ಬೆಂಗಳೂರು: ರಾಜ್ಯಸಭಾ ಚುನಾವಣೆ ವಿಚಾರದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವಲ್ಲಿ ನಾ ಕೊಡೆ ನಿ ಬಿಡೆ ಎಂಬ ಯುದ್ಧ ನಡೆಯುತ್ತಿದೆ. ಬಿಜೆಪಿ ಪಕ್ಷವನ್ನು ಸೋಲಿಸಬೇಕೆಂದರೆ ಕಾಂಗ್ರೆಸ್ ನವರು ಎರಡನೇ ಅಭ್ಯರ್ಥಿ ತೆಗೆದು ನಮ್ಮ ಅಭ್ಯರ್ಥಿಗೆ ಬೆಂಬಲ ನೀಡಬೇಕು ಎಂಬುದು ಜೆಡಿಎಸ್ ಪಕ್ಷದವರ ವಾದವಾಗಿದೆ. ಅದಕ್ಕೆಂದೆ ಜೆಡಿಎಸ್ ನಿಯೋಗ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಬಂದರು ಯಾವುದೇ ಪ್ರಯೋಜನವಾಗಿಲ್ಲ. ಆದರೆ ಸಂಧಾನದ ಸರ್ಕಸ್ ನಡೆಯುತ್ತಲೇ ಇದೆ.
ಈ ಸಂಬಂಧ ಸಿದ್ದರಾಮಯ್ಯ ಇಂದು ಮಾತನಾಡಿದ್ದು, ಅವರ ಅಭ್ಯರ್ಥಿಯನ್ನೇ ರಿಟೈಡ್ ಮಾಡಿಸಿ, ನಮಗೆ ಬೆಂಬಲ ಕೊಡಲಿ. ಅವರ ಉದ್ದೇಶ ಏನು ಕೋಮುವಾದಿ ಪಕ್ಷ ಬರಬಾರದು ಎಂಬುದಲ್ಲವೇ ಅವರಿಗಿಂತ ಮೊದಲು ನಾವೇ ಅಭ್ಯರ್ಥಿಯನ್ನು ಹಾಕಿದ್ದೇವೆ. ಈ ಹಿಂದೆ ದೇವೇಗೌಡ ಅವರು ನಿಂತಾಗ ನಾವು ಬೆಂಬಲ ನೀಡಿದ್ದೇವೆ. ಈಗ ನಮ್ಮ ಅಭ್ಯರ್ಥಿಗೆ ಜೆಡಿಎಸ್ ಬೆಂಬಲ ನೀಡಲಿ. ನಾವೂ ಅವರಿಗೆ ಟೈಮ್ ನಿಗದಿ ಮಾಡಲ್ಲ. ಜಾತ್ಯಾತೀತ ತತ್ವದ ಅಭ್ಯರ್ಥಿಯನ್ನು ಗೆಲ್ಲಿಸಬೇಕೆಂದರೆ ನಮಗೆ ಬೆಂಬಲ ನೀಡಲಿ ಎಂದಿದ್ದಾರೆ.
ನಾಳೆ ಬೆಳಗ್ಗೆಯಿಂದ ರಾಜ್ಯಸಭೆ ಚುನಾವಣೆ ನಡೆಯಲಿದ್ದು, ಅಡ್ಡಮತದಾನದ ಆತಂಕದಿಂದ ಈಗಾಗಲೇ ಜೆಡಿಎಸ್ ಶಾಸಕರನ್ನು ಹೊಟೇಲ್ ನಲ್ಲಿ ಇರಿಸಲಾಗಿದೆ. ನಾಳೆಯೇ ಚುನಾವಣೆ ನಡೆದು, ನಾಳೆ ರಾತ್ರಿಯ ಒಳಗೆ ಫಲಿತಾಂಶ ಹೊರಬೀಳಲಿದೆ.