ಚಿತ್ರದುರ್ಗ: ಜವಾಹಾರಲಾಲ್ ನೆಹರು ಹುಟ್ಟು ಅಗರ್ಭ ಶ್ರೀಮಂತರು. ಆದರೆ, ದೇಶವನ್ನು ಬ್ರಿಟಿಷರ ಸಂಕೋಲೆಯಿಂದ ಬಿಡಿಸಲು ಶ್ರೀಮಂತಿಕೆಯನ್ನೇ ತೊರೆದು ಸ್ವತಂತ್ರ ಚಳವಳಿಗೆ ಧುಮುಕಿದ ಮಹಾನ್ ನಾಯಕ ಎಂದು ಕೆಪಿಸಿಸಿ ಉಪಾಧ್ಯಕರೂ ಆದ ಮಾಜಿ ಸಚಿವ ಎಚ್.ಆಂಜನೇಯ ಬಣ್ಣಿಸಿದರು.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಜವಾಹಾರಲಾಲ್ ನೆಹರು ಪುಣ್ಯಸ್ಮರಣೆಯಲ್ಲಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
ಚಿಕ್ಕ ವಯಸ್ಸಿನಲ್ಲಿಯೇ ಓದು, ಬರಹಗಳ ಮೂಲಕ ಸಾಹಿತ್ಯ ಕ್ಷೇತ್ರದತ್ತ ಆಸಕ್ತಿ ಬೆಳೆಸಿಕೊಂಡಿದ್ದ ನೆಹರು, ಕಾಲಕ್ರಮೇಣ ಮಹಾತ್ಮಗಾಂಧಿ ನೇತೃತ್ವದ ಸ್ವತಂತ್ರ ಚಳವಳಿಗೆ ಧುಮುಕಿ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿ, ಅದರಲ್ಲಿ ಯಶಸ್ವಿಗಳಿಸಿದ ನಾಯಕ ಎಂದರು.
ಅಹಿಂಸಾತ್ಮಕವಾಗಿಯೇ ದಶಕಗಳ ಕಾಲ ಆಂಗ್ಲರ ವಿರುದ್ಧ ಹೋರಾಟ ನಡೆಸಿದ ನೆಹರು, ತನ್ನ ಶ್ರೀಮಂತಿಕೆ ತೊರೆದು ಸಾಮಾನ್ಯ ಜನರೊಂದಿಗೆ ಸದಾ ಓಡಾಡಿಕೊಂಡಿದ್ದರು. ವಲ್ಲಭಬಾಯಿ ಪಟೇಲ್ ಸೇರಿದಂತೆ ಅನೇಕ ನಾಯಕರ ಜೊತೆಗೂಡಿ ಬ್ರಿಟಿಷರ ಕಪಿಮುಷ್ಠಿಯಿಂದ ದೇಶವನ್ನು ಮುಕ್ತಗೊಳಿಸಿದರು.
ಬಳಿಕ ದೇಶದ ಪ್ರಥಮ ಪ್ರಧಾನ ಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನೆಹರು, ಭಾರತ ದೇಶ ನಿರ್ಮಾಣದಲ್ಲಿ ದೂರದೃಷ್ಟಿ ಹೊಂದಿದ್ದರು. ಬ್ರಿಟಿಷರು ದೇಶವನ್ನು ಕೊಳ್ಳೆಹೊಡೆದು ಖಾಲಿ ಮಾಡಿದ್ದರು. ಸಾಲು ಸಾಲು ಸವಾಲು, ಆರ್ಥಿಕ ಸಮಸ್ಯೆ, ಬಡತನ, ಅಸ್ಪೃಶ್ಯತೆ ಮುಗಿಲುಮುಟ್ಟಿತ್ತು. ಇಂತಹ ಸಮಸ್ಯೆಗಳನ್ನು ಮೆಟ್ಟಿ ನಿಂತು ಸಮ ಸಮಾಜ ನಿರ್ಮಾಣ, ದೇಶದ ಸಮಗ್ರ ಅಭಿವೃದ್ಧಿಗೆ ಬುನಾದಿ ಹಾಕಿದ ನೆಹರು ಭಾರತ ದೇಶದ ನಿರ್ಮಾತೃ ಎಂದು ಬಣ್ಣಿಸಿದರು.
