ಬೆಂಗಳೂರು: ಈ ಮುದ್ದು ಕಂದಮ್ಮನ ಫೋಟೋ ನೋಡುವುದಕ್ಕೇನೆ ಕರುಳು ಹಿಂಡಿ ಬರುತ್ತಿದೆ. ತುಂಬಾ ಚಿಕ್ಕ ವಯಸ್ಸು.. ಬರೀ ಮೂರು ವರ್ಷ.. ಆದರೆ ಇಷ್ಟು ಚಿಕ್ಕ ವಯಸ್ಸಿಗೇನೆ ಮೂಳೆ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಮಗು ಗೌರಿ ಚಿಜಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ.
ಗೌರಿ ಮೈಸೂರಿನ ಚಾಮುಂಡೇಶ್ಚರಿ ಕ್ಷೇತ್ರದ ಶಾಸಕ ಜಿಟಿ ದೇವೇಗೌಡ ಅವರ ಮೊಮ್ಮಗಳು. ಜಿಡಿ ಹರೀಶ್ ಗೌಡ ಪುತ್ರಿ ಗೌರಿ ಕಳೆದ 6 ತಿಂಗಳಿನಿಂದ ಬೋನ್ ಕ್ಯಾನ್ಸರ್ ಗೆ ಒಳಗಾಗಿದ್ದಳು. ಬೆಂಗಳೂರಿನ ನಾರಾಯಣ ಹೃದಯಾಲಯದಲ್ಲಿ ಚಿಕಿತ್ಸೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಸಾವನ್ನಪ್ಪಿದ್ದಾಳೆ.
ಜಿಟಿಡಿ ಮೊಮ್ಮಗಳ ನಿಧನಕ್ಕೆ ಕೇಳಿದವರು ಶಾಕ್ ಆಗಿದ್ದಾರೆ. ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಹೆಚ್ ಡಿ ಕುಮಾರಸ್ವಾಮಿ ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ. ಮಾಜಿ ಸಚಿವರು, ಆತ್ಮೀಯರು ಆದ ಜಿ.ಟಿ ದೇವೇಗೌಡರ ಮೊಮ್ಮಗಳು ಗೌರಿ ಸಾವಿನ ಸುದ್ದಿ ತಿಳಿದು ಅತೀವ ಸಂಕಟವಾಯಿತು. ಬದುಕಿ ಬಾಳಬೇಕಿದ್ದ ಎಳೆಯ ಕಂದಮ್ಮನ ಅಗಲಿಕೆಯಿಂದ ನೊಂದಿರುವ ಜಿ.ಟಿ ದೇವೇಗೌಡರ ಕುಟುಂಬದ ಶೋಕದಲ್ಲಿ ನಾನೂ ಭಾಗಿ. ಮೃತ ಗೌರಿಯ ಆತ್ಮಕ್ಕೆ ಚಿರಶಾಂತಿ ಸಿಗಲಿ, ಮಗುವಿನ ಅಗಲಿಕೆಯ ದುಃಖ ಭರಿಸುವ ಶಕ್ತಿಯನ್ನು ಜಿ.ಟಿ ದೇವೇಗೌಡರು ಹಾಗೂ ಆಕೆಯ ತಂದೆ, ತಾಯಿಗೆ ದೇವರು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಸಿದ್ದರಾಮಯ್ಯ ಅವರು ಟ್ವೀಟ್ ಮಾಡಿದ್ದಾರೆ.
ಮಾಜಿ ಮಂತ್ರಿಗಳಾದ ಶ್ರೀ ಜಿ.ಟಿ.ದೇವೇಗೌಡರ ಮೊಮ್ಮಗಳು, ಮೂರು ವರ್ಷದ ಹಸುಗೂಸು ಗೌರಿ ಅನಾರೋಗ್ಯದಿಂದ ಅಸುನೀಗಿರುವ ಸುದ್ದಿ ಕೇಳಿ ದಿಗ್ಭ್ರಮೆಯಾಯಿತು. ಮುದ್ದು ಕಂದಳ ಅಗಲಿಕೆ ನನಗೆ ಬಹಳ ದುಃಖ ಉಂಟು ಮಾಡಿದೆ. ಆ ಮಗುವಿನ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ಈ ದುಃಖವನ್ನು ಭರಿಸುವ ಶಕ್ತಿಯನ್ನು ಶ್ರೀ ಜಿ.ಟಿ.ದೇವೇಗೌಡರು, ಅವರ ಪುತ್ರ ಹರೀಶ್ ಮತ್ತು ಕುಟುಂಬಕ್ಕೆ ಆ ಭಗವಂತ ದಯಪಾಲಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.
ಶಾಸಕರಾದ ಶ್ರೀ @GTDevegowda ಅವರ 3 ವರ್ಷದ ಮೊಮ್ಮಗಳು ಗೌರಿಯ ನಿಧನದ ಸುದ್ದಿ ಕೇಳಿ ನಿಜಕ್ಕೂ ಮನಸ್ಸಿಗೆ ನೋವುಂಟಾಯಿತು. ಬದುಕು ಕೆಲವೊಮ್ಮೆ ತುಂಬಾ ಅನಿಶ್ಚಿತ ಮತ್ತು ಕ್ರೂರ. ಆಕೆಯ ಆತ್ಮಕ್ಕೆ ಶಾಂತಿ ಸಿಗಲಿ. ಈ ನೋವನ್ನು ಸಹಿಸುವ ಶಕ್ತಿಯನ್ನು ದೇವರು ಆ ಕುಟುಂಬಕ್ಕೆ ಕೊಡಲಿ ಎಂದು ಡಿಕೆ ಶಿವಕುಮಾರ್ ಸಂತಾಪ ಸೂಚಿಸಿದ್ದಾರೆ.