ವರದಿ ಮತ್ತು ಫೋಟೋ : ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಚಿತ್ರದುರ್ಗ: ಮೀಸಲಾತಿ ಹೆಚ್ಚಳಕ್ಕಾಗಿ 150 ದಿನಗಳಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಪ್ರಸನ್ನಾನಂದಸ್ವಾಮಿಗಳು ನಡೆಸುತ್ತಿರುವ ಧರಣಿಗೆ ರಾಜ್ಯ ಸರ್ಕಾರ ಸ್ಪಂದಿಸದೆ ತಾತ್ಸಾರ ಧೋರಣೆ ಅನುಸರಿಸುತ್ತಿರುವುದಕ್ಕೆ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಹೋರಾಟ ಎಚ್ಚರಿಕೆಯ ಗಂಟೆಯಾಗಬೇಕೆಂದು ಬಸವಮೂರ್ತಿ ಮಾದಾರ ಚನ್ನಯ್ಯಸ್ವಾಮೀಜಿ ಹೇಳಿದರು.
ಪರಿಶಿಷ್ಟ ಜಾತಿಗೆ ಶೇ.15 ರಿಂದ ಶೇ.17, ಪರಿಶಿಷ್ಟ ಪಂಗಡಕ್ಕೆ ಶೇ.3 ರಿಂದ 7.5 ಮೀಸಲಾತಿ ಹೆಚ್ಚಳಕ್ಕೆ ರಾಜಧಾನಿಯಲ್ಲಿ ಸ್ವಾಮೀಜಿ ಕುಳಿತಿರುವ ಧರಣಿಗೆ ಇಡೀ ರಾಜ್ಯದಲ್ಲಿರುವ ಎಸ್ಸಿ.ಎಸ್ಟಿ.ಗಳು ಬೆಂಬಲವಾಗಿ ನಿಲ್ಲಬೇಕು. ನಾಗಮೋಹನ್‌ದಾಸ್ ವರದಿ ನೀಡಿ ಎರಡು ವರ್ಷಗಳಾದರೂ ಸರ್ಕಾರ ಸುಮ್ಮನಿರುವುದನ್ನು ನೋಡಿಕೊಂಡು ನಾವುಗಳು ಕೈಕಟ್ಟಿ ಕುಳಿತುಕೊಳ್ಳಬಾರದು.
ಪರಿಶಿಷ್ಟ ಜಾತಿಯಲ್ಲಿ ನೂರ ಒಂದು, ಪರಿಶಿಷ್ಟ ಪಂಗಡದಲ್ಲಿ 51 ಒಳಜಾತಿಗಳಿವೆ. ಗುರಿಮುಟ್ಟುವತನಕ ಹೋರಾಟ ನಿಲ್ಲಬಾರದು. ಸ್ವಾಮೀಜಿಗಳಿಗೆ ಕೈಜೋಡಿಸಬೇಕು. ಅದಕ್ಕಾಗಿ ದೊಡ್ಡ ಕ್ರಾಂತಿಯಾದಾಗ ಮಾತ್ರ ಸರ್ಕಾರ ಜಾಗೃತಗೊಳ್ಳಲಿದೆ ಎಂದರು.
ಜನಾಂಗದ ತಾಳ್ಮೆಯನ್ನು ಪರೀಕ್ಷಿಸುವುದು ಬೇಡ. ಅದಕ್ಕೆ ಬದಲಾಗಿ ನ್ಯಾಯಮೂರ್ತಿ ನಾಗಮೋಹನ್‌ದಾಸ್ ವರದಿಯನ್ನು ಜಾರಿಗೊಳಿಸಿ. ರಾಜ್ಯದ ಮುಖ್ಯಮಂತ್ರಿ ಸಚಿವ ಸಂಪುಟ ಸಹೋದ್ಯೋಗಿಗಳ ತುರ್ತು ಸಭೆ ಕರೆದು ಕೂಡಲೆ ಇತ್ಯರ್ಥಗೊಳಿಸಲಿ ಎಂದು ಒತ್ತಾಯಿಸಿದರು.
ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿ ಆಳುವ ಸರ್ಕಾರಗಳು ಯಾವುದೇ ಇರಬಹುದು. ಆದರೆ ಹೋರಾಟ ಪರಿಪಕ್ವವಾಗಿದ್ದಾಗ ಮಾತ್ರ ಧರಣಿ, ಚಳುವಳಿಗಳಿಗೆ ಯಶಸ್ಸು ಸಿಗುತ್ತದೆ. ರಾಜ್ಯದಲ್ಲಿ ಶೇ.30 ರಷ್ಟು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿದ್ದೇವೆ. ತಾಳ್ಮೆಯನ್ನು ಕೆಣಕಿದರೆ ಮುಂದಿನ ಪರಿಸ್ಥಿತಿ ನೆಟ್ಟಗಿರುವುದಿಲ್ಲ. ವಿಳಂಬ ನೀತಿ ಅನುಸರಿಸಿದಂತೆಲ್ಲಾ ವಿರೋಧಗಳ ಶಕ್ತಿ ಹೆಚ್ಚುತ್ತದೆ. ನ್ಯಾಯಮೂರ್ತಿ ನಾಗಮೋಹನ್‌ದಾಸ್ ವರದಿ ಸ್ಪಷ್ಠ, ನಿಖರ, ನೇರವಾಗಿದೆ. ಪರಿಶೀಲಿಸುವ ಅಗತ್ಯವಿಲ್ಲ ಸರ್ಕಾರ ಮೀಸಲಾತಿ ಹೆಚ್ಚಿಸಲಿ ಎಂದು ಆಗ್ರಹಿಸಿದರು.
ಬಂಜಾರ ಗುರುಪೀಠದ ಸರ್ದಾರ್ ಸೇವಾಲಾಲ್ ಸ್ವಾಮೀಜಿ ಮಾತನಾಡುತ್ತ ಪರಿಶಿಷ್ಟ ಪಂಗಡಕ್ಕೆ ಶೇ.7.5 ಮೀಸಲಾತಿ ಹೆಚ್ಚಳಕ್ಕೆ ಪ್ರಸನ್ನಾನಂದಸ್ವಾಮೀಜಿ 150 ದಿನಗಳಿಂದಲೂ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಧರಣಿ ಕುಳಿತಿದ್ದರೂ ರಾಜ್ಯ ಸರ್ಕಾರ ನಿರ್ಲಕ್ಷೆ ವಹಿಸಿ ಜನಾಂಗವನ್ನು ಕೆಣಕುತ್ತಿದೆ. ಸಂವಿಧಾನಬದ್ದವಾದ ಮೀಸಲಾತಿ ಹಕ್ಕನ್ನು ಕೇಳುತ್ತಿದ್ದಾರೆ. ಹಾಗಾಗಿ ಇನ್ನು ತಡೆ ಮಾಡದೆ ಮೀಸಲಾತಿ ಹೆಚ್ಚಿಸಿ ಇಲ್ಲವಾದರೆ ಇಡೀ ರಾಜ್ಯದಲ್ಲಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರು ಸ್ವಾಮೀಜಿಗೆ ಬೆಂಬಲಿಸಿ ಬೃಹತ್ ಶಕ್ತಿ ಪ್ರದರ್ಶನ ಮಾಡಬೇಕಾಗುತ್ತದೆಂದು ಎಚ್ಚರಿಸಿದರು.
ಬಸವಪ್ರಭು ಕೇತೇಶ್ವರ ಸ್ವಾಮೀಜಿ ಮಾತನಾಡಿ ಪ್ರಸನ್ನಾನಂದಸ್ವಾಮೀಜಿ ತಮ್ಮೊಬ್ಬರ ಸ್ವಾರ್ಥಕ್ಕಾಗಿ ರಾಜಧಾನಿಯಲ್ಲಿ ಅಹೋರಾತ್ರಿ ಧರಣಿ ಕೂತಿಲ್ಲ. ತಲ ತಲಾಂತರದಿಂದಲೂ ಶೋಷಣೆ ಅನುಭವಿಸಿಕೊಂಡು ಬರುತ್ತಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದವರಿಗೆ ಮೀಸಲಾತಿ ಹೆಚ್ಚಿಸುವಂತೆ ನ್ಯಾಯಬದ್ದವಾಗಿ ಕೇಳುತ್ತಿದ್ದಾರೆ. ಗುರಿಮುಟ್ಟುವತನಕ ಸ್ವಾಮೀಜಿ ಧರಣಿಯಿಂದ ಹಿಂದೆ ಸರಿಯುವುದಿಲ್ಲ. ಅದಕ್ಕಾಗಿ ಎಸ್ಸಿ.ಎಸ್ಟಿ.ಗಳು ಸ್ವಾಮೀಜಿಗೆ ಬೆಂಬಲವಾಗಿ ನಿಲ್ಲಬೇಕು ಎಂದು ಹೇಳಿದರು.