ್ರ ಮಂತ್ರಾಲಯ ಮಹಾತ್ಮೆ ಸಿನಿಮಾ ನೋಡುತ್ತಿದ್ದರೆ, ಸಾಕ್ಷಾತ್ ರಾಘವೇಂದ್ರ ಸ್ವಾಮಿಗಳೇ ಬೃಂದಾವನದಿಂದ ಎದ್ದು
ಬಂದರೇನೋ ಎಂಬಂತೆ ಭಾಸವಾಗುತ್ತದೆ. ಡಾ.ರಾಜ್ ಕುಮಾರ್ ಅವರು ದೇವರ ಪಾತ್ರಗಳಲ್ಲಿ ನಟಿಸಿದರೆ ಪ್ರತ್ಯಕ್ಷ ದೇವರಂತೆ ಕಾಣುತ್ತಿದ್ದರು. ಇನ್ನೊಂದು ವಿಶೇಷ ವಿಚಾರವೆಂದರೆ ಅಣ್ಣಾವ್ರು ದೇವರ ಪಾತ್ರಗಳನ್ನು ಮಾಡುವಾಗ ವ್ರತದಂತೆ ಕಟ್ಟುನಿಟ್ಟಾಗಿ ಪೂಜಾ ಪದ್ದತಿ ಮತ್ತು ಆಹಾರ ಪದ್ದತಿಯನ್ನು ಅನುಸರಿಸರಿಸಿ, ಶ್ರದ್ಧೆ ಭಕ್ತಿಯಿಂದ ದೇವರ ಪಾತ್ರ ಮಾಡುತ್ತಿದ್ದರಂತೆ. ಶ್ರೀ ರಾಘವೇಂದ್ರ ಸ್ವಾಮಿಗಳ ಸಿನಿಮಾ ಮಾಡುವಾಗಲೂ ಅಷ್ಟೇ ಶಿಸ್ತಿನಿಂದ ಇದ್ದರಂತೆ. ಡಾ. ರಾಜ್ ಕುಮಾರ್ ಅವರಿಂದಲೇ ಪುನೀತ್ ರಾಜ್‍ಕುಮಾರ್ ಅವರಿಗೂ ರಾಯರ ಮೇಲೆ ಭಕ್ತಿ ಮೂಡಿದ್ದಂತೆ.
ಡಾ.ರಾಜ್‍ಕುಮಾರ್ ಹಾಗೂ ಪುನೀತ್ ರಾಜ್ ಕುಮಾರ್ ದೇವರ ಸಿನಿಮಾಗಳಲ್ಲಿ ನಾನಾ ನೀನಾ ಎಂಬ ಸವಾಲಿನಂತೆಯೇ ಅಭಿನಯಿಸ್ತಾ ಇದ್ದರು. ಅದರಲ್ಲೂ ಪುನೀತ್ ರಾಜ್‍ಕುಮಾರ್ ಚಿಕ್ಕ ಹುಡುಗ ಆಗಿದ್ದಾಗಲೇ ಭಕ್ತ ಪ್ರಹ್ಲಾದ ಸಿನಿಮಾದಲ್ಲಿ ತಂದೆಗೆ ಸಮನಾಗಿ ಅಭಿನಯಿಸಿದ್ದರು. ತಂದೆಗೆ ತಕ್ಕ ಮಗನಾಗಿದ್ದ ಪುನೀತ್ ರಾಜ್‍ಕುಮಾರ್ ವಿಧಿಯ ಆಟಕ್ಕೆ ಬಹಳ ಬೇಗ ನಮ್ಮೆಲ್ಲರನ್ನು ಅಗಲಿಸಿದ್ದು, ನಾಡಿನ ಜನರು ಈಗಲೂ ಅರಗಿಸಿಕೊಳ್ಳಲು ಆಗುತ್ತಿಲ್ಲ.
