ಚಿತ್ರದುರ್ಗ: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ಇನ್ನು ಹದಿನೈದು ದಿನದೊಳಗೆ ಮೀಸಲಾತಿ ಹೆಚ್ಚಿಸದಿದ್ದರೆ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯನ್ನು ಎಲ್ಲಿಯೂ ಓಡಾಡಲು ಬಿಡುವುದಿಲ್ಲ. ಕಪ್ಪು ಭಾವುಟ ಪ್ರದರ್ಶನ ಮಾಡುತ್ತೇವೆಂದು ಬಿಎಸ್‌ಪಿ. ರಾಜ್ಯ ಸಂಯೋಜಕ ಮತ್ತು ಉಸ್ತುವಾರಿ ಮಾರಸಂದ್ರ ಮುನಿಯಪ್ಪ ಗಡುವು ನೀಡಿದರು.
ಪರಿಶಿಷ್ಟ ಪಂಡಕ್ಕೆ ಶೇ.7.5 ಮೀಸಲಾತಿ ಹೆಚ್ಚಳಕ್ಕಾಗಿ ಒತ್ತಾಯಿಸಿ ಪ್ರಸನ್ನಾನಂದ ಸ್ವಾಮಿಗಳು ಕಳೆದ 152 ದಿನಗಳಿಂದ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ನಡೆಸುತ್ತಿರುವ ಅಹೋರಾತ್ರಿ ಧರಣಿಗೆ ಬೆಂಬಲಿಸಿ ಒನಕೆ ಓಬವ್ವ ವೃತ್ತದಲ್ಲಿ ಸೋಮವಾರ ಹಮ್ಮಿಕೊಳ್ಳಲಾಗಿದ್ದ ಬೃಹತ್ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.
ರಾಜ್ಯದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ 51 ಶಾಸಕರುಗಳಿದ್ದಾರೆ. 151 ಸಂಸದರು ದೇಶದಲ್ಲಿದ್ದಾರೆ. ಎಲ್ಲರೂ ಧ್ವನಿ ಎತ್ತಬೇಕಾಗಿದೆ. ಓಳ ಜಾತಿಗಳು ಏನೆ ಇರಲಿ ಮೀಸಲಾತಿ ಎನ್ನುವುದು ಬಂದಾಗ ಎಲ್ಲರೂ ಒಗ್ಗಟ್ಟಾಬೇಕು ಎಂದು ಕರೆ ನೀಡಿದರು.
ಬಡತನ, ಅನಕ್ಷರತೆ, ದೌರ್ಜನ್ಯ, ದಬ್ಬಾಳಿಕೆ ನಡೆಯುತ್ತಿದೆ. ಮೀಸಲಾತಿ ಜಾರಿಗಾಗಿ 2019 ರಲ್ಲಿ ಪ್ರಸನ್ನಾನಂದಸ್ವಾಮಿಗಳು ರಾಜನಹಳ್ಳಿಯಿಂದ ರಾಜಧಾನಿವರೆಗೆ ನಾಲ್ಕು ನೂರು ಕಿ.ಮೀ.ಪಾದಯಾತ್ರೆ ನಡೆಸಿದ್ದಾರೆ. ನಾಗಮೋಹನ್‌ದಾಸ್ ವರದಿ ನೀಡಿ ಎರಡು ವರ್ಷಗಳಾದರೂ ರಾಜ್ಯ ಸರ್ಕಾರ ಇನ್ನು ನಿರ್ಲಕ್ಷೆಯಿಂದ ಕಾಣುತ್ತಿದೆ. ತುಳಿತಕ್ಕೊಳಗಾದವರಿಗೆ ಮೀಸಲಾತಿ ನೀಡಬೇಕೆಂದು ಸಂವಿಧಾನದಲ್ಲಿ ಹೇಳಿದೆ.