ಡ್ಯಾಮ್, ಕೈಗಾರಿಕೆಗಳ ಸ್ಥಾಪನೆ, ದುಡಿಯುವ ಜನರಿಗೆ ಕೈಗೆ ಕೆಲಸ, ಶ್ರಮಿಕರಿಗೆ ಬದುಕು, ರೈಲು, ರಸ್ತೆ, ಶಿಕ್ಷಣ ಸಂಸ್ಥೆಗಳ ಸ್ಥಾಪನೆ ಮೂಲಕ ದೇಶದ ಜನರು ಹೊಸ ಜಗತ್ತಿಗೆ ತೆಗೆದುಕೊಳ್ಳುವಂತೆ ಮಾಡುವಲ್ಲಿ ಯಶಸ್ವಿಯಾದರು.
ಸ್ವಾತಂತ್ರ ಬಳಿಕ ಸಣ್ಣ ಗುಂಡುಪಿನ್ನು ಉತ್ಪಾದನೆ ಮಾಡುವ ಶಕ್ತಿ ದೇಶಕ್ಕೆ ಇರಲಿಲ್ಲ. ಭಾರತ ಖಾಲಿ ಆಗಿತ್ತು. ದೇಶವನ್ನೇ ಬ್ರಿಟಿಷರು ಕೊಳ್ಳೆ ಹೊಡೆದಿದ್ದರು. ಇಂತಹ ಸಂಕಷ್ಟ ಸಂದರ್ಭದಲ್ಲಿ ನೆಹರು, ಪಂಚವಾರ್ಷಿಕ ಯೋಜನೆಗಳ ಜಾರಿ, ಅಂಬೇಡ್ಕರ್ ಅವರು
ರಚಿಸಿದ ಸಂವಿಧಾನವನ್ನು ಸ್ವೀಕರಿಸಿ, ಆಡಳಿತದಲ್ಲಿ ಅನುಷ್ಠಾನಗೊಳಿಸಿದ್ದು, ರಾಜರ ವಶದಲ್ಲಿದ್ದ ಕೆಲ ಪ್ರದೇಶ, ರಾಜ್ಯಗಳನ್ನು ವಶಕ್ಕೆ ಪಡೆದುಕೊಂಡು ದೇಶದ ಸಮಗ್ರ
ಅಭಿವೃದ್ಧಿಗೆ ಶ್ರಮಿಸಿದರು.
ಇಂತಹ ಸ್ವತಂತ್ರ ಹೋರಾಟಗಾರ, ಹಲವು ಕೃತಿಗಳ ರಚಿಸಿ ಸಾಹಿತಿ ಎಂದೇ ಗುರುತಿಸಿಕೊಂಡಿರುವ, ಭಾರತ ದೇಶದ ನಿರ್ಮಾತೃ ನೆಹರು ಕುರಿತು ಮಾತನಾಡುವ ನೈತಿಕೆಯೇ ಬಿಜೆಪಿ ನಾಯಕರಿಗೆ ಇಲ್ಲ ಎಂದರು.