ನಟನೆ, ಸಜ್ಜನಿಕೆ, ಸರಳತೆಯಲ್ಲಿ ಅಪ್ಪನಂತೆಯೇ ನಡೆದುಕೊಳ್ಳುತ್ತಿದ್ದ ಅಪ್ಪು, ರಾಯರ ಆಶೀರ್ವಾದದಿಂದ ಹುಟ್ಟಿದವರು ಎಂಬುದನ್ನು ಡಾ. ರಾಜ್‌ಕುಮಾರ್ ಅವರೇ ಹೇಳುತ್ತಿದ್ದರಂತೆ. ರಾಯರ ಮಠದ ಸ್ವಾಮೀಜಿಗಳು ಈ ಬಗ್ಗೆ ಸಾಕಷ್ಟು ಸಲ ತಿಳಿಸಿದ್ದಾರೆ. ಪುನೀತ್ ರಾಜ್‍ಕುಮಾರ್ ಚಿಕ್ಕವರಿದ್ದಾಗ ಅಣ್ಣಾವ್ರು ಅವರನ್ನು ಮಂತ್ರಾಲಯಕ್ಕೆ ಆಗಾಗ ಕರೆದುಕೊಂಡು ಹೋಗುತ್ತಿದ್ದರಂತೆ. ಹೀಗೆ ಚಿಕ್ಕ ಮಗುವಿನಿಂದ ರಾಯರ ಮಠಕ್ಕೆ ಹೋಗುತ್ತಿದ್ದ ಅಪ್ಪುವಿನಲ್ಲಿ ತಂದೆಯಿಂದ ಭಕ್ತಿ ಹೆಚ್ಚಾಗಿ, ರಾಯರ ಪರಮಭಕ್ತರಾಗಿದ್ದರು.
ರಾಯರ ಮಠಕ್ಕೆ ಆಗಾಗ ಕುಟುಂಬದವರ ಜೊತೆ, ಸ್ನೇಹಿತರ ಜೊತೆ ಭೇಟಿ ನೋಡುತ್ತಲೇ ಇದ್ದರು. ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಪರಮ ಭಕ್ತರಾಗಿದ್ದ ಅಪ್ಪು, 2020ರಲ್ಲಿ ನಡೆದ ರಾಯರ ಗುರುವೈಭವೋತ್ಸವಕ್ಕೆ ಹೋಗಿದ್ದರು. ಅವರು ರಾಯರ ಸನ್ನಿಧಾನದಲ್ಲಿ ಗಾಯನ ಮಾಡಿ ಭಕ್ತಿ ಸಮರ್ಪಿಸಿದ್ದರು. ಯಾವುದೇ ಸಿನೆಮಾ ಬಿಡುಗಡೆಯಾದಾಗ, ಶೂಟಿಂಗ್‌ನಿಂದ ಕೊಂಚ ವಿರಾಮ ಪಡೆದಾಗ ಅಥವಾ ಈ ಭಾಗದಲ್ಲಿ ಎಲ್ಲಿಯಾದರೂ ಶೂಟಿಂಗ್ ನಡೆದಾಗ ಪುನೀತ್ ರಾಜ್‌ಕುಮಾರ್ ಮಂತ್ರಾಲಯಕ್ಕೆ ಹೋಗಿ ಬರುತ್ತಿದ್ದರು. ರಾಯರ ದರ್ಶನ ಪಡೆದು ಹೋಗುವ ಪರಿಪಾಟ ಇಟ್ಟುಕೊಂಡಿದ್ದರು. ಅವರ ಕೊನೆಯ ಸಿನಿಮಾ “ಯುವರತ್ನ’ ಬಿಡುಗಡೆಯಾದಾಗಲೂ ರಾಯರ ಸನ್ನಿಧಿಗೆ ಬಂದು ಮಂಚಾಲಮ್ಮದೇವಿ, ಶ್ರೀ ರಾಘವೇಂದ್ರ ಸ್ವಾಮಿಗಳ ದರ್ಶನ ಮಾಡಿದ್ದರು.
