ಚಿತ್ರದುರ್ಗ: ಬ್ರಿಟಿಷರ ಆಡಳಿತದಿಂದ ಮುಕ್ತಗೊಂಡ ಬಳಿಕ ಎಪ್ಪತ್ತು ವರ್ಷದಲ್ಲಿ ದೇಶದ ಅಭಿವೃದ್ಧಿಗೆ ಶ್ರಮಿಸಿದ ಕಾಂಗ್ರೆಸ್ ಪಕ್ಷ ಸ್ಥಾಪಿಸಿದ್ದ ಸಾರ್ವಜನಿಕ ಆಸ್ತಿಗಳನ್ನು ಬಿಜೆಪಿ ಸರ್ಕಾರ ಮಾರಾಟ ಮಾಡುತ್ತಿದೆ ಎಂದು ಮಾಜಿ ಸಚಿವ ಎಚ್.ಆಂಜನೇಯ ದೂರಿದರು.
ಹೊಳಲ್ಕೆರೆ ತಾಲೂಕು ಚಿಕ್ಕಮ್ಮಿಗನೂರು ಗ್ರಾಮದಲ್ಲಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಬೂತ್ ಕಮಿಟಿ ರಚನೆ ಸಭೆಯಲ್ಲಿ ಮಾತನಾಡಿದರು.
ಬ್ರಿಟಿಷರು ದೇಶವನ್ನು ಲೂಟಿ ಮಾಡಿದ್ದ ದೇಶವನ್ನು ಬಲಿಷ್ಠ ಭಾರತವನ್ನಾಗಿ ರೂಪಿಸಲು ನೆಹರು, ಲಾಲ್ ಬಹದ್ದೂರ್ ಶಾಸ್ತ್ರಿ, ಇಂದಿರಾಗಾಂಧಿ ಸೇರಿದಂತೆ ಎಲ್ಲ ಪ್ರಧಾನಮಂತ್ರಿಗಳು ಶ್ರಮಿಸಿದ್ದಾರೆ, ಆದರೆ, ಎಂಟು ವರ್ಷದ ಆಡಳಿತದಲ್ಲಿ ದೇಶದಲ್ಲಿ ಭ್ರಷ್ಟಾಚಾರ ಹೆಚ್ಚಳವಾಗಿದೆ. ಬ್ರಿಟಿಷರಂತೆ ದೇಶವನ್ನು ಬಿಜೆಪಿ ಸರ್ಕಾರ ದೋಚುತ್ತಿದೆ ಎಂದು ಆರೋಪಿಸಿದರು.
ಬೆಲೆ ಏರಿಕೆ, ರೂಪಾಯಿ ಮೌಲ್ಯ ಕುಸಿತ ಹಿಂದೆಂದೂ ಕಂಡರಿಯದಂತೆ ಆಗಿದೆ. ಬಿಜೆಪಿ ವರಷ್ಠರೇ ಮುಖ್ಯಮಂತ್ರಿ, ಮಂತ್ರಿ ಸ್ಥಾನವನ್ನು ಕೋಟ್ಯಂತರ ರೂಪಾಯಿಗೆ ಹರಾಜಿಟ್ಟಿದ್ದಾರೆ ಎಂದರು.
ಹಿರಿಯಕ್ಕನ ಚಾಳಿ ಮನೆ ಮಂದಿಗೆಲ್ಲ ಎಂಬಂತೆ ಇಲ್ಲಿನ ಶಾಸಕರು ಕೂಡ ಹಗಲು ದರೋಡೆಗೆ ನಿಂತಿದ್ದಾರೆ. ಕೆರೆ ಹೂಳೆತ್ತುವುದು, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಮಂಜೂರಾದ ಕೋಟ್ಯಂತರ ರೂಪಾಯಿ ಅನುದಾನದ ಕಾಮಗಾಮರಿಯಲ್ಲಿ ಲೂಟಿ ಹೊಡೆಯುತ್ತಿದ್ದಾರೆ. ನಲವತ್ತು ಪರ್ಸೆಂಟ್ ಶಾಸಕ ಎಂಬ ಕುಖ್ಯಾತಿ ಇಲ್ಲಿನ ಶಾಸಕರು ಪಡೆದುಕೊಂಡಿದ್ದಾರೆ ಎಂದು ದೂರಿದರು.
ಇಂತಹ ಭ್ರಷ್ಟ ಬಿಜೆಪಿ, ಲೂಟಿ ಶಾಸಕನ ವಿರುದ್ಧ, ಇವರು ಮಾಡುತ್ತಿರುವ ಜನವಿರೋಧಿ ಕೆಲಸಗಳ ಕುರಿತು ಜನರು ಈಗಾಗಲೇ ಬೇಸತ್ತಿದ್ದು, ತಕ್ಕ ಪಾಠ ಕಲಿಸಲು ಚುನಾವಣೆ ಎದುರು ನೋಡುತ್ತಿದ್ದಾರೆ. ಜನರಲ್ಲಿ ಇನ್ನೂ ಹೆಚ್ಚು ಜಾಗೃತಿ ಮೂಡಿಸುವ ತುರ್ತು ಸಂದರ್ಭ ಎದುರಾಗಿದೆ ಎಂದರು.
