ಚಿತ್ರದುರ್ಗ, (ಮೇ.16) : ಬಹುದಿನಗಳಿಂದ ಮೆದೇಹಳ್ಳಿ ಗ್ರಾಮದ ತಮಟಕಲ್ಲು ರಸ್ತೆಯಲ್ಲಿ ಡೇರೆ ಹೂಡಿ ವಾಸಿಸುತ್ತಿರುವ ಅಲೆಮಾರಿ ಜನಾಂಗಕ್ಕೆ ಸೇರಿದ ಸುಡುಗಾಡು ಸಿದ್ದರ ಕುಟುಂಬಗಳಿಗೆ ಶಾಶ್ವತ ನೆಲೆ ಕಲ್ಪಿಸುವ ನಿಟ್ಟಿನಲ್ಲಿ, ಚಿತ್ರದುರ್ಗ ಜಿಲ್ಲಾಡಳಿತ ಇಂಗಳದಾಳ್ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಎರಡು ಎಕರೆ ಜಮೀನು ಮಂಜೂರು ಮಾಡಿದೆ. ಈ ಜಾಗವನ್ನು ಬಯಲುಸೀಮೆ ಅಭಿವೃದ್ಧಿ ಮಂಡಳಿ ಅನುದಾನದಲ್ಲಿ ನಿವೇಶನಗಳಾಗಿ ಅಭಿವೃದ್ಧಿ ಪಡಿಸಲಾಗುತ್ತಿದೆ. ಶೀಘ್ರವಾಗಿ ಅತ್ಯಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿ, ಅಲೆಮಾರಿ ಕುಟುಂಬಗಳು ವಾಸಿಸಲು ಅನುಕೂಲ ಮಾಡಿಕೊಡಲಾಗುವುದು ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿದರು.
ನಗರದ ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿ ಕಚೇರಿಯಲ್ಲಿ ಸೋಮವಾರ ನಿವೇಶನ ಹಂಚಿಕೆ ಕುರಿತು ಮೆದೇಹಳ್ಳಿ ಹಾಗೂ ಇಂಗಳದಾಳ್ ಗ್ರಾಮ ಪಂಚಾಯಿತಿಗೆ ಸಂಬಂದಿಸಿದಂತೆ ಜರುಗಿದ
ಸಭೆಯಲ್ಲಿ ಅವರು ಮಾತನಾಡಿದರು.
ರಾಜ್ಯದಲ್ಲಿ ಪ್ರಥಮ ಬಾರಿಗೆ ಅಲೆಮಾರಿ ಜನಾಂಗದವರನ್ನು ಗುರುತಿಸಿ ಶಾಶ್ವತ ನೆಲೆ ಕಲ್ಪಿಸಲಾಗುತ್ತಿದ್ದು, ಒಟ್ಟು 58 ಕುಟುಂಬಗಳಿಗೆ ನಿವೇಶನ ಹಂಚಿಕೆ ಮಾಡಲಾಗುವುದು. ಖಾಸಗಿ ಜಾಗದಲ್ಲಿ ತಾತ್ಕಾಲಿಕವಾಗಿ ವಾಸಿಸುತ್ತಿರುವ ಸುಡುಗಾಡು ಸಿದ್ದರ ಕುಟುಂಬಗಳು15 ದಿನನದಲ್ಲಿ ಸರ್ಕಾರದಿಂದ ಮಂಜೂರು ಮಾಡಿರುವ ಜಾಗಕ್ಕೆ ಸ್ಥಳಾಂತರವಾಗಲಿದ್ದಾರೆ ಎಂದರು. ಅಧಿಕಾರಿಗಳು ಶೀಘ್ರವಾಗಿ ಲೇಔಟ್ ವಿನ್ಯಾಸವನ್ನು ಪೂರ್ಣಗೊಳಿಸಬೇಕು. ಸ್ಥಳಾಂತರಗೊಳ್ಳುವ ಕುಟುಂಬಗಳಿಗೆ ಕುಡಿಯುವ ನೀರಿನ ಸಲುವಾಗಿ ಎರಡು ಕೊಳವೆ ಬಾವಿಗಳನ್ನು ಕೊರೆಯವಂತೆ ಸಂಬಂದಪಟ್ಟ ಅಧಿಕಾರಿಗೆ ದೂರವಾಣಿ ಮೂಲಕ ಸೂಚನೆ ನೀಡಿದರು.
