ಕೇರಳದ ವಯನಾಡು ಜಿಲ್ಲೆಯ ಮಾನಂತವಾಡಿಯಲ್ಲಿರುವ ಎರಡು ಪಶುಸಂಗೋಪನಾ ಕೇಂದ್ರಗಳಲ್ಲಿ ‘ಆಫ್ರಿಕನ್ ಹಂದಿಜ್ವರ’ (ಎಎಸ್‌ಎಫ್) ಪ್ರಕರಣಗಳು ವರದಿಯಾಗಿವೆ. ಅಧಿಕಾರಿಗಳು ಈ ಬಗ್ಗೆ ಮಾಹಿತಿ ನೀಡಿದ್ದು, ಜಿಲ್ಲೆಯ ಎರಡು ಪಶುಸಂಗೋಪನಾ ಕೇಂದ್ರಗಳ ಹಂದಿಗಳಲ್ಲಿ ಈ ರೋಗ ದೃಢಪಟ್ಟಿದೆ.
ಭೋಪಾಲ್‌ನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೈ ಸೆಕ್ಯುರಿಟಿ ಅನಿಮಲ್ ಡಿಸೀಸ್‌ನಲ್ಲಿ ಮಾದರಿಗಳನ್ನು ಪರೀಕ್ಷಿಸಲಾಯಿತು. ಒಂದು ಕೇಂದ್ರದಲ್ಲಿ ಹಲವಾರು ಹಂದಿಗಳು ಸಾವನ್ನಪ್ಪಿದ ನಂತರ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪಶುಸಂಗೋಪನಾ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದೀಗ ಫಲಿತಾಂಶದಲ್ಲಿ ಈ ಜ್ವರ ದೃಢಪಟ್ಟಿದೆ. ಎರಡನೇ ಕೇಂದ್ರದಲ್ಲಿ 300 ಹಂದಿಗಳನ್ನು ಕೊಲ್ಲಲು ಸೂಚನೆ ನೀಡಲಾಗಿದೆ. ರೋಗ ಹರಡದಂತೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಇಲಾಖೆ ತಿಳಿಸಿದೆ.
ಈ ತಿಂಗಳ ಆರಂಭದಲ್ಲಿ ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದ ನಂತರ ರಾಜ್ಯವು ಈಗಾಗಲೇ ಜೈವಿಕ ಭದ್ರತಾ ಕ್ರಮಗಳನ್ನು ಬಿಗಿಗೊಳಿಸಿದೆ. ಬಿಹಾರ ಮತ್ತು ಕೆಲವು ಈಶಾನ್ಯ ರಾಜ್ಯಗಳಲ್ಲಿ ‘ಆಫ್ರಿಕನ್ ಹಂದಿಜ್ವರ’ ಪ್ರಕರಣಗಳು ವರದಿಯಾಗಿವೆ ಎಂದು ಕೇಂದ್ರ ಸರ್ಕಾರ ತಿಳಿಸಿತ್ತು. ಆಫ್ರಿಕನ್ ಹಂದಿ ಜ್ವರವು ಅತ್ಯಂತ ಸಾಂಕ್ರಾಮಿಕ ಮತ್ತು ಮಾರಣಾಂತಿಕ ಕಾಯಿಲೆಯಾಗಿದೆ.
ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ, ಇದು ಕಾಡು ಮತ್ತು ಸಾಕು ಹಂದಿಗಳಲ್ಲಿ ಪ್ರಚಲಿತದಲ್ಲಿರುವ ಹೆಚ್ಚು ಸಾಂಕ್ರಾಮಿಕ ವೈರಲ್ ರೋಗವಾಗಿದೆ ಮತ್ತು ಹೆಚ್ಚಿನ ಮರಣ ಪ್ರಮಾಣವನ್ನು ಹೊಂದಿದೆ. ಈ ರೋಗದ ವಿರುದ್ಧ ಇನ್ನೂ ಯಾವುದೇ ಲಸಿಕೆ ಸಿದ್ಧವಾಗಿಲ್ಲ. ಇದು ಮನುಷ್ಯರಿಗೆ ಅಪಾಯವಲ್ಲ, ಆದರೆ ಇದು ಹಂದಿ ಉದ್ಯಮ ಮತ್ತು ರೈತರ ಜೀವನೋಪಾಯದ ಮೇಲೆ ಪರಿಣಾಮ ಬೀರುತ್ತಿದೆ.