ಚಿತ್ರದುರ್ಗ : ಮೇ.29: ಸ್ವಾತಂತ್ರ್ಯ ಹೋರಾಟದಲ್ಲಿ ಹುತಾತ್ಮರಾದವರ ಸ್ಮರಣೆಯೊಂದಿಗೆ ದೇಶದಾದ್ಯಂತ ಆಜಾದಿ ಕ ಅಮೃತ್ ಮಹೋತ್ಸವ ಆಚರಿಸಲಾಗುತ್ತಿದೆ.
ಈ ಸ್ಮರಣಾರ್ಥ ಸಂದರ್ಭದಲ್ಲಿ ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮೇ 31 ರಂದು ಬೆಳಿಗ್ಗೆ 11 ಗಂಟೆಗೆ ಹಿಮಾಚಲ ಪ್ರದೇಶದ ಶಿಮ್ಲಾದಿಂದ, ಕೇಂದ್ರ ಸರ್ಕಾರದ 9 ಸಚಿವಾಲಯ ಹಾಗೂ ಇಲಾಖೆಗಳ ಪ್ರಮುಖ 16 ಯೋಜನೆಗಳ ಫಲಾನುಭವಿಗಳೊಂದಿಗೆ ಸಂವಾದ ನಡೆಸಲಿದ್ದಾರೆ.
ದೇಶಾದ್ಯಂತ ಯೋಜನಗೆಳ ಕೋಟ್ಯಂತರ ಫಲಾನುಭವಿಗಳಿದ್ದಾರೆ. ಈ ಯೋಜನೆಗಳು ದೇಶದ ಅತ್ಯಂತ ಬಡಜನರಿಗೆ ತಲುಪುತ್ತಿವೆ. ಆದ್ದರಿಂದ ಈ ಸಂವಾದ ಕಾರ್ಯಕ್ರಮಕ್ಕೆ “ಗರೀಬ್ ಕಲ್ಯಾಣ ಸ್ವಾವಲಂಬನ್” ಎಂದು ಹೆಸರಿಡಲಾಗಿದೆ. ಯೋಜನೆಗಳನ್ನು ಇನ್ನಷ್ಟು ಪ್ರಾಮಾಣಿಕವಾಗಿ ಜನಮುಖಿಯಾಗಿಸಲು ಹಾಗೂ ಯೋಜನೆಗಳು ಜನರ ಜೀವನದಲ್ಲಿ ತಂದಿರುವ ಬದಲಾವಣೆಗಳನ್ನು ಅರಿಯುವ ಮುಖ್ಯ ಉದ್ದೇಶದಿಂದ ಸಂವಾದ ಕಾರ್ಯಕ್ರಮ ಆಯೋಜಿಸಲಾಗಿದೆ. ದೇಶ 2047 ರಲ್ಲಿ 100ನೇ ಸ್ವಾತಂತ್ರ್ಯ ವರ್ಷಾಚರಣೆ ಆಚರಿಸುವ ಸಮಯದಲ್ಲಿ ನಾಗರಿಕರ ಇಚ್ಚೆಗಳನ್ನು ಈಡೇರಿಸುವ ಮುನ್ನೊಟದ ಅವಕಾಶ ಸಂವಾದದಿಂದ ಒದಗಲಿದೆ.
ಗರೀಬ್ ಕಲ್ಯಾಣ ಸಮ್ಮೇಳನ ದೇಶದ ಎಲ್ಲಾ ಜಿಲ್ಲೆಗಳ ಒಳಗೊಂಡ ಅತಿದೊಡ್ಡ ರಾಷ್ಟ್ರೀಯ ಸಂವಾದವಾಗಿದೆ. ದೇಶದ ಆಯ್ದ ಜಿಲ್ಲೆಗಳ ಫಲಾನುಭವಿಗಳೊಂದಿಗೆ ಪ್ರಧಾನ ಮಂತ್ರಿಗಳು ಸಂವಾದ ನಡೆಸಿ, ಪ್ರಮುಖ ಯೋಜನೆಗಳಾದ ಪ್ರಧಾನ ಮಂತ್ರಿ ಆವಾಸ್ ಯೋಜನೆ, ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ, ಪ್ರಧಾನ ಮಂತ್ರಿ ಉಜ್ವಲ ಯೋಜನೆ, ಪೋಶನ್ ಅಭಿಯಾನ, ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆ, ಸ್ವಚ್ಛ ಭಾರತ್ ಮಿಷನ್, ಜಲ ಜೀವನ್ ಮಿಷನ್ ಮತ್ತು ಅಮೃತ್ ಯೋಜನೆ, ಪ್ರಧಾನ ಮಂತ್ರಿ ಸ್ವನಿಧಿ ಯೋಜನೆ, ಒಂದು ರಾಷ್ಟ್ರ ಒಂದು ಪಡಿತರ ಚೀಟಿ, ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ, ಆಯೂಷ್ಮಾನ್ ಭಾರತ ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ, ಆಯೂಷ್ಮಾನ್ ಭಾರತ್ ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರ, ಪ್ರಧಾನ ಮಂತ್ರಿ ಮುದ್ರಾ ಯೋಜನೆಗಳ ಫಲಾನುಭವಿಗಳ ಜೀವನೋಪಾಯ ಮತ್ತು ಆರ್ಥಿಕ ಬೆಳವಣಿಗೆ ಮೇಲೆ ಹೇಗೆ ಪ್ರಭಾವ ಬೀರಿವೆ ಎಂಬುದನ್ನು ಅರಿಯಲಿದ್ದಾರೆ.
