ಯುಪಿ ಬುಲ್ಡೋಜರ್ ಕ್ರಮಕ್ಕೆ ತಡೆ ಇಲ್ಲ : ಆದರೆ ಮೂರು ದಿನಗಳೊಳಗೆ ಉತ್ತರ ನೀಡಲು ಸುಪ್ರೀಂ ಸೂಚನೆ..!
ಅನಧಿಕೃತ ಕಟ್ಟಡಗಳನ್ನು ಬುಲ್ಡೋಜರ್ ಮೂಲಕ ಯುಪಿ ಸರ್ಕಾರ ನೆಲಸಮ ಮಾಡುತ್ತಿದೆ. ಇದನ್ನು ತಡೆಯುವಂತೆ ಕೋರಿ ಸುಪ್ರೀಂ ಕೋರ್ಟ್ ಅರ್ಜಿ ಸಲ್ಲಿಕೆಯಾಗಿತ್ತು. ಈ ಅರ್ಜಿ ಸಂಬಂಧ ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿ ಬುಲ್ಡೋಸರ್ ಕಾರ್ಯವನ್ನು ನಿಲ್ಲಿಸಲು ಸಾಧ್ಯವಿಲ್ಲ ಎಂದಿದೆ. ಜೊತೆಗೆ ಯುಪಿ ಸರ್ಕಾರಕ್ಕೆ ಮೂರು ದಿನದ ಗಡುವು ನೀಡಿದ್ದು, ಇದಕ್ಕೆ ಉತ್ತರಿಸಲು ಹೇಳಿದೆ.
ಜಮಿಯತ್-ಎ-ಉಲೇಮಾ-ಹಿಂದ್ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಕೆ ಮಾಡಿತ್ತು. ಯುಪಿ ಯೋಗಿಆದಿತ್ಯಾನಾಥ್ ಸರ್ಕಾರ ಒಂದು ಸಮುದಾಯವನ್ನು ಗುರಿ ಮಾಡಿಕೊಂಡು ಬುಲ್ಡೋಜರ್ ಕ್ರಮ ಜರುಗಿಸಿದೆ ಎಂದು ಅರ್ಜಿಯಲ್ಲಿ ಆರೋಪಿಸಿದ್ದರು. ಈ ಸಂಬಂಧ ವಿಚಾರಣೆ ನಡೆಸಿದ ಕೋರ್ಟ್ ಯುಪಿ ಸರ್ಕಾರಕ್ಕೆ ಉತ್ತರ ನೀಡಲು ಸೂಚಿಸಿದೆ. ಜೊತೆಗೆ ಅರ್ಜಿದಾರರಿಗೆ ತಾತ್ಕಾಲಿಕ ತಡೆ ನೀಡಲು ಸಾಧ್ಯವಿಲ್ಲ ಎಂದು ಹೇಳಿದೆ.
ಈ ವಿಚಾರಕ್ಕೆ ಆಕ್ಷೇಪಣೆ ಸಲ್ಲಿಸಲು ಯುಪಿ ಸರ್ಕಾರದ ಪರ ವಕೀಲರು ಸಮಯ ಕೇಳಿದ್ದಾರೆ. ಆಕ್ಷೇಪಣೆ ಸಲ್ಲಿಸಲು ಯುಪಿ ಸರ್ಕಾರಕ್ಕೆ ಕಾಲಾವಕಾಶ ಸಿಗಲಿದೆ. ಈ ಮಧ್ಯೆ ನಾವೂ ಅರ್ಜಿದಾರರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಬೇಕಾಗುತ್ತದೆ. ಅವರು ಕೂಡ ಈ ಸಮಾಜಕ್ಕೆ ಸೇರಿದವರು. ಯಾರಿಗಾದರೂ ಸಮಸ್ಯೆ ಆದಾಗ ಅದನ್ನು ಪ್ರಶ್ನಿಸುವ ಹಕ್ಕು ಅವರಿಗಿದೆ ಎಂದು ಕೋರ್ಟ್ ಕೂಡ ಸೂಚನೆ ನೀಡಿದೆ.