ಚಿಕ್ಕಬಳ್ಳಾಪುರ: ಶ್ರೀ ಆದಿಚುಂಚನಗಿರಿ ಟ್ರಸ್ಟ್, ಬಾಲಗಂಗಾಧರನಾಥ ಸ್ವಾಮೀಜಿ ಕ್ಯಾಂಪಸ್ ನಲ್ಲಿ, ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರು ಏರ್ಪಡಿಸಿದ ಆರೋಗ್ಯ ಮೇಳಕ್ಕೆ ಮೊದಲ ದಿನವೇ 2 ಲಕ್ಷ ಮಂದಿ ಸೇರಿದ್ದರು. ಈ ಹಿನ್ನೆಲೆಯಲ್ಲಿ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ ಸಂಸ್ಥೆಯು ಇದು ಜಗತ್ತಿನ ಅತ್ಯಂತ ದೊಡ್ಡ ಆರೋಗ್ಯ ಮೇಳ ಎಂದು ಪ್ರಮಾಣ ಪತ್ರ ನೀಡಿತ್ತು. ಮೊದಲ ದಿನ ಮೇಳಕ್ಕೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಬಿ.ಎಲ್.ಸಂತೋಷ್ ಆಗಮಿಸಿ, ಈ ರೀತಿಯ ಪ್ರಯತ್ನವನ್ನು ಎಲ್ಲಾ ಜಿಲ್ಲೆಗಳಲ್ಲಿ ಮಾಡಬೇಕು ಎಂದು ಸಲಹೆ ನೀಡಿದ್ದರು.
ಮೇ 15, ಭಾನುವಾರದಂದು ಕೂಡ ಮೇಳದಲ್ಲಿ ಅನೇಕರು ವೈದ್ಯರಿಂದ ಆರೋಗ್ಯ ತಪಾಸಣೆ ಮಾಡಿಸಿಕೊಂಡರು. ಕಣ್ಣು, ಕಿವಿ, ದಂತ, ಚರ್ಮ, ಮೂಳೆ, ಹೃದಯ, ಶ್ವಾಸಕೋಶ ಸೇರಿದಂತೆ ಅನೇಕ ಪ್ರಕಾರದ ವೈದ್ಯಕೀಯ ತಪಾಸಣೆಯ ಉಚಿತ ಸೇವೆಯನ್ನು ಜನರು ಬಳಸಿಕೊಂಡರು.
ಭಾನುವಾರ ಮೇಳಕ್ಕೆ ಭೇಟಿ ನೀಡಿದ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಈವರೆಗೆ ಎಲ್ಲೂ ನಾನು ನೋಡಿರದ ಬೃಹತ್ ಆರೋಗ್ಯ ಮೇಳವಿದು. ಇಂತಹ ಯೋಜಿತ ಕಾರ್ಯವನ್ನು ಸಚಿವ ಡಾ.ಕೆ.ಸುಧಾಕರ್ ದೂರದೃಷ್ಟಿ ಇಟ್ಟುಕೊಂಡು ಮಾಡಿದ್ದಾರೆ. ತಪಾಸಣೆಯ ಜೊತೆಗೆ ಚಿಕಿತ್ಸೆಯೂ ಇಲ್ಲಿ ಲಭ್ಯವಿದೆ. ಒಂದೇ ಕ್ಯಾಂಪಸ್ ನಲ್ಲಿ ತಪಾಸಣೆ, ಚಿಕಿತ್ಸೆ, ಆಯುಷ್ಮಾನ್ ಕಾರ್ಡ್ ಮಾಡಿಕೊಡುವುದು ಸೇರಿದಂತೆ ಹಲವಾರು ಸೇವೆಗಳನ್ನು ನೀಡಲಾಗುತ್ತಿದೆ. ಇಂತಹ ಉತ್ತಮ ಕಾರ್ಯವನ್ನು ಕಾಂಗ್ರೆಸ್‍ನವರು ನೋಡಿ ಕಲಿಯಬೇಕಿದೆ. ಇದೇ ರೀತಿ ಇನ್ನಷ್ಟು ಜಿಲ್ಲೆಗಳಲ್ಲಿ ಈ ಆರೋಗ್ಯ ಮೇಳ ನಡೆಯಲಿ ಎಂದು ಸಲಹೆ ನೀಡುತ್ತೇನೆ. ಈ ಮೇಳದಲ್ಲಿ ಪಾಲ್ಗೊಂಡ ವೈದ್ಯರು, ಆರೋಗ್ಯ ಸಿಬ್ಬಂದಿಗೆ ಧನ್ಯವಾದ ತಿಳಿಸುತ್ತೇನೆ ಎಂದರು.
ಸಚಿವ ಡಾ.ಕೆ.ಸುಧಾಕರ್ ಮಾತನಾಡಿ, ಶನಿವಾರ, ಭಾನುವಾರದ ರಜಾದಿನಗಳನ್ನು ಆರಿಸಿಕೊಂಡು ಆರೋಗ್ಯ ಮೇಳ ಮಾಡಲಾಗಿದೆ. ಜನರು ಹೆಚ್ಚು ವಿಶ್ವಾಸದಿಂದ ಉತ್ಸಾಹದಿಂದ ಮೇಳಕ್ಕೆ ಬಂದು ಸೇವೆ ಪಡೆದಿದ್ದಾರೆ. ವೈದ್ಯರು, ಕಾರ್ಯಕರ್ತರು ಸಮಯ ಮೀರಿದ್ದರೂ ಕೆಲಸ ಮಾಡಿದ್ದಾರೆ. ಅವರಿಗೆ ವಂದನೆಗಳನ್ನು ತಿಳಿಸುತ್ತೇನೆ. ರಾಜ್ಯ ಸರ್ಕಾರದಿಂದಲೇ ಈ ರೀತಿಯ ಆರೋಗ್ಯ ಮೇಳವನ್ನು ಪ್ರತಿ ಜಿಲ್ಲೆಯಲ್ಲಿ ನಡೆಸಲು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುವುದು. ಇದನ್ನು ಜನಾಂದೋಲನದಂತೆ ಮಾಡಲಾಗುವುದು ಎಂದರು.
ಗ್ರಾಮೀಣ ಭಾಗಗಳಲ್ಲಿ ಆರೋಗ್ಯದ ಬಗ್ಗೆ ಜಾಗೃತಿ ಕಡಿಮೆ ಇದೆ. ಎರಡು, ಮೂರನೇ ಹಂತದ ಆಸ್ಪತ್ರೆಗಳು ಎಲ್ಲಾ ಕಡೆ ಇಲ್ಲ. ಚಿಕ್ಕಬಳ್ಳಾಪುರದಲ್ಲಿ ಹೊಸ ಮೆಡಿಕಲ್ ಕಾಲೇಜು ಬರಲು 10-12 ತಿಂಗಳು ಬೇಕಾಗಬಹುದು. ಈ ಭಾಗದಲ್ಲಿ ಮೆಡಿಕಲ್ ಕಾಲೇಜು ನಿರ್ಮಾಣಕ್ಕಾಗಿ ನನ್ನದೇ ರೀತಿಯಲ್ಲಿ ಹೋರಾಟ ಮಾಡಿದ್ದೇನೆ. ಈವರೆಗೆ ಜನರು ಬೆಂಗಳೂರಿನಂತಹ ನಗರಗಳಿಗೆ ಹೋಗಿ ತಪಾಸಣೆ, ಚಿಕಿತ್ಸೆ ಪಡೆಯುತ್ತಿದ್ದರು ಎಂದರು.