ಏಳು ದಿನಗಳ ಕಾಲ ನಡೆಯುವ ಗುರು ವೈಭವೋತ್ಸವದ ಕೊನೆಯ ದಿನದ ಸಮಾರಂಭದಲ್ಲಿ ಪುನೀತ್ ರಾಜ್‍ಕುಮಾರ್ ಭಾಗಿಯಾಗಿದ್ದರು. ಅವರನ್ನು ಶ್ರೀ ಮಠದಿಂದ ಸನ್ಮಾನಿಸಲಾಯಿತು. ಸನ್ಮಾನಕ್ಕೂ ಮುನ್ನ ವೇದಿಕೆಯಲ್ಲಿ ಕುಳಿತಿದ್ದ ಪುನೀತ್ ರಾಜ್‍ಕುಮಾರ್ ತಮ್ಮ ಹಳೆಯ ನೆನಪುಗಳನ್ನು ನೆನಪಿಸಿಕೊಂಡು ಭಾವುಕರಾಗಿದ್ದರು. ಈ ವರ್ಷದ ಆರಾಧನೆಗೆ ಬರುತ್ತೀನಿ ಎಂದು ರಾಯರ ಸನ್ನಿಧಾನದಲ್ಲಿಯೇ ಹೇಳಿದ್ದರು. ಆದರೆ, ಆರಾಧನೆಗೂ ಮುನ್ನವೇ ಎಲ್ಲರನ್ನು ಬಿಟ್ಟು ಬಾರದೂರಿಗೆ ಪಯಣ ಬೆಳೆಸಿದ್ದು ನಾಡಿನ ಜನರಿಗೆ ದುಃಖದ ವಿಷಯ.
ಇನ್ನು ರಾಜ್‍ಕುಮಾರ್ ಅವರ ಎರಡನೇ ಪುತ್ರ ರಾಘವೇಂದ್ರ ರಾಜ್‍ಕುಮಾರ್ ಅವರಿಗೆ ಆ ಹೆಸರಿಡಲು ಕಾರಣವೂ ರಾಯರೇ. ಆಗ ‘ಮಂತ್ರಾಲಯ ಮಹಾತ್ಮೆ’ ಸಿನಿಮಾದ ಚಿತ್ರೀಕರಣ ನಡೆಯುತ್ತಿತ್ತು. ಟಿವಿ ಸಿಂಗ್ ಠಾಕೂರ್ ಈ ಚಿತ್ರವನ್ನ ನಿರ್ದೇಶನ ಮಾಡುತ್ತಿದ್ದರು. ರಾಜ್ ಕುಮಾರ್, ಉದಯ್ ಕುಮಾರ್, ಜಯಂತಿ, ಕಲ್ಪನಾ ನಟಿಸುತ್ತಿದ್ದರು. ಆ ಸಂದರ್ಭದಲ್ಲಿ ಹುಟ್ಟಿದವರೇ ರಾಘಣ್ಣ. ಈ ಹುಡುಗನಿಗೆ ಏನು ಹೆಸರಿಡಬೇಕು ಎಂಬ ಚಿಂತೆಯಲ್ಲಿ ಅಣ್ಣಾವ್ರು ಇದ್ದರು. ರಾಯರ ಪ್ರಸಾದ ಆಗಿದ್ದರಿಂದ ರಾಘವೇಂದ್ರ ಎಂದು ಹೆಸರಿಡುವುದು ಸೂಕ್ತ ಮತ್ತು ಶ್ರೇಯಸ್ಸು ಎಂದು ನಿರ್ಧರಿಸಿ ಆ ಹೆಸರಿಟ್ಟರಂತೆ.
ಹೀಗೆ ಅಣ್ಣಾವ್ರ ಕುಟುಂಬದ ದೇವರ ಮೇಲಿನ ಭಕ್ತಿ ಈಗಲೂ ಮುಂದುವರೆದಿದೆ. ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ಭಕ್ತರು ಮಾತ್ರವಲ್ಲ, ಎಲ್ಲ ದೇವರಿಗೂ ಅಷ್ಟೇ ಭಕ್ತಿ ದೊಡ್ಮನೆ ಕುಟುಂಬದವರಲ್ಲಿದೆ. ಅದರಲ್ಲೂ ಅಪ್ಪು ಪ್ರತಿ ವರ್ಷ ಮಾಲೆ ಧರಿಸಿ ಶಬರಿಮಲೆಗೆ ಹೋಗುತ್ತಿದ್ದರು, ಚಾಮುಂಡಿಬೆಟ್ಟವನ್ನು ಬರಿಗಾಲಿನಲ್ಲಿ ಹತ್ತುತ್ತಿದ್ದರು, ಆಂಜನೇಯನ ಸನ್ನಿಧಿಗೆ ಪ್ರತಿವಾರ ಭೇಟಿ ನೀಡಿ ಪೂಜೆ ಸಲ್ಲಿಸುತ್ತಿದ್ದರು. ಡಾ. ರಾಜ್‍ಕುಮಾರ್ ಅವರಿಂದ ದೇವರ ಮೇಲಿನ ಭಕ್ತಿಯನ್ನು ಮುತ್ತುಗಳಂತಿರುವ ಮೂವರು ಮಕ್ಕಳು ರೂಢಿಸಿಕೊಂಡಿದ್ದರು.
