ಚಿತ್ರದುರ್ಗ, (ಮೇ. 27) : ನಗರದ ಪ್ರತಿಷ್ಟಿತ ಶಾಲೆಯಾದ ಎಸ್.ಆರ್.ಎಸ್. ಹೆರಿಟೇಜ್ ಶಾಲೆಯ ಮುಕುಟಕ್ಕೆ ಮತ್ತೊಂದು ಹೆಮ್ಮೆಯ ಗರಿ.
ಶಾಲೆಯ ಒಂದನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ವತ್ ಆರಾಧ್ಯ ಹೆಸರಿಗೆ ತಕ್ಕಂತೆ ವಿದ್ವತ್ ಸಂಪನ್ನ. ಕಳೆದ ವರ್ಷ ತನ್ನ ಬುದ್ಧಿ ಕೌಶಲ್ಯದಿಂದ ಈ ಮಗು ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ತನ್ನ ಹೆಸರು ದಾಖಲಿಸಿದ್ದು ಇನ್ನೂ ಹಸಿರಾಗಿರುವಾಗಲೇ, ಈ ದೈತ್ಯ ಪ್ರತಿಭೆ ಮೇ.22 ರಂದು ಚೆನ್ನೈನಲ್ಲಿ ನಡೆದ ಕಲಾಮ್ಸ್ ವರ್ಲ್ಡ್ ರೆಕಾರ್ಡ್ ಕಾರ್ಯಕ್ರಮದಲ್ಲಿ Extraordinary Grasping Power genius kid ಪ್ರಶಸ್ತಿಗೆ ಭಾಜನನಾಗಿದ್ದಾನೆ.
ಈ ಮಗು ರಾಷ್ಟ್ರದ ಪ್ರಧಾನಮಂತ್ರಿಗಳು, ರಾಷ್ಟ್ರಪತಿಗಳ ಹೆಸರುಗಳು, ಕರ್ನಾಟಕದ ಮುಖ್ಯಮಂತ್ರಿಗಳು, ರಾಜ್ಯಪಾಲರ ಹೆಸರುಗಳನ್ನು ಹೇಳುವನು, ರಾಮಾಯಣ ಮತ್ತು ಮಹಾಭಾರತಕ್ಕೆ ಸಂಬಂಧಿಸಿದ 150 ಪ್ರಶ್ನೆಗಳಿಗೆ ಉತ್ತರಿಸುವನು.
20 ಶ್ಲೋಕಗಳು, 60 ಹಿಂದೂ ಸಂವತ್ಸರಗಳನ್ನು ಹಾಗೂ ದೇಶದ ಪ್ರಮುಖ ಜಲಪಾತಗಳು, ಅಣೆಕಟ್ಟುಗಳು, ವಿಮಾನ ನಿಲ್ದಾಣಗಳ ಹೆಸರಗಳನ್ನು ಹೇಳುವುದು, 195 ದೇಶಗಳ ಹೆಸರುಗಳು, 2 ರಿಂದ 30 ವರೆಗಿನ ಗುಣಾಕಾರ ಕೋಷ್ಟಕ, ವಿಜ್ಞಾನಿಗಳು ಮತ್ತು ಅವರ ಸಂಶೋಧನೆಗಳು, ಭಾರತದ ರಾಜ್ಯಗಳು ಮತ್ತು ಕರ್ನಾಟಕದ ಜಿಲ್ಲೆಗಳನ್ನು ಹೇಳುವ ಮೂಲಕ ಈ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿದ್ದಾನೆ.
ಈ ವಿಷಯವನ್ನು ತಮ್ಮಲ್ಲಿ ಹಂಚಿಕೊಳ್ಳುವುದರ ಮೂಲಕ ಎಸ್.ಆರ್.ಎಸ್. ಶಾಲಾ ಆಡಳಿತ ಮಂಡಳಿ, ಬಿ.ಎ.ಲಿಂಗಾರೆಡ್ಡಿ ಅಧ್ಯಕ್ಷರು, ಸುಜಾತಾ ಲಿಂಗಾರೆಡ್ಡಿ ಕಾರ್ಯದರ್ಶಿಗಳು, ಬಿ.ಎಲ್ ಅಮೋಘ್ ಉಪಾಧ್ಯಕ್ಷರು, ಡಾ|| ಟಿ.ಎಸ್. ರವಿ ಆಡಳಿತಾಧಿಕಾರಿಗಳು, ಪ್ರಭಾಕರ್ ಎಮ್. ಎಸ್. ಪ್ರಾಂಶುಪಾಲರು , ಶಾಲೆಯ ಶಿಕ್ಷಕ ವೃಂದ ಹಾಗು ಮಗುವಿನ ಪೋಷಕರು ಹರ್ಷ ವ್ಯಕ್ತಪಡಿಸುತ್ತಾರೆ.