ಸದ್ಯ ರಾಜ್ಯಸಭೆ ಚುನಾವಣೆ ವಿಚಾರದಲ್ಲಿ ಸಾಕಷ್ಟು ಸಾಹಸಗಳು ನಡೆಯುತ್ತಿವೆ. ಕಾಂಗ್ರೆಸ್ ಮತ್ತೊಂದು ಅಭ್ಯರ್ಥಿ ಹಾಕದಂತೆ, ಜೆಡಿಎಸ್ ಅಭ್ಯರ್ಥಿ ಕುಪೇಂದ್ರ ರೆಡ್ಡಿಗೆ ಬೆಂಬಲ ನೀಡುವಂತೆ ಈಗಾಗಲೇ ಜೆಡಿಎಸ್ ನಿಯೋಗ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಬಂದಿದೆ. ಆದರೆ ಇದಕ್ಕೆ ಪಾಸಿಟಿವ್ ರೆಸ್ಪಾನ್ಸ್ ಅಷ್ಟಾಗಿ ಸಿಕ್ಕಿಲ್ಲ ಎಂಬ ಮಾತುಗಳು ಕೇಳಿ ಬಂದಿದೆ. ಆದರೆ ಇದೀಗ ಕುಪೇಂದ್ರ ರೆಡ್ಡಿ ಪರ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಬೆಂಬಲ ಸೂಚಿಸಲು ನಿಂತಿದ್ದಾರೆ ಎನ್ನಲಾಗುತ್ತಿದೆ.
ಸದ್ಯ ಮಲ್ಲಿಕಾರ್ಜುನ ಖರ್ಗೆಯವರು ದೆಹಲಿಯಲ್ಲಿ ಬೀಡು ಬಿಟ್ಟಿದ್ದಾರೆ. ಸೋನಿಯಾಗಾಂಧಿ ಅವರನ್ನು ಭೇಟಿ ಮಾಡಿ, ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಮೂಲಗಳ ಪ್ರಕಾರ ಕುಪೇಂದ್ರೆ ರೆಡ್ಡಿ ಪರ ಸೈಲೆಂಟಾಗಿನೇ ಲಾಬಿ ಮಾಡುತ್ತಿದ್ದಾರೆ ಎನ್ನಲಾಗಿದೆ. ಕುಪೇಂದ್ರ ರೆಡ್ಡಿಗೆ ಬೆಂಬಲ ನೀಡಿದರೆ ಒಳ್ಳೆಯದು. ಜಾತ್ಯಾತೀತ ಪಕ್ಷಗಳು ಒಗ್ಗಟ್ಟಾಗಿದ್ದರೆ ಹೆಚ್ಚು ಅನುಕೂಲವಾಗುತ್ತದೆ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ ಎನ್ನಲಾಗಿದೆ.
ಈ ಕಾರಣದಿಂದಾಗಿಯೇ ಕಾಂಗ್ರೆಸ್ ಅಭ್ಯರ್ಥಿ ಮನ್ಸುರ್ ಅಲಿ ಖಾನ್ ಅವರ ನಾಮಪತ್ರ ಹಿಂಪಡೆಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಒಂದು ವೇಳೆ ಇದೇ ರೀತಿ ಆದರೆ ಸಿದ್ದರಾಮಯ್ಯ ಮುಖಭಂಗ ಅನುಭವಿಸಬೇಕಾಗುತ್ತದೆ. ಖರ್ಗೆಯವರು ಸೋನಿಯಾಗಾಂಧಿ ಬಳಿ ಮಾತನಾಡುತ್ತಿರುವುದರ ಹಿಂದೆ ದೇವೇಗೌಡರ ಮಾಸ್ಟರ್ ಫ್ಲ್ಯಾನ್ ಇದೆ ಎನ್ನಲಾಗುತ್ತಿದೆ. ಹೀಗಾಗಿಯೇ ರಾಮಲಿಂಗಾ ರೆಡ್ಡಿಯವರ ಸಹಾಯದಿಂದ ಕುಪೇಂದ್ರ ರೆಡ್ಡಿಯವರು ಮಲ್ಲಿಕಾರ್ಜುನ ಖರ್ಗೆಯವರನ್ನು ಭೇಟಿ ಮಾಡಿ, ವಿಚಾರ ಪ್ರಸ್ತಾಪಿಸಿದ್ದರು ಎನ್ನಲಾಗಿದೆ. ಇದೇ ಕಾರಣಕ್ಕೆ ಇದೀಗ ಖರ್ಗೆಯವರು ಕುಪೇಂದ್ರ ರೆಡ್ಡಿ ಪರ ಲಾಬಿ ಮಾಡುತ್ತಿದ್ದಾರೆ ಎನ್ನಲಾಗಿದೆ.