ರಾಯಚೂರು: ಇತ್ತೀಚೆಗೆ ಮಂಗಳೂರಿನಲ್ಲಿ ಮೂರು ಹತ್ಯೆ ನಡೆದಿದೆ. ಬಿಜೆಪಿ ಕಾರ್ಯಕರ್ತನಾಗಿದ್ದ ಪ್ರವೀಣ್ ನೆಟ್ಟಾರು ಹತ್ಯೆ ನಡೆದ ಬಳಿಕ ಅವರ ಮನೆಗೆ ಬಿಜೆಪಿ ನಾಯಕರು, ಸಿಎಂ ಬೊಮ್ಮಾಯಿ ಭೇಟಿ ನೀಡಿ ಪರಿಹಾರ ನೀಡಿದ್ದಾರೆ. ಈ ವಿಚಾರಕ್ಕೆ ಪ್ರತಿಕ್ರಿಯೆ ನೀಡಿರುವ ಮಂತ್ರಾಲಯದ ಪೀಠಾಧಿಪತಿ ಸುಬುದೇಂದ್ರ ಸ್ವಾಮೀಜಿ, ಪ್ರಾಣ ಕಳೆದುಕೊಂಡವರೆಲ್ಲಾ ಸಮಾನರೆ. ಸಾವಿನಲ್ಲಿ ತಾರತಮ್ಯ ಮಾಡಬಾರದು ಎಂದಿದ್ದಾರೆ.
ಎಲ್ಲರಿಗೂ ಸೂಕ್ತ ರೀತಿಯಲ್ಲಿ ಪರಿಹಾರ ನೀಡಬೇಕು ಎಂದು ಸರ್ಕಾರಕ್ಕೆ ಕೋರುತ್ತೇನೆ. ಹತ್ಯೆಯಾದ ಯಾವುದೇ ವ್ಯಕ್ತಿಗೆ ಹಣದ ಮೂಲಕ ಪರಿಹಾರ ನೀಡುವುದು ಪರ್ಯಾಯವಲ್ಲ. ಹಣಕ್ಕೆ ಮತ್ತು ಜೀವಕ್ಕೆ ತುಲನೆ ಮಾಡಲು ಬರುವುದಿಲ್ಲ. ಕುಟುಂಬದವರಿಗೆ ತೊಂದರೆಯಾಗಬಾರದೆಂದು ಸಹಾಯ ಮಾಡುತ್ತಾರೆ. ಆದರೆ ಆಯಾ ರಾಜ್ಯ ಸರ್ಕಾರಗಳು ಪ್ರಾಣ ಕಳೆದುಕೊಂಡ ಎಲ್ಲರಿಗೂ ಪರಿಹಾರ ನೀಡಬೇಕು. ಪರಿಹಾರ ನೀಡುವಲ್ಲಿ ಸರ್ಕಾರ ತಾರತಮ್ಯ ಮಾಡಬಾರದು ಎಂದಿದ್ದಾರೆ.
ಯಾವುದೇ ಸಮುದಾಯದವರು ಇತರ ಸಮುದಾಯದ ಮೇಲೆ ಆಕ್ರಮಣ, ಬೆದರಿಕೆ, ದಬ್ಬಾಳಿಕೆ ಮಾಡಬಾರದು. ಯಾವುದೇ ಸಮುದಾಯದವರು ಮಾಡಿದರೂ ಶಾಂತಿಯುತವಾಗಿ ತೀವ್ರವಾಗಿ ವಿರೋಧಿಸುತ್ತೇವೆ. ಭದ್ರತೆ, ಶಾಂತಿ, ನೆಮ್ಮದಿ ದೇಶದ ಉದ್ದೇಶ. ಯಾವುದೇ ಸಮುದಾಯದವರ ಮೇಲೂ ದಬ್ಬಾಳಿಕೆಯಾಗಬಾರದು. ಯಾರ ಮೇಲೂ ದಬ್ಬಾಳಿಕೆಯಾಗದಂತೆ ಸರ್ಕಾರ ಗಮನಿಸಬೇಕು ಎಂದು ಮಂತ್ರಾಲಯ ಶ್ರೀಗಳು ಹೇಳಿದರು.