ಚಿತ್ರದುರ್ಗ: ರಾಷ್ಟ್ರೀಯತೆ, ಸಾಮಾಜಿಕ, ಸಾಂಸ್ಕೃತಿಕ ಹಾಗೂ ಧಾರ್ಮಿಕವಾಗಿ ಪ್ರೇರಣೆ ನೀಡುವ ನಿಟ್ಟಿನಲ್ಲಿ ವಿಶ್ವ ಹಿಂದು ಪರಿಷತ್, ವೀರಮದಕರಿ ಸೇವಾ ಟ್ರಸ್ಟ್ ವತಿಯಿಂದ ನಗರದಲ್ಲಿ ಮೇ.28 ಶನಿವಾರದಂದು ಹುತಾತ್ಮ ಸೈನಿಕರು ಹಾಗೂ ಗೋಶಾಲೆಗಳಿಗೆ ಗೌರವ ಸಮರ್ಪಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕಾರ್ಯಕ್ರಮ ಸಂಚಾಲಕ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಟಿ.ಬದರೀನಾಥ್ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿಧಿ ಸಮರ್ಪಣೆ ಕಾರ್ಯಕ್ರಮದ ಅಂಗವಾಗಿ ಒಂದೇ ವೇದಿಕೆಯಲ್ಲಿ 161ಕ್ಕೂ ಹೆಚ್ಚು ಕಲಾವಿದರಿಂದ ಬೃಹತ್ ವೀಣಾ ವಾದನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ನಗರದ ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿ ಸಂಜೆ 5.30 ರಿಂದ ನಡೆಯುವ ಕಾರ್ಯಕ್ರಮದಲ್ಲಿ ಯಾದಗಿರಿ ಜಿಲ್ಲೆ ಶಹಾಪುರದ ವಿಶ್ವಮಾತಾ ಗೋಶಾಲೆ, ಹಾವೇರಿ ಜಿಲ್ಲೆ ಇನಾಂಲಕ್ಮಾಪುರದಲ್ಲಿ ವಿಎಚ್‍ಪಿ ನಡೆಸುತ್ತಿರುವ ಗೋಪಾಲನ ಕುಟೀರ ಹಾಗೂ ಚಿತ್ರದುರ್ಗದ ಕಾತ್ರಾಳು ಕೆರೆ ಬಳಿಯಿರುವ ಆದಿಚುಂಚನಗಿರಿ ಮಠದ ಗೋಶಾಲೆಗಳಿಗೆ ನಿಧಿ ಸಮರ್ಪಣೆ ಹಾಗೂ 7 ಹುತಾತ್ಮ ಯೋಧರ ಕುಟುಂಬಗಳು ಮತ್ತು ಭಯೋತ್ಪಾಧಕರ ವಿರುದ್ಧದ ಕಾರ್ಯಾಚರಣೆಯಲ್ಲಿ ಭಾಗಿಯಾಗಿ ಶೌರ್ಯ ಪ್ರಶಸ್ತಿ ಪಡೆದಿರುವ ಓರ್ವ ಯೋಧನಿಗೆ ಗೌರವ ಸಮರ್ಪಣೆ ನಡೆಯಲಿದೆ ಎಂದು ತಿಳಿಸಿದರು.
ಸಮರ್ಪಣೆ ಕಾರ್ಯಕ್ರಮಕ್ಕೆ ಸಾಂಸ್ಕøತಿಕ ಮೆರುಗು ನೀಡುವ ನಿಟ್ಟಿನಲ್ಲಿ 150ಕ್ಕೂ ಹೆಚ್ಚು ವೀಣಾ ವಾದನ ಕಲಾವಿದರನ್ನು ಒಂದೇ ವೇದಿಕೆಯಲ್ಲಿ ಸೇರಿಸುತ್ತಿರುವುದು ವಿಶೇಷವಾಗಿದೆ. ಈ ಹಿಂದೆ ಶಿವಮೊಗ್ಗದಲ್ಲಿ 108 ಜನ ವೀಣಾ ವಾದಕರು ಒಂದು ವೇದಿಕೆಯಲ್ಲಿ ಸೇರಿದ್ದರು. ಬೆಂಗಳೂರಿನಲ್ಲಿ 2 ಸಾವಿರ ಜನರ ಕಾರ್ಯಕ್ರಮ ನಡೆದಿತ್ತು. ಚಿತ್ರದುರ್ಗದಲ್ಲಿ 161 ಕಲಾವಿದರನ್ನು ಸೇರಿಸುತ್ತಿರುವುದು ಹೊಸ ಇತಿಹಾಸವಾಗಲಿದೆ ಎಂದರು.