ಚಿತ್ರದುರ್ಗ ಜಿಲ್ಲೆಯಲ್ಲಿ ಆಜಾದಿ ಕಾ ಅಮೃತ್ ಮಹೋತ್ಸವ್ ಕಾರ್ಯಕ್ರಮ
ಐತಿಹಾಸಿಕ ಸಂವಾದ ಕಾರ್ಯಕ್ರಮಕ್ಕೆ ಚಿತ್ರದುರ್ಗ ಜಿಲ್ಲೆ ಸಾಕ್ಷಿ ಆಗುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಮೇ 31 ರಂದು ಬೆಳಿಗ್ಗೆ 9:30ಕ್ಕೆ ನಗರದ ತ.ರಾ.ಸು ರಂಗಮಂದಿರದಲ್ಲಿ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ಸಂಯುಕ್ತಾಶ್ರಯದಲ್ಲಿ ಆಜಾದಿ ಕಾ ಅಮೃತ್ ಮಹೋತ್ಸವ್ ಕಾರ್ಯಕ್ರಮ ಆಯೋಜಿಸಲಾಗಿದೆ. ಸಂವಾದ ಕಾರ್ಯಕ್ರಮಕ್ಕೆ ಸಲಕ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ. ಕಾರ್ಯಕ್ರಮದ ಘನಪಸ್ಥಿತಿಯನ್ನು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಎ.ನಾರಾಯಣ ಸ್ವಾಮಿ ವಹಿಸುವರು. ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್ ಕಾರ್ಯಕ್ರಮದ ಉದ್ಘಾಟನೆನ್ನು ನೆರವೇರಿಸಲಿದ್ದಾರೆ.
ಗೌರವಾನ್ವಿತ ಆಹಾನ್ವಿತರಾಗಿ ಸಾರಿಗೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಆಗಮಿಸಲಿದ್ದಾರೆ. ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅಥಿತಿಗಳಾಗಿ ಸರ್ಕಾರಿ ಮುಖ್ಯ ಸಚೇತಕ ಡಾ.ವೈ.ಎ.ನಾರಾಯಣಸ್ವಾಮಿ, ಹೊಳಲ್ಕೆರೆ ಶಾಸಕರು ಹಾಗೂ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಎಂ.ಚಂದ್ರಪ್ಪ, ಶಾಸಕರಾದ ಟಿ.ರಘುಮೂರ್ತಿ, ಕೆ.ಪೂರ್ಣಿಮಾ, ಗೂಳಿಹಟ್ಟಿ ಡಿ.ಶೇಖರ್, ವಿಧಾನ ಪರಿಷತ್ ಶಾಸಕರಾದ ಚಿದಾನಂದ ಎಂ.ಗೌಡ, ಕೆ.ಎಸ್.ನವೀನ್, ಕರ್ನಾಟಕ ರಾಜ್ಯ ಖನಿಜ ನಿಗಮದ ಅಧ್ಯಕ್ಷ ಲಿಂಗಮೂರ್ತಿ, ನಗರ ಸಭೆ ಅಧ್ಯಕ್ಷೆ ತಿಪ್ಪಮ್ಮ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಜಿ.ಟಿ. ಸುರೇಶ್ ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಪ್ರಧಾನ ಮಂತ್ರಿಗಳು ಕಿಸಾನ್ ಸಮ್ಮಾನ್ ನಿಧಿಯ 11ನೇ ಕಂತನ್ನು ಸಹ ಬಿಡುಗಡೆ ಮಾಡಲಿದ್ದಾರೆ.
ಈ ಕಾರ್ಯಕ್ರಮವನ್ನು ದೂರದರ್ಶನದ ಮೂಲಕ ರಾಷ್ಟ್ರೀಯ ಮತ್ತು ಪ್ರಾದೇಶಿಕ ಚಾನೆಲ್‍ಗಳಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ. MyGov ಮೂಲಕ ವೆಬ್‍ಕಾಸ್ಟ್ ಸಹ ಮಾಡಲಾಗುತ್ತಿದ್ದು, ಜನರು ಇದರ ವೀಕ್ಷಣೆಗೆ ನೋಂದಾಯಿಸಿಕೊಳ್ಳಬೇಕು. ಇದಲ್ಲದೆ ಸಾಮಾಜಿಕ ಜಾಲತಾಣಗಳಾದ ಯೂಟ್ಯೂಬ್, ಫೇಸ್‍ಬುಕ್, ಟ್ವಿಟರ್, ಇನ್‍ಸ್ಟಾಗ್ರಾಮ್ ಇತ್ಯಾದಿಗಳ ಮೂಲಕವೂ ವೀಕ್ಷಿಸಬಹುದಾಗಿದೆ.