ಚಿತ್ರದುರ್ಗ,(ಜೂನ್.10) : ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ಸಂಬಂಧಿಸಿದಂತೆ ಮೇ-2022ರ ಅಂತ್ಯಕ್ಕೆ ಬೆಸ್ಕಾಂ ಚಿತ್ರದುರ್ಗ ವಿಭಾಗದ ವ್ಯಾಪ್ತಿಯಲ್ಲಿನ ಚಿತ್ರದುರ್ಗ, ಹೊಳಲ್ಕೆರೆ ಮತ್ತು ಹೊಸದುರ್ಗ ತಾಲ್ಲೂಕುಗಳ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಕುಡಿಯುವ ನೀರು ಮತ್ತು ಬೀದಿ ದೀಪ ಸ್ಥಾವರಗಳ ಬಾಕಿ ಮೊತ್ತವನ್ನು ಏಳು ದಿನಗಳ ಒಳಗಾಗಿ ಪಾವತಿಸುವಂತೆ ಬೆಸ್ಕಾಂ ಸೂಚಿಸಿದೆ.
ವಿದ್ಯುತ್ ಶುಲ್ಕ ಬಾಕಿ ಮೊತ್ತ ಪಾವತಿಸದೇ ಇದ್ದಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ವಿದ್ಯುತ್ ಸ್ಥಾವರಗಳ ಕ್ರೋಢಿಕರಿಸಿದ ವಿದ್ಯುತ್ ಬಾಕಿ ಮೊತ್ತವನ್ನು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕಚೇರಿಯ ಆರ್ ಆರ್ ಸಂಖ್ಯೆಗೆ ವರ್ಗಾವಣೆ ಮಾಡಿ ವಿದ್ಯುತ್ ಕಡಿತಗೊಳಿಸಲಾಗುವುದು. ಈ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಅಗುವ ತೊಂದರೆಗೆ ಬೆಸ್ಕಾಂ ಕಂಪನಿ ಜವಾಬ್ದಾರರಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ರೂ.56.29 ಕೋಟಿ ವಿದ್ಯುತ್ ಶುಲ್ಕ ಬಾಕಿ: ಬೆಸ್ಕಾಂ ಚಿತ್ರದುರ್ಗ ವಿಭಾಗ ವ್ಯಾಪ್ತಿಯಲ್ಲಿನ ಚಿತ್ರದುರ್ಗ, ಹೊಳಲ್ಕೆರೆ ಮತ್ತು ಹೊಸದುರ್ಗ ತಾಲ್ಲೂಕುಗಳು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಕುಡಿಯುವ ನೀರು ಮತ್ತು ಬೀದಿ ದೀಪ ಸ್ಥಾವರಗಳ ವಿದ್ಯುತ್ ಶುಲ್ಕ ರೂ.56.29 ಕೋಟಿ ಬಾಕಿ ಇದೆ.
ಚಿತ್ರದುರ್ಗ ತಾಲ್ಲೂಕಿನಲ್ಲಿ ರೂ.13.12 ಕೋಟಿ, ಹೊಳಲ್ಕೆರೆ ತಾಲ್ಲೂಕು- ರೂ.33.74 ಕೋಟಿ ಹಾಗೂ ಹೊಸದುರ್ಗ ತಾಲ್ಲೂಕು-ರೂ.9.43 ಕೋಟಿ ವಿದ್ಯುತ್ ಬಾಕಿ ಸೇರಿದಂತೆ ಚಿತ್ರದುರ್ಗ ವಿಭಾಗದ ವ್ಯಾಪ್ತಿಯಲ್ಲಿ ಒಟ್ಟು ರೂ.56.29 ಕೋಟಿ ವಿದ್ಯುತ್ ಶುಲ್ಕದ ಬಾಕಿ ಇದೆ ಎಂದು ಚಿತ್ರದುರ್ಗ ಬೆಸ್ಕಾಂ ಕಾರ್ಯ ಮತ್ತು ಪಾಲನಾ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಡಿ.ಜಯಣ್ಣ ತಿಳಿಸಿದ್ದಾರೆ.