ಬೆಂಗಳೂರು: 2023ಕ್ಕೆ ಅಧಿಕಾರಕ್ಕೆ ಬರಲು ಮೂರು ಪಕ್ಷಗಳು ಸಾಕಷ್ಟು ಶ್ರಮವಹಿಸುತ್ತಿವೆ. ಇದಕ್ಕಾಗಿ ಹಲವು ತಂತ್ರಗಳನ್ನು ಎಣೆಯುತ್ತಿವೆ. ಇದೀಗ ಕಾಂಗ್ರೆಸ್ ಪಕ್ಷ ಇಂದಿನಿಂದ ನವ ಸಂಕಲ್ಪ ಶಿಬಿರ ಆರಂಭಿಸಿದೆ. ಈ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿಬಕುಮಾರ್ ಮಾತನಾಡಿ, ಜೊತೆಗೂಡುವುದು ಆರಂಭ, ಜೊತೆಗೂಡಿ ಯೋಚಿಸುವುದು ಪ್ರಗತಿ, ಜೊತೆಗೂಡಿ ಕೆಲಸ ಮಾಡುವುದು ಯಶಸ್ಸು ಎಂದು ಕಾಂಗ್ರೆಸ್ ನ ಎಲ್ಲಾ ಕಾರ್ಯಕರ್ತರು, ಪ್ರತಿನಿಧಿಗಳಿಗೆ ಹುಮ್ಮಸ್ಸು ತುಂಬಿದ್ದಾರೆ.
ಜೊತೆಗೆ ಎಐಸಿಸಿ ಮಾರ್ಗದರ್ಶನದ ಮೇರೆಗೆ ಆರು ಸಮಿತಿಗಳನ್ನು ರಚಿಸಿದೆ. ಅದರಲ್ಲಿ ಯಾವ ರೀತಿ ಹೋರಾಟಗಳನ್ನು ಮಾಡಬೇಕೆಂದು ತೀರ್ಮಾನ ಮಾಡಲಾಗುತ್ತದೆ. ಇನ್ನು ಹೈಕಮಾಂಡ್ ಸೂಚನೆಯಂತೆ ತಿಂಗಳಲ್ಲಿ 15-20 ದಿನಗಳಾದರೂ ಪಕ್ಷಕ್ಕಾಗಿ ಕೆಲಸ ಮಾಡಿ ಎಂದು ಸೂಚನೆ ನೀಡಿದ್ದಾರೆ.
ಇನ್ನು ಬಿಜೆಪಿ ಸರ್ಕಾರ ಹೋರಾಟ ಮಾಡಲು ಸಾಕಷ್ಟು ವಿಚಾರಗಳನ್ನು ನೀಡಿದೆ. ಭ್ರಷ್ಟಚಾರ ಗಗನಕ್ಕೇರಿದೆ. ಆದಾಯ ಪಾತಾಳಕ್ಕೆ ಕುಸಿದಿದೆ. ಯುವಕರು, ರೈತರು, ಮಹಿಳೆಯರ ರಕ್ಷಣೆ ಬಗ್ಗೆ ಚರ್ಚೆಯಾಗಬೇಕಿದೆ. ಈ ಸಭೆಯಲ್ಲಿ ಚರ್ಚೆಯಾಗುವ ವಿಷಯವನ್ನು ಯಾರೂ ಕೂಡ ಮಾಧ್ಯಮದಲ್ಲಿ ಮಾತನಾಡಬಾರದು. ಮಾಧ್ಯಮದ ಮುಂದೆ ಮಾತನಾಡಿದರೆ ಸಮಯ ಬಂದಾಗ ಅವರನ್ನು ಯಾವ ಕಣ್ಣಿನಿಂದ ನೋಡವೇಕೋ ಆಗ ಆ ಕಣ್ಣಿನಿಂದ ನೋಡುತ್ತೇವೆ. ಪಕ್ಷದ ಆಂತರಿಕ ವಿಚಾರವನ್ನು ನನ್ನ ಬಳಿ ಅಥವಾ ಶಾಸಕಾಂಗ ಪಕ್ಷದ ನಾಯಕರ ಬಳಿ ಚರ್ಚಿಸಬೇಕು ಎಂದು ಖಡಕ್ಕಾಗಿ ಹೇಳಿದ್ದಾರೆ.