ಅಲೆಮಾರಿಗಳು ಸಮಾಜದ ಮುಖ್ಯವಾಹಿನಿಗೆ ಬರಬೇಕು. ಅಲೆಮಾರಿ ಜನಾಂಗದ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು. ಸರ್ಕಾರ ಉಚಿತ ಶಿಕ್ಷಣ ನೀಡುತ್ತಿದೆ. ಮಕ್ಕಳನ್ನು ಇಂಗಾಳದಾಳ್ ಶಾಲೆಗೆ ಸೇರಿಸಿ, ಇಂಗಳದಾಳು ಗ್ರಾಮದಲ್ಲಿ ಪಡಿತರ ವಿತರಣಾ ಕೇಂದ್ರದಲ್ಲಿ ಪಡಿತರ ವಿತರಿಸಲಾಗುವುದು. ಮಂಜೂರಾದ ಜಾಗದಲ್ಲಿ ತಾತ್ಕಾಲಿಕವಾಗಿ ವಾಸಿಸಿ. ವಸತಿ ಯೋಜನೆಯಡಿ ಮನೆಗಳನ್ನು ನಿರ್ಮಿಸಿ ಕೊಡಲಾಗುವುದು. ನಿವೇಶನ ಹಾಗೂ ಮನೆಗಳನ್ನು ನಿಷ್ಪಕ್ಷಪಾತವಾಗಿ ಮಂಜೂರಾತಿಯನ್ನು ಮಾಡಲಾಗುವುದು. ಅಧಿಕಾರಿಗಳು ಹಾಗೂ ಮಧ್ಯವರ್ತಿಗಳಿಗೆ ಹಣ ನೀಡಬೇಡಿ ಎಂದು ಶಾಸಕ ತಿಪ್ಪಾರೆಡ್ಡಿ ಸುಡುಗಾಡು ಸಿದ್ದ ಫಲಾನುಭವಿಗಳಿಗೆ ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ಬಯಲುಸೀಮೆ ಪ್ರಾದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಎನ್.ಇ.ಜೀವನಮೂರ್ತಿ, ಕಾರ್ಯದರ್ಶಿ ಡಾ.ಶ್ರೀಧರ ಭಿ.ಭಜಂತ್ರಿ, ತಾಲೂಕು ಪಂಚಾಯತಿ ವಸತಿ ಯೋಜನೆ ನೋಡಲ್ ಅಧಿಕಾರಿ ಲೋಕೇಶ್, ಮೆದೇಹಳ್ಳಿ ಗ್ರಾ.ಪಂ.ಅಧ್ಯಕ್ಷೆ ಭಾಗ್ಯಮ್ಮ, ಉಪಾಧ್ಯಕ್ಷ ಧನ್ಯಕುಮಾರ್, ಸದಸ್ಯರಾದ ತಿಮ್ಮಣ್ಣ, ಜಯರಾಮ್ ರೆಡ್ಡಿ, ರಮೇಶ್ ಮೂಕುರು, ಸುಲೋಚನಮ್ಮ, ಪ್ರಿಯದರ್ಶಿನಿ, ಮಮತ, ವನಜಾಕ್ಷಿ, ಪಂಚಾಯತಿ ಅಭಿವೃದ್ಧಿ ಅಧಿಕಾರಿ ಸಂತೋಷ್ ಕುಮಾರ್, ಇಂಗಳದಾಳ್ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ವಿದ್ಯಾಶ್ರೀ ಉಪಸ್ಥಿತರಿದ್ದರು.