ದೆಹಲಿ: ಮುಂಗಾರು ಆರಂಭಕ್ಕೂ ಮುನ್ನವೇ ಮಳೆ ಶುರುವಾಗಿದ್ದು, ಎಲ್ಲಾ ಕಡೆ ಜೋರು ಮಳೆಯಾಗುತ್ತಿದೆ. ಈ ಮಳೆಗೆ ಅಸ್ಸಾಂನಲ್ಲಿ ಪ್ರವಾಹ ಉಂಟಾಗಿದೆ. ಅಸ್ಸಾಂನ 27 ಜಿಲ್ಲೆಗಳಲ್ಲಿ ಪ್ರವಾಹ ಉಂಟಾಗಿದ್ದು, ಸ್ಥಿತಿಗತಿ ತುಂಬಾ ಹೀನಾಯವಾಗಿದೆ.
ಪ್ರವಾಹ ಪೀಡಿತ ಪ್ರದೇಶಗಳಿಗೆ ಬಿಜೆಪಿ ಶಾಸಕ ಸಿಬು ಮಿಶ್ರಾ ಭೇಟಿ ಕೊಟ್ಟಿದ್ದು, ಈ ವೇಳೆ ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಮಿಶ್ರಾ ಅವರು ಹೊಜೈ ಜಿಲ್ಲೆಗೆ ಪ್ರವಾಹ ಪರಿಸ್ಥಿತಿ ಪರಿಶೀಲಿಸಲು ಬಂದಿದ್ದರು. ಈ ವೇಳೆ ದೋಣಿಗೆ ಹತ್ತಲು ಅಣತಿ ದೂರವಷ್ಟೇ ಇತ್ತು. ಮೊಣಕಾಲಿಗೆನಷ್ಟು ನೀರು ಇತ್ತು. ಈ ಕಾರಣಕ್ಕೆ ಶಾಸಕ ನಡೆಯದೆ, ಅಲ್ಲಿನ ರಕ್ಷಣಾ ಸಿಬ್ಬಂದಿಗಳು ಅವರನ್ನು ಹೆಗಲ ಮೇಲೆ ಹೊತ್ತು ದೋಣಿ ಸೇರಿಸಿದ್ದಾರೆ.
ಈ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದ್ದಂತೆ ಜನರ ಕೋಪ ನೆತ್ತಿಗೇರಿದೆ. ಜನ ಪ್ರವಾಹದಿಂದ ಸಾಯುತ್ತಿದ್ದಾರೆ. 6 ಲಕ್ಷಕ್ಕೂ ಹೆಚ್ಚು ಜನ ಸಮಸ್ಯೆಯ ಸುಳಿಯಲ್ಲಿ ಸಿಲುಕಿದ್ದಾರೆ. ಆದರೆ ಶಾಸಕರಿಗೆ ಮೊಣಕಾಲುದ್ಧ ನೀರಿನಲ್ಲಿ ಇಳಿಯುವುದು ಕಷ್ಟ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.