ಡಾ.ರಾಜ್‍ಕುಮಾರ್ ಮತ್ತು ಭಕ್ತಿಗೀತೆಗಳಿಗೆ ಅದೇನೊ ಬಿಡಿಸಲಾರದ ಬಂಧ ಎಂದೇ ಹೇಳಬಹುದು. ಅವರ ಕಂಠ ಸಿರಿಯಲ್ಲಿ ದೇವರ ಹಾಡುಗಳನ್ನು ಕೇಳುತ್ತಾ ಇದ್ದರೆ ಹಾಗೇ ತೇಲೊ ಹೋದ ಭಾವ ಬರುತ್ತದೆ. ಅದರಲ್ಲೂ ಹೇಳಿ ಕೇಳಿ ಅಣ್ಣಾವ್ರು ರಾಘವೇಂದ್ರ ಸ್ಚಾಮಿ ಭಕ್ತರು. ಯಾವಾಗಲೂ ಮಂತ್ರಾಲಯಕ್ಕೆ ಹೋಗಿ ಬರುತ್ತಿದ್ದರು. ಕೆಲವು ಸಿನಿಮಾಗಳಲ್ಲಿ ರಾಘವೇಂದ್ರ ಸ್ವಾಮಿಗಳ ವೇಷವನ್ನು ಧರಿಸಿದ್ದಾರೆ. ಆ ಭಕ್ತಿಗೀತೆ ಹಾಡುವ ಮೂಲಕ ಇನ್ನಷ್ಟು ಅವರಲ್ಲಿ ಹೆಚ್ಚಾಗಿತ್ತು. ಈಗಲೂ ಅಣ್ಣಾವ್ರು ಬಂಗಾರದ ಮನುಷ್ಯ ಸಿನಿಮಾದ ಹಾಡಿದ ಹಾಡು ಎವರ್ ಗ್ರೀನ್ ಹಾಡು ಎಂದೇ ಹೇಳಬಹುದು. ಚಿ.ಉದಯ್ ಶಂಕರ್ ಅವರು ಬರೆದಿದ್ದ ಹಾಲಲ್ಲಾದರು ಹಾಕು ನೀರಲ್ಲಾದರೂ ಹಾಕು ಹಾಡು ಕೇಳುವಾಗೆಲ್ಲಾ ಮೈ ಝುಮ್ಮೆನ್ನದೆ ಇರದು. ಅಷ್ಟೇ ಅಲ್ಲ ಪವರ್ ಸ್ಟಾರ್ ಡಾ.ಪುನೀತ್ ರಾಜ್ ಕುಮಾರ್ ಅವರಿಗೂ ಈ ಹಾಡು ಅಚ್ಚು ಮೆಚ್ಚು. ರಾಘವೇಂದ್ರ ಸ್ವಾಮಿ ಮಠಕ್ಕೆ ಹೋದಾಗಲೂ ಈ ಹಾಡನ್ನು ಅವರು ಹಾಡುತ್ತಿದ್ದರು. ಭಕ್ತಿಪ್ರಧಾನ ಕಾರ್ಯಕ್ರಮಕ್ಕೆ ಹೋದಾಗಲೂ ಹಾಲಲ್ಲಾದರೂ ಹಾಕು ನೀರಲ್ಲಾದರೂ ಹಾಕು ಎಂಬ ಹಾಡನ್ನು ಹಾಡಿರುವ ವಿಡಿಯೋಗಳು ಇಂದಿಗೂ ಲಭ್ಯವಿದೆ.
ಲೇಖನ : ಸರೋಜಾ, ಪತ್ರಕರ್ತರು, ತುಮಕೂರು