ಖ್ಯಾತ ಮೃದಂಗ ವಾದಕರು, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಅಧ್ಯಕ್ಷರಾದ ಅನೂರು ಅನಂತಕೃಷ್ಣ ಶರ್ಮ ಮಾರ್ಗದರ್ಶನ ಮಾಡಲಿದ್ದಾರೆ. ಬೆಂಗಳೂರಿನ ವಿದುಷಿ ಜ್ಯೋತಿ ಚೇತನ್, ಶಿವಮೊಗ್ಗದ ಬಿ.ಕೆ.ವಿಜಯಲಕ್ಷ್ಮೀ, ದಾವಣಗೆರೆಯ ಶುಭಾ, ಉಡುಪಿ ಬಾರಕೂರಿನ ಶುಭಶ್ರೀ ಅಡಿಗ, ಬೆಂಗಳೂರಿನ ಸಿ.ಟಿ.ದಾಕ್ಷಾಯಿಣಿ ಹಾಗೂ ಪೀಪ್ತಿ ಎನ್ ಪ್ರಸಾದ್ ವೀಣಾ ವಾದನ ಕಾರ್ಯಕ್ರಮದ ನೇತೃತ್ವ ವಹಿಸಿಕೊಂಡಿದ್ದಾರೆ ಎಂದು ವಿವರಿಸಿದರು.
ಕಬೀರಾನಂದ ಮಠದ ಶ್ರೀ ಶಿವಲಿಂಗಾನಂದ ಸ್ವಾಮೀಜಿ, ಹೊಸದುರ್ಗ ಕುಂಚಿಟಿಗ ಮಠದ ಶ್ರೀ ಶಾಂತವೀರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ವಿಎಚ್‍ಪಿ ಕ್ಷೇತ್ರಿಯ ಸಂಘಟನಾ ಕಾರ್ಯದರ್ಶಿ ಕೇಶವ ಹೆಗಡೆ ಕಾರ್ಯಕ್ರಮ ಉದ್ಘಾಟಿಸುವರು. ಕೇಂದ್ರ ಸಚಿವ ಎ.ನಾರಾಯಣಸ್ವಾಮಿ, ಶಾಸಕ ಜಿ.ಎಚ್.ತಿಪ್ಪಾರೆಡ್ಡಿ, ಎಂಎಲ್ಸಿ ಕೆ.ಎಸ್.ನವೀನ್, ನಗರಸಭೆ ಅಧ್ಯಕ್ಷೆ ತಿಪ್ಪಮ್ಮ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಡಾ.ಕೆ.ಎಸ್.ಮುಕುಂದರಾವ್ ಅಧ್ಯಕ್ಷತೆ ವಹಿಸಲಿದ್ದು, ಯುವ ಬ್ರಿಗೇಡ್‍ನ ಚಕ್ರವರ್ತಿ ಸೂಲಿಬೆಲೆ ಮುಖ್ಯ ಭಾಷಣ ಮಾಡಲಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ ಡಾ.ಸಿದ್ಧಾರ್ಥ್ ಗುಂಡಾರ್ಪಿ, ಸಂಚಾಲಕ ಪ್ರಭಂಜನ್ ಇದ್ದರು.
ಗೋ ಪ್ರದರ್ಶನ ಮತ್ತು ಬಹುಮಾನ:
ಸಮರ್ಪಣೆ ಕಾರ್ಯಕ್ರಮದ ಅಂಗವಾಗಿ ಮೇ.28 ಶನಿವಾರ ಬೆಳಗ್ಗೆ 9 ರಿಂದ ದೇಸಿ ತಳಿಯ ಗೋವುಗಳ ಪ್ರದರ್ಶನ, ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ.
ಆಯ್ಕೆಯಾದ ಅತ್ಯುತ್ತಮ ಗೋವುಗಳಿಗೆ ಕ್ರಮವಾಗಿ 25 ಸಾವಿರ, 15 ಸಾವಿರ ಹಾಗೂ 10 ಸಾವಿರ ರೂ. ಬಹುಮಾನ ನೀಡಲಾಗುವುದು. ಪ್ರದರ್ಶನಕ್ಕೆ ಗೋವುಗಳನ್ನು ಕರೆತರುವವರಿಗೆ ಸಾಗಾಣಿಕೆ ವೆಚ್ಚವಾಗಿ 1 ಸಾವಿರ ರೂ. ನೀಡಲಾಗುವುದು. ನೀರು, ಮೇವು, ತಪಾಸಣೆ ಹಾಗೂ ಚಿಕಿತ್ಸೆಯ ವ್ಯವಸ್ಥೆಯನ್ನು ಉಚಿತವಾಗಿ ಮಾಡಲಾಗಿದೆ ಎಂದರು.
ಐತಿಹಾಸಿಕ ನಗರ ಚಿತ್ರದುರ್ಗದಲ್ಲಿ ದೊಡ್ಡ ಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತ್ತಿದೆ. ಮಳೆಯಿಂದ ತೊಂದರೆಯಾಗದಂತೆ ಕಾರ್ಯಕ್ರಮ ಸಂಘಟಿಸುತ್ತಿದ್ದು, ಚಿತ್ರದುರ್ಗದ ನಾಗರೀಕರು ಆಸ್ವಾಧಿಸಬೇಕು.
– ಡಾ.ಕೆ.ಎಸ್.ಮುಕುಂದರಾವ್, ಸ್ವಾಗತ ಸಮಿತಿ ಅಧ್ಯಕ್ಷರು.