ಕೆಳ ಸಮುದಾಯದವರನ್ನು ತಾತ್ಸಾರ ಮಾಡುವುದು ಸರಿಯಲ್ಲ. ನಿದ್ದೆಯಿಂದ ಸರ್ಕಾರ ಎಚ್ಚೆತ್ತುಕೊಂಡು ಕೂಡಲೆ ಮೀಸಲಾತಿ ಜಾರಿಗೊಳಿಸಬೇಕು. ಇಲ್ಲವಾದಲ್ಲಿ ಯಾರೆ ಸಚಿವರುಗಳು ಓಡಾಡಲು ಬಿಡುವುದಿಲ್ಲ. ಬಗರ್‌ಹುಕುಂ ಸಾಗುವಳಿ ಮಾಡುತ್ತಿರುವ ಪರಿಶಿಷ್ಟ ಜಾತಿ ವರ್ಗದವರಿಗೆ ಹಕ್ಕುಪತ್ರ ನೀಡಿಲ್ಲ. ಸ್ಮಶಾನಕ್ಕೆ ಜಾಗವಿಲ್ಲ. ಎಸ್ಸಿ. ಎಸ್ಟಿ.ಗಳ ಮೇಲೆ ಅತ್ಯಾಚಾರ ಕೊಲೆ ನಡೆಯುತ್ತಿದೆ ಆದರೂ ಆಳುವ ಸರ್ಕಾಗಳು ಸುಮ್ಮನಿವೆ. ಇನ್ನಾದರೂ ಜಾಗೃತರಾಗಬೇಕಿದೆ ಎಂದು ಹೇಳಿದರು.
ಮಾಜಿ ಸಚಿವ ಹೆಚ್.ಆಂಜನೇಯ ಮಾತನಾಡಿ ರಾಜ್ಯ ಸರ್ಕಾರಕ್ಕೆ ನಾಗಮೋಹನ್‌ದಾಸ್ ವರದಿ ನೀಡಿ ಎರಡು ವರ್ಷಗಳಾಗಿದೆ. ಜಾರಿಗೊಳಿಸಲು ಇಚ್ಚೆಯಿಲ್ಲ. ಮುಂದಿನ ದಿನಗಳಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರು ಲಕ್ಷೋಪ ಲಕ್ಷ ಸಂಖ್ಯೆಯಲ್ಲಿ ಸೇರಿ ಬೆಂಗಳೂರಿನಲ್ಲಿ ಧರಣಿ ನಡೆಸುತ್ತಿರುವ ಪ್ರಸನ್ನಾನಂದಸ್ವಾಮಿಗೆ ಬೆಂಬಲಿಸಿದಾಗ ಮಾತ್ರ ರಾಜ್ಯ ಸರ್ಕಾರ ಎಚ್ಚೆತ್ತುಕೊಳ್ಳುತ್ತದೆ ಎಂದು ತಿಳಿಸಿದರು.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಸಂಘಟಿತ ಕಾರ್ಮಿಕ ವಿಭಾಗದ ರಾಜ್ಯಾಧ್ಯಕ್ಷ ಜಿ.ಎಸ್.ಮಂಜುನಾಥ್ ಮಾತನಾಡುತ್ತ ಇಲ್ಲಿಯವರೆಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರನ್ನು ಮೋಸ ಮಾಡಿಕೊಂಡು ಬರುತ್ತಿರುವ ಸರ್ಕಾರಗಳಿಗೆ ಪಾಠ ಕಲಿಸಿ ಮುಂದಿನ ಚುನಾವಣೆಯಲ್ಲಿ ಕಿತ್ತೊಗೆಯದಿದ್ದರೆ ಎಸ್ಸಿ.ಎಸ್ಟಿ.ಗಳ ಸರ್ವನಾಶವಾಗುವುದರಲ್ಲಿ ಅನುಮಾನವಿಲ್ಲ. ಮೇಲ್ವರ್ಗದವರು ಮೀಸಲಾತಿ ಕೇಳದಿದ್ದರು ಶೇ.10 ರಷ್ಟು ಮೀಸಲಾತಿಯನ್ನು ಕೇಂದ್ರ ಸರ್ಕಾರ ನೀಡಿದೆ. ಅದೇ ಪ್ರಸನ್ನಾನಂದಸ್ವಾಮಿಗಳು ಕಳೆದ 152 ದಿನಗಳಿಂದ ಮೀಸಲಾತಿ ಹೆಚ್ಚಳಕ್ಕಾಗಿ ಬೆಂಗಳೂರಿನಲ್ಲಿ ಧರಣಿ ನಡೆಸುತ್ತಿದ್ದರೂ ಮೋಸ ಮಾಡುವ ಪಕ್ಷಗಳಿಗೆ ಮಣೆ ಹಾಕುವ ಕೆಲಸ ಮಾಡುತ್ತಿದ್ದೇವೆ. ಎಸ್ಸಿ, ಎಸ್ಟಿ.ಗಳ ಪರವಾಗಿ ಯಾರಿದ್ದಾರೆಂಬುದನ್ನು ಅರ್ಥಮಾಡಿಕೊಂಡು ಮುಂದಿನ ಚುನಾವಣೆಯಲ್ಲಿ ಯೋಗ್ಯರನ್ನು ಆಯ್ಕೆ ಮಾಡಬೇಕೆಂದು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡವರನ್ನು ಎಚ್ಚರಿಸಿದರು.
ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಮಾತನಾಡಿ ಪರಿಶಿಷ್ಟ ಪಂಗಡಕ್ಕೆ ಶೇ.7.5 ಮೀಸಲಾತಿಗಾಗಿ ಪ್ರಸನ್ನಾನಂದಸ್ವಾಮಿಗಳು ಕಳೆದ 152 ದಿನಗಳಿಂದ ಫ್ರೀಡಂ ಪಾರ್ಕಿನಲ್ಲಿ ಧರಣಿ ಕುಳಿತಿದ್ದರೂ ರಾಜ್ಯ ಸರ್ಕಾರ ಸ್ಪಂದಿಸುತ್ತಿಲ್ಲ. ರಾಜನಹಳ್ಳಿಯಿಂದ ರಾಜಧಾನಿವರೆಗೂ ಪಾದಯಾತ್ರೆ ನಡೆಸಿ ಸರ್ಕಾರದ ಗಮನ ಸೆಳೆದಿದ್ದಾರೆ. ಅಧಿವೇಶನದಲ್ಲಿ ಮೂರು ಬಾರಿ ಪ್ರತಿಭಟನೆ ನಡೆಸಿದ್ದೇವೆ. ಧರಣಿ ಮಾಡಿದ್ದೇವೆ. ಜನಸಂಖ್ಯೆಗನುಗುಣವಾಗಿ ಮೀಸಲಾತಿ ಸಿಗಬೇಕು. ಎಸ್ಸಿ.ಎಸ್ಟಿ.ಗಳಿಗೆ ಮೋಸ ಮಾಡುತ್ತಿರುವ ಬಿಜೆಪಿ.ಸರ್ಕಾರ ಧರ್ಮದ ವಿಚಾರವನ್ನು ಹೇಳಿ ಜನತೆಯನ್ನು ದಿಕ್ಕುತಪ್ಪಿಸುತ್ತಿವೆ. ಹಾಗಾಗಿ ಸರ್ಕಾರಕ್ಕೆ ಎಚ್ಚರಿಕೆ ಕೊಡಬೇಕಿದೆ ಎಂದು ಪ್ರತಿಭಟನಾಕಾರರಲ್ಲಿ ಮನವಿ ಮಾಡಿದರು.
ಜಿಲ್ಲಾ ನಾಯಕ ಸಮಾಜದ ಅಧ್ಯಕ್ಷ ಹೆಚ್.ಜೆ.ಕೃಷ್ಣಮೂರ್ತಿ, ತಾಲ್ಲೂಕು ಅಧ್ಯಕ್ಷ ಬಿ.ಕಾಂತರಾಜ್, ನಾಯಕ ಸಮಾಜದ ಮುಖಂಡರುಗಳಾದ ಹರ್ತಿಕೋಟೆ ವೀರೇಂದ್ರಸಿಂಹ, ಡಿ.ಗೋಪಾಲಸ್ವಾಮಿ ನಾಯಕ, ಕೆ.ಪಿ.ಸಂಪತ್‌ಕುಮಾರ್, ಕಾಟಿಹಳ್ಳಿ ಕರಿಯಪ್ಪ, ಸಂದೀಪ್, ಫಾದರ್ ಎಂ.ಎಸ್.ರಾಜು, ನಗರಸಭೆ ಸದಸ್ಯರುಗಳಾದ ವೆಂಕಟೇಶ್, ದೀಪು, ಮಾಜಿ ಸದಸ್ಯರುಗಳಾದ ತಿಪ್ಪೇಸ್ವಾಮಿ, ಸಿ.ಟಿ.ರಾಜೇಶ್, ಲಿಂಗವ್ವನಾಗತಿಹಳ್ಳಿ ತಿಪ್ಪೇಸ್ವಾಮಿ, ಹೆಚ್.ಅಂಜಿನಪ್ಪ, ದಲಿತ ಮುಖಂಡ ಡಿ.ಟಿ.ರಾಜಗಿರಿ, ಬಾಳೆಕಾಯಿ ಶ್ರೀನಿವಾಸ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರುಗಳಾದ ಆರ್.ನರಸಿಂಹರಾಜ, ಬಿ.ಪಿ.ಪ್ರಕಾಶ್‌ಮೂರ್ತಿ. ಸೇರಿದಂತೆ ಎಸ್ಸಿ.ಎಸ್ಟಿ.ಜನಾಂಗದ ಜಿಲ್ಲೆಯ ಎಲ್ಲಾ ತಾಲ್ಲೂಕು ಘಟಕಗಳ ಅಧ್ಯಕ್ಷರುಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.