ಈ ನಿಟ್ಟಿನಲ್ಲಿ ಹೊಳಲ್ಕೆರೆ ಕ್ಷೇತ್ರದಾದ್ಯಂತ ಬೂತ್ ಮಟ್ಟದಲ್ಲಿ ಕಾಂಗ್ರೆಸ್ ಪಕ್ಷದ ಸಮಿತಿ ರಚಿಸಲಾಗುತ್ತಿದೆ. ಸಮಿತಿ ಅಧ್ಯಕ್ಷರು, ಪದಾಧಿಕಾರಿಗಳು ಪಕ್ಷದ ನಿಷ್ಠಾವಂತ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಭ್ರಷ್ಟ ಶಾಸಕರ ಬಣ್ಣ ಜನರಿಗೆ ತಿಳಿಸಬೇಕು. ಈಗಾಗಲೇ ಇಲ್ಲಿನ ಜನರಿಗೆ ಕ್ಷೇತ್ರಕ್ಕೆ ಯಾವ ಯಾವ ಇಲಾಖೆಯಿಂದ ಎಷ್ಡು ಅನುದಾನ ಬಂದಿದೆ ಎಂಬುದನ್ನು ಮುಚ್ಚಿಟ್ಟು, ಎಲ್ಲೆಡೆ ಕಳಪೆ ಕಾಮಗಾರಿ ಮುಗಿಸಿದ್ದಾರೆ. ಕೆರೆ ಹೂಳೆತ್ತುವ ಯೋಜನೆಯೊಂದರಲ್ಲೇ ಕೋಟ್ಯಾಂತರ ಹಣ ದೋಚಲಾಗಿದೆ ಎಂದು ದೂರಿದರು.
ಇಷ್ಟೇಲ್ಲ ಹಣ ಲೂಟಿ ಮಾಡಿದ್ದರೂ ದುರಾಸೆಗೆ ಬಿದ್ದು, ಕ್ಷೇತ್ರದ ಜನರ ಆಸ್ತಿಗೂ ಕೈಹಾಕಿದ್ದಾರೆ. ಅವರ ಕುಟುಂಬದ ವಿರುದ್ಧ ಕೋರ್ಟ್ ಆದೇಶದಂತೆ ದೂರು ದಾಖಲಾಗಿದೆ.
ಇಂತಹ ನೂರಾರು ಅಕ್ರಮ, ಭ್ರಷ್ಟಚಾರ ಕುರಿತು ಜನರಿಗೆ ತಿಳಿಸಬೇಕು. ಜೊತೆಗೆ ಕಾಂಗ್ರೆಸ್ ಪಕ್ಷದ ಆಡಳಿದ ಅವಧಿಯಲ್ಲಿ ನೂರಾರು ಜನಪರ ಯೋಜನೆಗಳ ಮೂಲಕ ಸಾರ್ವಜನಿಕರಿಗೆ ಆಗಿರುವ ಉಪಯೋಗ ಜನರಿಗೆ ಮನದಟ್ಟು ಮಾಡಲು ಬೂತ್ ಸಮಿತಿ ರಚಿಸಲಾಗಿದೆ ಎಂದರು.
ಕ್ಷೇತ್ರದಲ್ಲಿ ಕಾಂಗ್ರೆಸ್ ಅವಧಿಯಲ್ಲಿ ಮಂಜೂರಾಗಿದ್ದ ಗಂಗಾಕಲ್ಯಾಣ ಯೋಜನೆಗೆ ತಡೆ ಹಾಕಿ, ಸಾವಿರಕ್ಕೂ ಹೆಚ್ಚು ಫಲಾನುಭವಿಗಳನ್ನು ಸಂಕಷ್ಟಕ್ಕೆ ಸಿಲುಕಿಸಿದ್ದಾರೆ. ಈ ಕುರಿತು ರೈತರು ಬೀದಿಗೆ ಇಳಿದು ಹೋರಾಟ ನಡೆಸಿದ್ದು, ಅವರ ಹೋರಾಟಕ್ಕೆ ಕಾಂಗ್ರೆಸ್ ಪಕ್ಷ ಸದಾ ಬೆಂಬಲವಾಗಿ ನಿಲ್ಲಲಿದೆ ಎಂದು ಹೇಳಿದರು.
ಕ್ಷೇತ್ರದ ಉಸ್ತುವಾರಿ, ಯಾದವ ಸಮುದಾಯದ ಮುಖಂಡ ಸಾಸಲು ಸತೀಶ್ ಮಾತನಾಡಿ, ಜನರ ಬಳಿ ಮತಯಾಚಿಸುವ ನೈತಿಕತೆ ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ಇದೆ. ಮನಮೋಹನ್ ಸಿಂಗ್, ಸಿದ್ದರಾಮಯ್ಯ ಹಾದಿಯಾಗಿ ಆಡಳಿತ ನಡೆಸಿದ ನಾಯಕರು, ಚುನಾವಣಾ ಮುನ್ನ ಕಾಂಗ್ರೆಸ್ ಪಕ್ಷ ಭರವಸೆ ನೀಡಿದ್ದನ್ನು ಈಡೇರಿಸಲು ಶ್ರಮಿಸಿದ್ದಾರೆ ಎಂದರು.