ಸುಳ್ಳು ಸುದ್ದಿ, ಕಟ್ಟುಕಥೆಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಮೂಲಕ ಕಾಂಗ್ರೆಸ್ ವಿರುದ್ಧ ಅಪಪ್ರಚಾರದಲ್ಲಿ ಬಿಜೆಪಿ ತೊಡಗಿದೆ. ಜೊತೆಗೆ ಮಹಾತ್ಮಗಾಂಧಿ, ವಲ್ಲಭಬಾಯಿ ಪಟೇಲ್, ನೆಹರು ಸೇರಿ ಅನೇಕರ ಕನಸಿನ ಭಾರತಕ್ಕೆ ಧಕ್ಕೆ ತರಲು ಬಿಜೆಪಿ ಸದಾ ಯತ್ನಿಸುತ್ತಿದೆ. ನೆಹರು ಕಟ್ಟಿದ ವಿಮಾನ ನಿಲ್ದಾಣ, ಸಾರ್ವಜನಿಕ ಸಂಸ್ಥೆಗಳನ್ನು ಬಿಜೆಪಿ ಖಾಸಗಿ ವ್ಯಕ್ತಿಗಳಿಗೆ ಮಾರಾಟ ಮಾಡುತ್ತಿದ್ದು, ಸ್ವಾತಂತ್ರೃ ಹೋರಾಟಗಾರರ ಶ್ರಮದಿಂದ ನಿರ್ಮಾಣಗೊಂಡ ದೇಶದ ಏಕತೆ, ಸೌಹಾರ್ದತೆ ಗೋಪುರವನ್ನು ಕೆಡುವ ಕೆಲಸ ಬಿಜೆಪಿ ಮಾಡುತ್ತಿದೆ. ನೆಹರು, ಗಾಂಧಿ, ವಲ್ಲಭಬಾಯಿ ಪಟೇಲ್, ಲಾಲೂಬಹದ್ದೂರು ಶಾಸ್ತ್ರಿ ಸೇರಿದಂತೆ ಅನೇಕ ಶ್ರಮ, ಕಾಳಜಿಯಿಂದ ನಿರ್ಮಾಣಗೊಂಡಿವ ಭಾರತವನ್ನು ವಿಶ್ವಮಟ್ಟದಲ್ಲಿ ಅವಮಾನಕ್ಕೆ ಸಿಲುಕಿಸುವ ಕೆಲಸವನ್ನು ಮಾಡಲಾಗುತ್ತಿದೆ. ಈ ಕುರಿತು ಜನರು ನಾವು ಎಚ್ಚರಿಕೆ ವಹಿಸಬೇಕು.
ಇಲ್ಲದಿದ್ದರೆ ವಿಭಿನ್ನ, ವಿಶೇಷತೆ, ಬಹುತ್ವ, ಸಾವಿರಾರು ಜಾತಿ, ಹಲವು ಧರ್ಮದ ಜನ ಸೌಹಾರ್ದತೆ ಬದುಕು ನುಚ್ಚುನೂರಾಗಲಿದೆ. ವಿಶ್ವಮಟ್ಟದಲ್ಲಿ ದೇಶದ ಮಾನ ಹರಾಜು ಆಗಲಿದೆ ಎಂದು ಎಚ್ಚರಿಸಿದರು.
ಜಿಲ್ಲಾ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಂ.ಕೆ.ತಾಜ್ ಪೀರ್ ಮಾತನಾಡಿ, ನೆಹರು ದೇಶ ಕಂಡ ಮಹಾನ್ ನಾಯಕ. ಬಲಿಷ್ಠ ದೇಶ ನಿರ್ಮಾಣಕ್ಕೆ ಶ್ರಮಿಸಿದ ರೀತಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶದ ಖ್ಯಾತಿ ತಂದುಕೊಟ್ಟರು. ವಿದೇಶಾಂಗ ನೀತಿ ಸಮರ್ಥವಾಗಿ ನಿಭಾಯಿಸಿ, ಜಗತ್ತು ದೇಶದ ಕಡೆ ತಿರುಗುವಂತೆ ಮಾಡಿದರು ಎಂದರು.
ಈ ಸಂದರ್ಭದಲ್ಲಿ ಲಿಡ್ಕರ್ ಮಾಜಿ ಅಧ್ಯಕ್ಷ ಓ.ಶಂಕರ್, ಜಿಪಂ ಮಾಜಿ ಸದಸ್ಯ ಬಿ.ಪಿ.ಪ್ರಕಾಶ್ ಮೂರ್ತಿ,ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸಂಪತ್ ಕುಮಾರ್, ಡಿ.ಎನ್.ಮೈಲಾರಪ್ಪ, ಎನ್.ಡಿ.ಕುಮಾರ್, ಎಸ್ಸಿ ಘಟಕದ ಅಧ್ಯಕ್ಷ ಮೊಗಲಹಳ್ಳಿ ಜಯಣ್ಣ ಉಪಸ್ಥಿತರಿದ್ದರು.