ಹೊಸದಿಲ್ಲಿ: ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಸಂಬಂಧಿಸಿದ ಮನಿ ಲಾಂಡರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜುಲೈ 21 ರಂದು ವಿಚಾರಣೆಗೆ ಹಾಜರಾಗುವಂತೆ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಮತ್ತೆ ಸಮನ್ಸ್ ನೀಡಿದೆ.
ಸೋನಿಯಾ ಗಾಂಧಿಯವರಿಗೆ ಈ ಹಿಂದೆ ಜೂನ್ 23 ರಂದು ಕೇಂದ್ರೀಯ ಸಂಸ್ಥೆ ಎರಡನೇ ನೋಟಿಸ್ ನೀಡಿತ್ತು, ಆದರೆ 75 ವರ್ಷದ ಕಾಂಗ್ರೆಸ್ ನಾಯಕಿ ಅವರು “ಕೋವಿಡ್ -19ನಿಂದ ಆಸ್ಪತ್ರೆಗೆ ದಾಖಲಾಗಿದ್ದರು. ನಂತರ ಮನೆಯಲ್ಲಿ ವಿಶ್ರಾಂತಿ ಪಡೆಯಲು ವೈದ್ಯರು ಸೂಚಿಸಿದ್ದರಿಂದ ವಿಚಾರಣೆಗೆ ಹಾಜರಾಗಲು ಸಾಧ್ಯವಾಗಿರಲಿಲ್ಲ.
ಅನಾರೋಗ್ಯದಿಂದ ಬಳಲುತ್ತಿರುವ ಹಂಗಾಮಿ ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾಗಾಂಧಿ ಸಮನ್ಸ್ ಅನ್ನು ನಾಲ್ಕು ವಾರಗಳವರೆಗೆ ಮುಂದೂಡಲು ಪ್ರಯತ್ನಿಸಿದ್ದಾರೆ ಎನ್ನಲಾಗಿದೆ. ಈ ಮಧ್ಯೆ ಇಡಿ ಜುಲೈ 21 ರಂದು ಹಾಜರಾಗಲು ಸೂಚನೆ ನೀಡಿದ್ದಾರೆ. ಕಾಂಗ್ರೆಸ್ ಅಧ್ಯಕ್ಷರಿಗೆ ಮೊದಲು ಜೂನ್ 8 ರಂದು ಹಾಜರಾಗಲು ನೋಟಿಸ್ ನೀಡಲಾಯಿತು. ಆದರೆ ಅವರು ಕೊರೋನಾ ಸೋಂಕಿಗೆ ಒಳಗಾಗಿದ್ದ ಕಾರಣ ಜೂನ್ 23 ಕ್ಕೆ ಮತ್ತೆ ಸಮನ್ಸ್ ನೀಡಲಾಗಿತ್ತು.
ಈ ಪ್ರಕರಣದಲ್ಲಿ ಸೋನಿಯಾ ಗಾಂಧಿ ಅವರ ಪುತ್ರ ಮತ್ತು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರನ್ನು ಇಡಿ ಅಧಿಕಾರಿಗಳು ಸುಮಾರು 50 ಗಂಟೆಗಳ ಕಾಲ ವಿಚಾರಣೆ ನಡೆಸಿದ್ದಾರೆ.