ಆದರೆ, ಜನರಲ್ಲಿ ಆಸೆಗಳನ್ನು ತುಂಬಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ, ಜನರನ್ನು ಭ್ರಮನಿರಸನಗೊಳಿಸಿದೆ. ಬೆಲೆ ಏರಿಕೆ ಗಗನಕ್ಕೆ ಮುಟ್ಟಿದೆ. ಇಂತಹ ಸರ್ಕಾರವನ್ನು ಕಿತ್ತೊಗೆಯಲು ಪಣ ತೊಡಬೇಕು ಎಂದು ತಿಳಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಟಿ.ಹನುಮಂತಪ್ಪ ಅಧ್ಯಕ್ಷತೆ ವಹಿಸಿದ್ದರು.
ಜಿಪಂ ಮಾಜಿ ಸದಸ್ಯರಾದ ಲೋಹಿತ್ ಕುಮಾರ್, ಗಂಗಾಧರ್ ತಾಳಿಕಟ್ಟೆ, ಇಂದಿರಾ ಕಿರಣಪ್ಪ, ಗ್ರಾಪಂ ಮಾಜಿ ಅಧ್ಯಕ್ಷ ಗಿರೀಶ್, ಜಿಪಂ ಮಾಜಿ ಸದಸ್ಯ ರಾಮಚಂದ್ರಪ್ಪ, ಚಿತ್ರಹಳ್ಳಿ ಗ್ರಾಪಂ ಅಧ್ಯಕ್ಷ ಕಾಟಲಿಂಗಪ್ಪ, ಸದಸ್ಯರಾದ ಮಂಜುನಾಥ್, ಅರುಣ್, ಉಮೇಶಣ್ಣ, ಪ್ರಕಾಶ್, ಯುವ ಕಾಂಗ್ರೆಸ್ ಮಾಜಿ ಜಿಲ್ಲಾಧ್ಯಕ್ಷ ಮಧುಪಾಲೇಗೌಡ, ಮುಖಂಡರಾದ ಬಸವರಾಜ ನಾಯ್ಕ್, ಕೆಂಗುಂಟೆ ಜಯ್ಯಪ್ಪ, ಜಯ್ಯಣ್ಣ, ತಿಪ್ಪೇಸ್ವಾಮಿ ಇತರರು ಇದ್ದರು.
ಚಿಕ್ಕ ಎಮ್ಮಿಗನೂರು ಮತ್ತು ಹಿರೇಎಮ್ಮಿಗನೂರು ಪಂಚಾಯತಿ ವ್ಯಾಪ್ತಿಯ ಬೂತ್ ಸಮಿತಿ ರಚಿಸಲಾಯಿತು.
ಜಿಪಂ, ತಾಪಂ ಚುನಾವಣೆಗೆ ಸಿದ್ಧರಾಗಿ :
ಆಡಳಿತ ವೈಪಲ್ಯ, ದುರಾಡಳಿತ, ಭ್ರಷ್ಟಾಚಾರದ ಮುಗಿಲು ಮುಟ್ಟಿರುವ ಬಿಜೆಪಿಗೆ ಚುನಾವಣೆ ಭೀತಿ ಎದುರಾಗಿದೆ ಎಂದು ಆಂಜನೇಯ ಆರೋಪಿಸಿದರು.
ಈಗಾಗಲೇ ಕುಂಟುನೆಪವೊಡ್ಡಿ ಜಿಲ್ಲಾ, ತಾಲೂಕು ಪಂಚಾಯತಿ ಚುನಾವಣೆ ಮುಂದೂಡಿದೆ. ಈ ಮೂಲಕ ಪಂಚಾಯತ್ ಆಡಳಿತದ ಮೂಲ ಉದ್ದೇಶಕ್ಕೆ ಧಕ್ಕೆ ತಂದಿದೆ. ಸ್ಥಳೀಯ ಮಟ್ಟದ ಲೀಡರ್ ಗಳು ಬಿಜೆಪಿ ವಿರುದ್ಧ ತಿರುಗಿಬಿದ್ದಿದ್ದಾರೆ.
ಈ ಹಿನ್ನೆಲೆಯಲ್ಲಿ ಚುನಾವಣೆ ದಿಢೀರನೆ ಘೋಷಣೆಗೊಳ್ಳಬಹುದು. ಕಾರ್ಯಕರ್ತರು ಈಗಲೇ ಚುನಾವಣೆಗೆ ಸಿದ್ಧತೆ ಕೈಗೊಳ್ಳಬೇಕು. ಈ ಚುನಾವಣೆ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ ಆಗಲಿದೆ ಎಂದು ತಿಳಿಸಿದರು.